ಸರ್ಕಾರಿ ಕಾಲೇಜುಗಳಿಗೆ ಭಾರೀ ಬೇಡಿಕೆ: ಸೀಟುಗಳ ಮಿತಿಯಿಲ್ಲ, ಶುಲ್ಕದ ಹೊರೆಯೂ ಇಲ್ಲ

ಶುಕ್ರವಾರ, ಮೇ 24, 2019
30 °C

ಸರ್ಕಾರಿ ಕಾಲೇಜುಗಳಿಗೆ ಭಾರೀ ಬೇಡಿಕೆ: ಸೀಟುಗಳ ಮಿತಿಯಿಲ್ಲ, ಶುಲ್ಕದ ಹೊರೆಯೂ ಇಲ್ಲ

Published:
Updated:
Prajavani

ಬೆಂಗಳೂರು: ಪಿಯುಸಿ ಫಲಿತಾಂಶ ಹೊರಬಿದ್ದಿರುವುದರಿಂದ ನಗರದ ಖಾಸಗಿ ಕಾಲೇಜುಗಳು ಮಾತ್ರವಲ್ಲದೆ, ಸರ್ಕಾರಿ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆಯಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಮಹಾರಾಣಿ ಕಲೆ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್‌ ಮಹಿಳಾ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು, ಮಹಾರಾಣಿ ಗೃಹವಿಜ್ಞಾನ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ತ), ಆರ್‌ಸಿ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು, ರಾಜಾಜಿನಗರ ಮತ್ತು ವಿಜಯನಗರ ಸರ್ಕಾರಿ ಕಾಲೇಜುಗಳಿಗೂ ವಿದ್ಯಾರ್ಥಿಗಳು ಆಸಕ್ತಿ ತೋರಿದ್ದಾರೆ.

ಈ ಬಾರಿ ದಾಖಲೆ ಪ್ರಮಾಣದಲ್ಲಿ ಫಲಿತಾಂಶ ಬಂದಿರುವುದರಿಂದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಪ್ರವೇಶಕ್ಕೆ ‘ಕಟ್‌ ಆಫ್‌’ ಅಂಕವನ್ನು ಶೇ 85ಕ್ಕೆ ನಿಗದಿ ಮಾಡಿವೆ. ಹೀಗಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಸೀಟು ಗಿಟ್ಟಿಸುವುದು ಗಗನ ಕುಸುಮವಾಗಿದೆ. ಮ್ಯಾನೇಜ್‌ಮೆಂಟ್‌ ಕೋಟಾದಡಿ ವಿಪರೀತ ಡೊನೇಷನ್‌ಗೆ ಬೇಡಿಕೆ ಇಡುವ ಸಾಧ್ಯತೆ ಇರುವ ಕಾರಣ, ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳತ್ತ ಮುಖ ಮಾಡಿದ್ದಾರೆ.

ಮಹಾರಾಣಿ ಕಲೆ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು (ಸ್ವತಂತ್ರ), ಆರ್‌.ಸಿ.ಕಾಲೇಜುಗಳು ‘ನ್ಯಾಕ್‌’ ರೇಟಿಂಗ್‌ನಲ್ಲಿ ಉತ್ತಮ ಸ್ಥಾನಗಳನ್ನು ಪಡೆದಿವೆ. ಈ ಕಾಲೇಜುಗಳಲ್ಲೂ ಉದ್ಯೋಗದ ಪ್ಲೇಸ್‌ಮೆಂಟ್‌ಗಾಗಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕಂಪನಿಗಳು ಬರುತ್ತಿವೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗವೂ ಸಿಗುತ್ತಿದೆ ಎಂದು ಈ ಕಾಲೇಜುಗಳ ಪ್ರಾಂಶುಪಾಲರು ‘ಪ್ರಜಾವಾಣಿ’ಗೆ ತಿಳಿಸಿದರು.

ಶುಲ್ಕ ಕಡಿಮೆ, ಶಿಷ್ಯ ವೇತನವೂ ಸಿಗುತ್ತದೆ: ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಕಡಿಮೆ. ಶಿಷ್ಯ ವೇತನವೂ ಸಿಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬೋಧನಾ ಶುಲ್ಕದ ವಿನಾಯ್ತಿ ನೀಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶಿಷ್ಯ ವೇತನಗಳು ಸಿಗುತ್ತವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಪ್ರಥಮ ದರ್ಜೆ ಅಂಕ ಪಡೆದರೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಹಣವನ್ನು ನೇರವಾಗಿ ಅವರ ಖಾತೆಗೆ ಹಾಕಲಾಗುತ್ತದೆ ಎಂದು ಮಹಾರಾಣಿ ಕಲೆ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎನ್‌.ಲೋಕಪ್ಪಗೌಡ ತಿಳಿಸಿದರು.

ಕೆಲವು ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹10 ಸಾವಿರದಿಂದ ₹20 ಸಾವಿರದವರೆಗೆ ಶಿಷ್ಯ ವೇತನ ಸಿಗುತ್ತದೆ. ಸಾಂಪ್ರದಾಯಿಕ ಕೋರ್ಸ್‌ಗಳಲ್ಲದೇ, ವಿಶೇಷ ಕೋರ್ಸ್‌ಗಳೂ ಇವೆ. ಅಲ್ಲದೆ, ಸ್ನಾತಕೋತ್ತರ ಕೋರ್ಸ್‌ಗಳೂ ಇವೆ. ಕಳೆದ ವರ್ಷ ವಿವಿಧ ಕೋರ್ಸ್‌ಗಳಿಗೆ ಸುಮಾರು ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು ಎಂದರು.

ಆರ್‌ಸಿ ಕಾಲೇಜಿಗೆ ಭಾರೀ ಬೇಡಿಕೆ: ಆರ್‌ಸಿ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಸೋಮವಾರ ಒಂದೇ ದಿನ 110 ಅರ್ಜಿಗಳನ್ನು ನೀಡಲಾಗಿದೆ. ಈ ವರ್ಷ ವಿವಿಧ ಕೋರ್ಸ್‌ಗಳಿಗೆ 3000 ಅರ್ಜಿಗಳಿಗೆ ಬೇಡಿಕೆ ಬರುವ ಸಾಧ್ಯತೆ ಇದೆ ಎಂದು ಪ್ರಾಂಶುಪಾಲ ಡಾ.ಸೈಯದ್ ಯೂಸೂಫ್‌ ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದವರು ಮಾತ್ರವಲ್ಲದೆ ಎಲ್ಲ ವರ್ಗದ ವಿದ್ಯಾರ್ಥಿಗಳೂ ಪ್ರವೇಶ ಪಡೆಯುತ್ತಾರೆ. ಬಿ.ಕಾಂನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರ್‍ಯಾಂಕ್‌ ಕೂಡ ಪಡೆದಿದ್ದಾರೆ ಎಂದು ಹೇಳಿದರು.

ನಮ್ಮ ಕಾಲೇಜಿನಲ್ಲಿ ಕಟ್ಟಡದ ಕೊರತೆ ಇದೆ. ಆದರೆ, ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ವರ್ಷವೂ ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗುತ್ತಿದ್ದಾರೆ. ಬ್ಯುಟಿಷಿಯನ್‌ ಕೋರ್ಸ್‌, ಜಿಎಸ್‌ಟಿ ಪ್ರಕ್ರಿಯೆ, ಆನ್‌ಲೈನ್‌ ಟ್ರೇಡಿಂಗ್‌ ಕುರಿತಂತೆ ತರಬೇತಿಯನ್ನು ನೀಡಲಾಗುತ್ತಿದೆ. 60 ಕಂಪ್ಯೂಟರ್‌ಗಳ ಸುಸಜ್ಜಿತ ಲ್ಯಾಬ್‌ ಇದೆ ಎಂದು ಮಲ್ಲೇಶ್ವರದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಕೋಮಲಾ ಹೇಳಿದರು.

ವಾಣಿಜ್ಯ– ವಿಜ್ಞಾನ ವಿಷಯಕ್ಕೆ ಹೆಚ್ಚು ಬೇಡಿಕೆ
ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಸೀಟು ಸಿಗುವ ಸಾಧ್ಯತೆ ಕಡಿಮೆ ಇರುವ ಮತ್ತು ಶುಲ್ಕ ಪ್ರಮಾಣವೂ ಹೆಚ್ಚಾಗಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳ ಮೂಲಕ ತಮ್ಮ ಭವಿಷ್ಯ ಕಂಡುಕೊಳ್ಳುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

ಕೆಲವು ಖಾಸಗಿ ಕಾಲೇಜುಗಳಲ್ಲಿ ವರ್ಷಕ್ಕೆ ₹ 1 ಲಕ್ಷದವರೆಗೂ ಶುಲ್ಕ ಮತ್ತಿತರ ಬಾಬ್ತಿನಲ್ಲಿ ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಾರೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಈ ಶುಲ್ಕ ದುಬಾರಿ ಆಗುವುದರಿಂದ ನಗರದ ಉತ್ತಮ ಗುಣಮಟ್ಟದ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಪದವಿಯಲ್ಲೂ ಉತ್ತಮ ಫಲಿತಾಂಶ ಪಡೆಯುತ್ತಾರೆ ಎಂದು ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !