ಜಿಲ್ಲಾ ಮಟ್ಟದ ಸಿಬ್ಬಂದಿಗೆ ಎದುರಾದ ಸಂಕಷ್ಟ

7
ಅ.2ರಿಂದ ನೂತನ ಜಿಲ್ಲಾ ಆಡಳಿತ ಕೇಂದ್ರ ಕಾರ್ಯ ನಿರ್ವಹಣೆ ?

ಜಿಲ್ಲಾ ಮಟ್ಟದ ಸಿಬ್ಬಂದಿಗೆ ಎದುರಾದ ಸಂಕಷ್ಟ

Published:
Updated:
Deccan Herald

ದೇವನಹಳ್ಳಿ: ಚಪ್ಪರದಕಲ್ಲು ಬಳಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾಡಳಿತ ಕೇಂದ್ರ ಅ.2ರಿಂದ ಬಹುತೇಕ ಕಾರ್ಯನಿರ್ವಹಿಸುವ ಸಾಧ್ಯತೆ ಇದ್ದು, ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.

ಪ್ರಸ್ತುತ ಬೆಂಗಳೂರು ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿ ಇರುವ ಜಿಲ್ಲಾಡಳಿತ ಕಚೇರಿ ಸೇರಿದಂತೆ ಒಟ್ಟು 37ಇಲಾಖೆಗಳು ನೂತನ ಜಿಲ್ಲಾಡಳಿತ ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿವೆ.

ಇದರಿಂದಾಗಿ ಹಲವು ವರ್ಷಗಳಿಂದ ಇಲ್ಲಿನ ರೈತರ ಅಲೆದಾಟ ತಪ್ಪಲಿದೆ. ₹43 ಕೋಟಿ ವೆಚ್ಚದ ಸುಮಾರು 1.75ಲಕ್ಷ ಚದರ ಅಡಿ ವಿಸ್ತೀರ್ಣ ಈ ಕಟ್ಟಡ ಕಾಮಗಾರಿ 2016ರಿಂದ ಆರಂಭಗೊಂಡು ಅಪೂರ್ಣ ಸ್ಥಿತಿಯಲ್ಲಿದ್ದಾಗಲೇ ತರಾತುರಿಯಲ್ಲಿ ಉದ್ಘಾಟನೆಗೊಂಡಿತ್ತು.

ಎಲ್ಲ ಇಲಾಖೆಯಗಳೂ ತಮ್ಮ ಕಚೇರಿ ಕಾರ್ಯನಿರ್ವಹಣೆಗಾಗಿ ಅನುಕೂಲಕರ ರೀತಿಯಲ್ಲಿ ಸಿದ್ಧ ಕಾರ್ಯ ಭರದಿಂದ ಸಾಗಿದೆ. ಈ ಇಲಾಖೆಗಳಲ್ಲಿ ಅಂದಾಜು 750ರಿಂದ 800 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಲ್ಲ ಸಿಬ್ಬಂದಿಯೂ ಬೆಂಗಳೂರು ಮಹಾನಗರದಲ್ಲಿಯೇ ವಾಸವಿದ್ದಾರೆ. ಕಟ್ಟಡ ಉದ್ಘಾಟನೆ ಮತ್ತು ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ನಂತರ ವರ್ಗಾವಣೆಗಾಗಿ ಸಾಕಷ್ಟು ಲಾಭಿ ಆರಂಭವಾಗಿದೆ. ಈಗಾಗಲೇ 60ಕ್ಕೂ ಹೆಚ್ಚು ಸಿಬ್ಬಂದಿ ವರ್ಗಾವಣೆಯಾಗಿದ್ದಾರೆ ಎಂಬುದು ವಿವಿಧ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮನೆ ಬಾಡಿಗೆ ಭತ್ಯೆ, ಇತರೆ ಸೌಲಭ್ಯ ಪಡೆಯುತ್ತಿರುವ ತಿಂಗಳ ವೇತನದಲ್ಲಿ ಶೇ15ರಷ್ಟು ಕಡಿತವಾಗಲಿದೆ. ನಗರದ ಪ್ರದೇಶದಲ್ಲಿ ಪ್ರಸ್ತುತ ಶೇ30ರಷ್ಟು ಭತ್ಯೆ ಇದೆ. ದೇವನಹಳ್ಳಿ ತಾಲ್ಲೂಕಿಗೆ ಸ್ಥಳಾಂತರಗೊಂಡರೆ ಬಾಡಿಗೆ, ಮಕ್ಕಳಿಗೆ ಶಿಕ್ಷಣ ಎಡವಟ್ಟು ಆಗುವ ಸಾಧ್ಯತೆ ಇದೆ ಎಂದು ಹೆಸರ ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.

ಹೊಸ ಜಿಲ್ಲಾಡಳಿತ ಕೇಂದ್ರದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಸಿಬ್ಬಂದಿಗೆ ಉಪಹಾರ ಕೇಂದ್ರವಿಲ್ಲ. ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಯಿಂದ ಸಕಾಲದಲ್ಲಿ ಪ್ರಯಾಣಕ್ಕೆ ಬಸ್‌ ಸೌಕರ್ಯವಿಲ್ಲ ಎಂದು ಜಿಲ್ಲಾ ನೋಂದಣಿ ಇಲಾಖೆ ಸಿಬ್ಬಂದಿ ರಮೇಶ್‌ ತಿಳಿಸಿದರು.

ಬೆಂಗಳೂರು ನಗರದಿಂದ ನೇರವಾಗಿ ಜಿಲ್ಲಾಡಳಿತ ಕಚೇರಿಗೆ ಬಸ್‌ ವ್ಯವಸ್ಥೆಯಾಗಿಲ್ಲ. ದೇವನಹಳ್ಳಿ ಅಥವಾ ದೊಡ್ಡಬಳ್ಳಾಪುರ ಮಾರ್ಗವಾಗಿ ಬರಬೇಕು. ಬೆಳಿಗ್ಗೆ 7–10 ಮತ್ತು ಸಂಜೆ 5–6 ಗಂಟೆಗೆ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಸಿಬ್ಬಂದಿಗೆ ಅನುಕೂಲವಾಗಿದೆ.

ಸತತ ಹೋರಾಟದ ಫಲವಾಗಿ ಜಿಲ್ಲಾ ಆಡಳಿತ ಕಚೇರಿ ನಿರ್ಮಾಣವಾಗಿ ಬೆಂಗಳೂರು ನಗರದಿಂದ ಸ್ಥಳಾಂತರಗೊಳ್ಳತ್ತಿರುವುದು ಸ್ಥಳೀಯರಿಗೆ ಅನುಕೂಲ. ಆರಂಭದಲ್ಲಿ ಸಣ್ಣ ಪುಟ್ಟ ತೊಂದರೆ ಸಹಜ. ನಂತರ ಸರಿ ಹೋಗಲಿದೆ ಎನ್ನುತ್ತಾರೆ ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್.ವೀರಣ್ಣ.

ಜಿಲ್ಲಾಡಳಿತ ಕಚೇರಿ ಸ್ಥಳಾಂತರ ಅಗುವುದು ಖಚಿತ. ಬಸ್ ವ್ಯವಸ್ಥೆ ಬಗ್ಗೆ ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಮಹಾನಗರ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !