ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ಮತ್ತೆ ಹರಿಯಲಿದೆ ಚಾಮರಾಜಸಾಗರ

ಯೋಜನೆಗೆ ಸಚಿವ ಸಂಪುಟ ಅಸ್ತು , ತಿಂಗಳೊಳಗೆ ಟೆಂಡರ್‌ , ಕಾಮಗಾರಿಗೆ ಮೂರು ವರ್ಷಗಳ ಗಡುವು
Last Updated 4 ಡಿಸೆಂಬರ್ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನತೆಗೆ ಕುಡಿ­ಯುವ ನೀರು ಪೂರೈಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದ್ದ ತಿಪ್ಪಗೊಂಡ­ನ­­ಹಳ್ಳಿಯ ಚಾಮರಾಜಸಾಗರ ಜಲಾಶ­ಯ­­ದ ಪುನಃಶ್ಚೇತನಕ್ಕೆ ಜಲಮಂಡಳಿ ಮುಂದಾಗಿದೆ.

ಎತ್ತಿನಹೊಳೆ ಯೋಜನೆಯಿಂದ ಈ ಜಲಾಶಯಕ್ಕೆ 1.7 ಟಿಎಂಸಿ ಅಡಿ ನೀರು ಹರಿಸಲು ಯೋಜಿಸಿದೆ. ಅದನ್ನು ಶುದ್ಧೀಕರಿಸಿ, ನಗರಕ್ಕೆ ಪೂರೈಸಲು ಮಂಡಳಿ ನಿರ್ಧರಿಸಿದೆ. ಜತೆಗೆ ಸುತ್ತಲಿನ ಕೈಗಾರಿಕಾ ಪ್ರದೇಶಗಳಿಂದ ಕೊಳಚೆ ನೀರು ಜಲಮೂಲದ ಒಡಲು ಸೇರುವ ಮುನ್ನವೇ ಸಂಸ್ಕರಿಸಲು ತ್ಯಾಜ್ಯನೀರು ಸಂಸ್ಕರಣ ಘಟಕವನ್ನೂ ನಿರ್ಮಿಸಲಿದೆ. ಶುದ್ಧೀಕರಿಸಿದ ನೀರು ಬೆಂಗಳೂರಿಗೆ ಬರಲು 22 ಕಿ.ಮೀ. ಉದ್ದದ, 1.3 ಮೀಟರ್‌ ಅಗಲದ ಕೊಳವೆ ಮಾರ್ಗ ನಿರ್ಮಿಸಲು ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ.

ಮೊದಲ ಹಂತದ ಈ ಯೋಜನೆಗೆ ತಿಂಗಳೊಳಗೆ ಇ–ಪ್ರೊಕ್ಯೂರ್‌ಮೆಂಟ್‌ ಮೂಲಕ ಟೆಂಡರ್‌ ಕರೆಯಲು ಮಂಡಳಿ ನಿರ್ಧರಿಸಿದೆ. ಯೋಜನೆಗೆ ಮೂರು ವರ್ಷಗಳ ಗಡುವು ಹಾಕಿಕೊಳ್ಳಲಾಗಿದೆ. ಈ ಯೋಜನೆಯಿಂದ ಬೆಂಗಳೂರಿನ ಪಶ್ಚಿಮದ ಪ್ರದೇಶಗಳಿಗೆ ನೀರು ಪೂರೈಸಲು ಯೋಜಿಸಲಾಗಿದೆ. ಎರಡನೇ ಹಂತದಲ್ಲಿ ₹120 ಕೋಟಿ ವೆಚ್ಚದಲ್ಲಿ ಹೆಸರಘಟ್ಟ ಜಲಾಶಯವನ್ನು ಪುನಶ್ಚೇತನ ಮಾಡುವ ಚಿಂತನೆ ಜಲಮಂಡಳಿಯಲ್ಲಿ ನಡೆದಿದೆ.

ಸದ್ಯದ ಸ್ಥಿತಿ: ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ.ಕೊಳಚೆನೀರು ಸೇರುತ್ತಿದೆ. ಇಲ್ಲಿದ್ದ ಪಂಪಿಂಗ್‌ ಸ್ಟೇಷನ್‌ಗಳು ಪಾಳುಬಿದ್ದಿವೆ. ಹಳೆಯ ಕೊಳವೆ ಮಾರ್ಗ ಬಹುತೇಕ ಹಾಳಾಗಿದೆ. ಸುತ್ತಲಿನ ಪ್ರದೇಶವನ್ನು ಒತ್ತುವರಿ ಮಾಡಿದ, ಅಕ್ರಮವಾಗಿ ಇಲ್ಲಿಂದ ಮರಳು ಸಾಗಿಸಿದ ಪ್ರಕರಣಗಳು ಆಗಾಗ ದಾಖಲಾಗುತ್ತಿವೆ.

ನಗರಕ್ಕೆ ನೀರು ಬರ್ತಿತ್ತು: ಅರ್ಕಾವತಿ, ಕುಮದ್ವತಿ ನದಿಗಳ ಸಂಗಮ ಸ್ಥಳದಲ್ಲಿ ಚಾಮರಾಜಸಾಗರ ಜಲಾಶಯವನ್ನು 1933ರಲ್ಲಿ ನಿರ್ಮಿಸಲಾಯಿತು. ಈ ಜಲಾಶಯ 3.45 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿತ್ತು. 1992ರ ಜೂನ್‌ನಲ್ಲಿ ಜಲಾಶಯ ತುಂಬಿತ್ತು. ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂತು. 2012ರ ಅಕ್ಟೋಬರ್‌ ಬಳಿಕ ನಗರಕ್ಕೆ ಇಲ್ಲಿಂದ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗಿತ್ತು.

* ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿದ ನಗರ ಹೊರವಲಯದ ಪಶ್ಚಿಮ ಭಾಗದ ಹಳ್ಳಿಗಳಿಗೆ ನೀರು ಸರಬರಾಜಿಗೆ ಯೋಜನೆಯಲ್ಲಿ ಒತ್ತು ನೀಡುತ್ತೇವೆ

ತುಷಾರ್‌ ಗಿರಿನಾಥ್‌,ಅಧ್ಯಕ್ಷ, ಜಲಮಂಡಳಿ

ಹಣಕಾಸು

* ₹ 285.95 ಕೋಟಿ ಯೋಜನೆಯ ಒಟ್ಟು ಅಂದಾಜು ವೆಚ್ಚ

* ₹ 143 ಕೋಟಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದಿಂದ ಶೇ 6.5ರ ಬಡ್ಡಿದರದಲ್ಲಿ ಪಡೆಯಲಾಗುತ್ತಿರುವ ಸಾಲ

* ₹ 71.5 ಕೋಟಿ ರಾಜ್ಯ ಸರ್ಕಾರ ನೀಡುತ್ತಿರುವ ಮೊತ್ತ

8 ₹ 71.5 ಕೋಟಿ ಜಲಮಂಡಳಿ ಭರಿಸಿಕೊಳ್ಳುವ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT