ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಅಧಿಕಾರಿಗಳಿಂದಷ್ಟೆ ಇ– ಕಾರು ಬಳಕೆ!

ವಿದ್ಯುತ್‌ ವಾಹನ ಬಳಕೆಗೆ ಉತ್ತೇಜನ ನೀಡುವ ಇಂಧನ ಇಲಾಖೆಯಲ್ಲೇ ವಾಹನಗಳಿಗೆ ಬರ
Last Updated 22 ಅಕ್ಟೋಬರ್ 2018, 20:22 IST
ಅಕ್ಷರ ಗಾತ್ರ

ಬೆಂಗಳೂರು: ಇಂಧನ ಇಲಾಖೆಯ ವಿದ್ಯುತ್‌ ವಾಹನಗಳ ಬಳಕೆಗೆ ಭಾರಿ ಉತ್ತೇಜನ ನೀಡುತ್ತಿದೆ. ಆದರೆ, ಈ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳ ಕೊಡುಗೆ ಮಾತ್ರ ಅತ್ಯಲ್ಪ.

ನಗರದಲ್ಲಿ ಒಟ್ಟು ಏಳು ಸಾವಿರ ವಿದ್ಯುತ್‌ ವಾಹನಗಳು ಸಂಚರಿಸುತ್ತಿವೆ. ಇದರಲ್ಲಿ ಇಂಧನ ಇಲಾಖೆ ಅಧಿಕಾರಿಗಳು ಬಳಸುತ್ತಿರುವುದು ಐದು ಎಲೆಕ್ಟ್ರಿಕ್‌ ಕಾರುಗಳನ್ನು ಮಾತ್ರ. ಅಚ್ಚರಿ ಎಂದರೆ ಈ ಕಾರುಗಳೂ ಇಲಾಖೆಯದ್ದಲ್ಲ. ಅವುಗಳನ್ನು ಬಾಡಿಗೆಗೆ ಪಡೆಯಲಾಗಿದೆ.

ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಹಾಗೂ ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕರು ಇ– ಕಾರು ಬಳಸುತ್ತಿದ್ದಾರೆ. ವಿದ್ಯುತ್‌ ವಾಹನ ವಿಭಾಗವೂ ಇಂತಹ ಕಾರು ಬಳಸುತ್ತಿದೆ.

ವಿದ್ಯುತ್‌ ವಾಹನವನ್ನು ಎಂಟು ಗಂಟೆ ಚಾರ್ಜ್‌ ಮಾಡಿದರೆ ನಿರಾತಂಕವಾಗಿ ಎಂಟು ತಾಸು ಬಳಸಬಹುದು. ಪ್ರಸ್ತುತ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಎರಡು ಚಾರ್ಜಿಂಗ್‌ ಕೇಂದ್ರಗಳಿವೆ. ಈ ಪೈಕಿ ಒಂದು ತ್ವರಿತಗತಿ ಚಾರ್ಜಿಂಗ್‌ (ಡಿ.ಸಿ) ಕೇಂದ್ರ ಹಾಗೂ ಇನ್ನೊಂದು ನಿಧಾನಗತಿಯ ಚಾರ್ಜಿಂಗ್‌ ಕೇಂದ್ರ. ಕೆಇಆರ್‌ಸಿ ಕಚೇರಿಯ ಬಳಿ ನಿಧಾನಗತಿ ಚಾರ್ಜಿಂಗ್‌ ಕೇಂದ್ರವನ್ನು ಇತ್ತೀಚೆಗೆ ಆರಂಭಿಸಲಾಗಿದೆ. ಈ ಕೇಂದ್ರಗಳನ್ನು ಹೆಚ್ಚಾಗಿ ಅಧಿಕಾರಿಗಳೇ ಬಳಸುತ್ತಿದ್ದಾರೆ.

ವಿದ್ಯುತ್‌ ವಾಹನಗಳನ್ನು ಖರೀದಿಸುವಂತೆ ಉತ್ತೇಜನ ನೀಡುತ್ತಿರುವ ಇಂಧನ ಇಲಾಖೆ ಸ್ವಂತ ಬಳಕೆಗೆ ಇಂತಹ ವಾಹನ ಖರೀದಿಗೆ ಹಿಂದೇಟು ಹಾಕುತ್ತಿದೆ.

‘ತಂತ್ರಜ್ಞಾನ ಕ್ಷೇತ್ರವು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಈಗಿನ ವಾಹನಗಳಲ್ಲಿ ಬಳಕೆ ಆಗುತ್ತಿರುವ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಹಳತಾಗಲಿದೆ. ಹಾಗಾಗಿ ವಿದ್ಯುತ್‌ ವಾಹನಗಳ ಖರೀದಿಗೆಒಂದೇ ಸಲ ಭಾರಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಯಾವಾಗಲೂ ಸಕಲ ಸೌಕರ್ಯಗಳಿರುವ ಅತ್ಯಾಧುನಿಕ ವಾಹನಗಳನ್ನು ಬಳಸುವಂತಾಗಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ನಮ್ಮ ಇಲಾಖೆಯಲ್ಲಿ ಒಟ್ಟು ಐದು ವಿದ್ಯುಚ್ಚಾಲಿತ ವಾಹನಗಳನ್ನು ಬಳಸಲಾಗುತ್ತಿದೆ. ಅಧಿಕಾರಿಗಳು ಬಳಸುತ್ತಿರುವ ಈ ವಾಹನಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಇಂತಹ ವಾಹನಗಳನ್ನು ಇಲಾಖೆ ವತಿಯಿಂದಲೇ ಖರೀದಿಸಲಿದ್ದೇವೆ’ ಎಂದು ಶಿಖಾ ತಿಳಿಸಿದರು.

ಬೆಸ್ಕಾಂ ವಿದ್ಯುತ್‌ ವಾಹನ ವಿಭಾಗದ ವ್ಯವಸ್ಥಾಪಕ ಸಿ.ಕೆ.ಶ್ರೀನಾಥ್‌, ‘ಯಾವ ರೀತಿಯ ವಾಹನಗಳನ್ನು ಬಳಸಬೇಕೆಂಬ ಬಗ್ಗೆ ಕೇಂದ್ರ ಸರ್ಕಾರ ಮಾನದಂಡವನ್ನು ನಿಗದಿಪಡಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ. ವಿದ್ಯುತ್‌ ವಾಹನಗಳ ಬಳಕೆಗೆ ನೇರ ಉತ್ತೇಜನ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರವು ಸೆಪ್ಟೆಂಬರ್‌ನಲ್ಲಿ ಒಂದು ಆದೇಶವನ್ನು ಹೊರಡಿಸಿದೆ. ಯಾವ ರೀತಿಯ ಚಾರ್ಜಿಂಗ್‌ ಕೇಂದ್ರಗಳನ್ನು ಹೊಂದಬೇಕು ಎಂಬ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ’ ಎಂದರು.

ಇ–ವಾಹನ: ಮೆಟ್ಟಿನಿಲ್ಲಬೇಕಿದೆ ಸವಾಲು

ದೇಶದಲ್ಲಿ ವಿದ್ಯುತ್‌ ವಾಹನಗಳ ಮಾರಾಟದಲ್ಲಿ 2017–18ನೇ ಸಾಲಿನಲ್ಲಿ ಶೇ 124ರಷ್ಟು ಹೆಚ್ಚಳವಾಗಿದೆ. ಇದುವರೆಗೆ ಒಟ್ಟು 56ಸಾವಿರ ವಾಹನಗಳು ಮಾರಾಟವಾಗಿವೆ.

ವಿದ್ಯುತ್‌ ವಾಹನಗಳ ತಯಾರಕರ ಸೊಸೈಟಿ (ಎಸ್‌ಎಂಇವಿ) ಮಾಹಿತಿಯ ಪ್ರಕಾರ ಕಳೆದ ವರ್ಷವೊಂದರಲ್ಲೇ 25 ಸಾವಿರ ವಾಹನಗಳು ಬಿಕರಿಯಾಗಿವೆ.

2018ನೇ ಆರ್ಥಿಕ ವರ್ಷದಲ್ಲಿ ವಿದ್ಯುಚ್ಚಾಲಿತ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕಳೆದ ವರ್ಷ ಶೇ 134ರಷ್ಟು ಹೆಚ್ಚಳ ಕಂಡುಬಂದಿದೆ. ಆದರೆ, ನಾಲ್ಕು ಚಕ್ರಗಳ ವಾಹನಗಳ ಮಾರಾಟ ಶೇ 40ರಷ್ಟು ಕುಸಿತ ಕಂಡಿದೆ.

ಬಹುತೇಕ ವಾಹನ ತಯಾರಕರು ವಿದ್ಯುತ್‌ ವಾಹನದಲ್ಲಿ ಲಿಥಿಯಂ ಅಯಾನ್‌ ಬ್ಯಾಟರಿಗಳನ್ನು ಅಳವಡಿಸುತ್ತಿದ್ದಾರೆ. ಈ ಬ್ಯಾಟರಿಗಳು ದ್ವಿಚಕ್ರ ವಾಹನಗಳ ಕ್ಷಮತೆಯನ್ನು ಹೆಚ್ಚಿಸಿದ್ದು, ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ನೆರವಾಗಿವೆ. ಆದರೆ, ಇಂತಹ ವಾಹನಗಳ ಖರೀದಿಗೆ ಆರ್ಥಿಕ ನೆರವಿನ ಕೊರತೆ ಇದೆ. ವಿದ್ಯುತ್ ಚಾಲಿತ ಮತ್ತು ಪೆಟ್ರೋಲ್‌ ಬಳಸುವ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಅಂತರ ಹೆಚ್ಚು ಇದೆ. ಈ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸವಾಲುಗಳನ್ನೂ ಮೆಟ್ಟಿ ನಿಲ್ಲಬೇಕಿದೆ.

ಮೂಲಸೌಕರ್ಯ ಕೊರತೆ, ನೀತಿನಿರೂಪಣೆಗೆ ಸಂಬಂಧಿಸಿದಂತೆ ಗೊಂದಲಗಳು ಮುಂದುವರಿದಿರುವುದು ಇ–ಕಾರುಗಳ ಬಳಕೆಗೆ ಸಂಬಂಧಿಸಿದ ಹಿನ್ನಡೆಗೆ ಪ್ರಮುಖ ಕಾರಣಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT