ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಫಲಕದಲ್ಲಿ ಬಸ್‌ ಮಾಹಿತಿ

Last Updated 20 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು:ಬಿಎಂಟಿಸಿ ಬಸ್‌ಗಳ ಸಂಚಾರದ ವೇಳಾಪಟ್ಟಿಇನ್ನು ಆಯಾ ನಿಲ್ದಾಣಗಳಲ್ಲಿ ಮೂಡಿಬರಲಿದೆ. ಈಗಾಗಲೇ ಇಂಥ ಫಲಕಗಳ ಅಳವಡಿಕೆಯನ್ನು ಆರಂಭಿಸಿದ್ದು ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗವು ಇದರ ಹೊಣೆಯನ್ನು ವಹಿಸಿಕೊಂಡಿದೆ.

ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಈಗಾಗಲೇ ಇಂಥ ಫಲಕವನ್ನು ಅಳವಡಿಸಲಾಗಿದೆ. ಅದರ ಪರೀಕ್ಷೆ ನಡೆಯುತ್ತಿದೆ. ವಿಮಾನ ನಿಲ್ದಾಣಗಳಿಗೆ ಹೋಗುವ ಬಸ್‌ಗಳ ಸಂಚಾರ ವೇಳಾಪಟ್ಟಿ ಈ ಫಲಕದಲ್ಲಿ ಮೂಡಿಬರುತ್ತಿದೆ.

ಈಗಾಗಲೇ ಮೈಸೂರು ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿಯು ಡಿಜಿಟಲ್‌ ಫಲಕ ಅಳವಡಿಸಿದೆ. ಅದೇ ಮಾದರಿಯಲ್ಲಿ ಇಲ್ಲಿ ಅಳವಡಿಸಲಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದರು.

‘ಡಿಜಿಟಲ್‌ ಮಾಹಿತಿ ಫಲಕಗಳು ಈಗಾಗಲೇ ಇವೆ. ಇನ್ನಷ್ಟು ನಿಲ್ದಾಣಗಳಿಗೆ ಅವುಗಳನ್ನು ವಿಸ್ತರಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ವಿಭಾಗದವರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

ಈ ಸಂಬಂಧ ಬಿಬಿಎಂಪಿ ಹಾಗೂ ಬಿಎಂಟಿಸಿ ನಗರದ 195 ಬಸ್‌ ಶೆಲ್ಟರ್‌ಗಳ ಸಮೀಕ್ಷೆ ನಡೆಸಿದೆ. ನಗರದ ಎಲ್ಲ 1,560 ನಿಲ್ದಾಣಗಳಲ್ಲಿ ಹಂತಹಂತವಾಗಿ ಈ ಫಲಕಗಳನ್ನು ಬಿಎಂಟಿಸಿ ಅಳವಡಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

ಹೇಗೆ ಕೆಲಸ ಮಾಡುತ್ತದೆ?: ಮಂಜುನಾಥ ಪ್ರಸಾದ್‌ ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಮೈಸೂರಿನಲ್ಲಿ ಅಳವಡಿಸಿದ್ದ ಇದೇ ವ್ಯವಸ್ಥೆಯ ಕುರಿತು ವಿವರ ನೀಡಿದರು. ‘ನಿಗಮವು ಚತುರ ಸಾರಿಗೆ ವ್ಯವಸ್ಥೆಯನ್ನು (ಇಂಟಲಿಜೆನ್ಸ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಂ) ಜಾರಿಗೆ ತಂದಿದೆ. ಪ್ರತಿ ವಾಹನಕ್ಕೆ ಜಿಪಿಎಸ್‌ ಅಳವಡಿಸಲಾಗಿದೆ. ಜಿಪಿಎಸ್‌ ಸಾಧನವು ಉಪಗ್ರಹದ ನೆರವಿನಿಂದ ವಾಹನ ಸಂಚರಿಸುವ ಪ್ರದೇಶದ ಮಾಹಿತಿಯನ್ನು ನಿಯಂತ್ರಣ ಕೇಂದ್ರದ ಕಂಪ್ಯೂಟರ್‌ಗಳಿಗೆ ರವಾನಿಸುತ್ತದೆ. ಇಲ್ಲಿ ಆ ಮಾಹಿತಿಯ ಆಧಾರದಲ್ಲಿ ಬಸ್‌ ಮುಂದಿನ ನಿಲ್ದಾಣವನ್ನು ಯಾವ ವೇಳೆಯಲ್ಲಿ ತಲುಪಲಿದೆ ಎಂಬ ಲೆಕ್ಕಾಚಾರ ಹಾಕಲಾಗುತ್ತದೆ. ಈ ಸಮಯವನ್ನು ಆಯಾ ನಿಲ್ದಾಣಗಳಲ್ಲಿರುವ ಮಾಹಿತಿ ಫಲಕದಲ್ಲಿ ಮೂಡಿಸಲಾಗುತ್ತದೆ. ಇದೇ ವ್ಯವಸ್ಥೆಯನ್ನು ಈಗ ಬಿಎಂಟಿಸಿ ಅಳವಡಿಸಲು ಹೊರಟಿದೆ’ ಎಂದು ವಿವರಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಬಸ್‌ ಶೆಲ್ಟರ್‌ಗಳಲ್ಲಿ ಇಂಥ ಫಲಕ ಅಳವಡಿಸಲು ಅವಕಾಶ ಇರುವಂತೆ ನೋಡಿಕೊಳ್ಳಬೇಕು ಎಂದು ಮೊದಲೇ ಷರತ್ತು ವಿಧಿಸಿದ್ದೇವೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಏನೇನು ಇರಲಿದೆ?: ಈ ಮಾಹಿತಿ ಫಲಕಗಳಲ್ಲಿ ಮಾರ್ಗ ನಕ್ಷೆ, ಬೇರೆ ಬೇರೆ ಮಾರ್ಗಗಳಲ್ಲಿರುವ ಬಸ್‌ಗಳ ಮಾಹಿತಿ, ಮಾರ್ಗ ಸಂಖ್ಯೆಗಳ ವಿವರ ಮೂಡಿಬರಲಿದೆ. ಯಾವ ಮಾರ್ಗದ ಬಸ್‌ ಆಯಾ ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಬರಲಿದೆ ಎಂಬ ನಿಖರವಾದ ಮಾಹಿತಿ (ಮೆಟ್ರೊ ನಿಲ್ದಾಣಗಳಲ್ಲಿರುವಂತೆ) ಫಲಕದ ಮೇಲೆ ಮೂಡಿ ಬರಲಿದೆ. ಬಿಎಂಟಿಸಿ ಸೇವಾ ಮಾಹಿತಿ ಸಿಗಲಿದೆ. ಹೊಸ ಪ್ರಯಾಣಿಕರಿಗೆಸರಳವಾಗಿ ಮಾಹಿತಿ ಸಿಗುವಂತೆ ವ್ಯವಸ್ಥೆ ರೂಪಿಸಿದ್ದೇವೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT