ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಏರಿ ಗ್ರಾ.ಪಂ. ಉಪಾಧ್ಯಕ್ಷರ ಪ್ರತಿಭಟನೆ

ಶೌಚಾಲಯ ನಿರ್ಮಾಣ ಕಾಮಗಾರಿಗೆ ಹಣ ಬಿಡುಗಡೆಗೆ ಮಾಡಲು ಆಗ್ರಹ
Last Updated 25 ಮಾರ್ಚ್ 2019, 18:43 IST
ಅಕ್ಷರ ಗಾತ್ರ

ಹೊಸನಗರ: ಶೌಚಾಲಯದ ಫಲಾನುಭವಿಗೆ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ತಾಲ್ಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಸೋಮವಾರ ಮರ ಏರಿ ಕುಳಿತು ಪ್ರತಿಭಟನೆ ನಡೆಸಿದರು.

ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 29 ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ ಕಾಮಗಾರಿ ಮಂಜೂರಾಗಿದೆ. ಕೆಲವರಿಗೆ ಹಣ ಬಿಡುಗಡೆ ಮಾಡಲಾಗಿದೆ. ಪಾರ್ಶ್ವವಾಯು ಪೀಡಿತರಾಗಿರುವ ಮರಿಯಾ ಒಳಗೊಂಡಂತೆ ಬಡ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೇ ಕಚೇರಿ ಅಲೆಯುವಂತೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕರುಣಾಕರ ಶೆಟ್ಟಿ, ಬೆಳಿಗ್ಗೆ 10.30ರ ಹೊತ್ತಿಗೆ ಗ್ರಾಮ ಪಂಚಾಯಿತಿ ಎದುರಿನ ಮರ ಏರಿ ಕುಳಿತರು.

ಹಣ ನೀಡಿದ ಕೆಲವು ಫಲಾನುಭವಿಗಳಿಗಷ್ಟೇ ಶೌಚಾಲಯದ ಅನುದಾನ ಬಿಡುಗಡೆ ಮಾಡಲಾಗಿದೆ. ಬಡವರಿಗೆ ನೀಡಿಲ್ಲ. ಇಂತಹ ತಾರತಮ್ಯ ಹೋಗಲಾಡಿಸಬೇಕು. ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದ ಬಗ್ಗೆ ಅವರ ಬ್ಯಾಂಕ್ ಪಾಸ್‌ಬುಕ್ ತೋರಿಸುವವರೆಗೆ ಮರದಿಂದ ಇಳಿಯುವುದಿಲ್ಲ. ಒಂದು ವಾರ ಆದರೂ ಮರದ ಮೇಲೆಯೇ ಇರುವುದಾಗಿ ಪಟ್ಟು ಹಿಡಿದರು.

ಸುಮಾರು 5 ಗಂಟೆಗಳ ಕಾಲ ಮರ ಏರಿದ ಉಪಾಧ್ಯಕ್ಷ ಹಾಗೂ ಮರದ ಕೆಳಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮಚಂದ್ರ ಭಟ್, ಪಿಡಿಒ ವಿಶ್ವನಾಥ ನಡುವೆ ಮಾತುಕತೆ, ಚರ್ಚೆ, ಸಂಧಾನ ನಡೆಯಿತು. ಪಿಡಿಒ ತಮ್ಮ ತಪ್ಪನ್ನು ಒಪ್ಪಿಕೊಂಡು, ಪಾರ್ಶ್ವವಾಯು ಪೀಡಿತ ಮರಿಯಾ ಅವರಿಗೆ ₹ 12 ಸಾವಿರ ನೀಡಿದ ಮೇಲೆಯೇ ಮಧ್ಯಾಹ್ನ 3.30ರ ಹೊತ್ತಿಗೆ ಕರುಣಾಕರ ಶೆಟ್ಟಿ ಕೆಳಗಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT