ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ ಸಮಾಜಕ್ಕೆ ಶಿಕ್ಷಣ ಅಗತ್ಯ

ಬಾಬು ಜಗಜೀವನರಾಂ ಅವರ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಂತಾ ಕಾಲೇಜಿನ ಪ್ರಾಂಶುಪಾಲ ಕೋಡಿರಂಗಪ್ಪ ಅಭಿಮತ
Last Updated 6 ಜುಲೈ 2019, 14:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಯಾವುದೇ ವ್ಯಕ್ತಿಯ ಶ್ರೇಷ್ಠತೆಯನ್ನು ಮತ್ತು ಯಾರನ್ನೂ ಜಾತಿ ನೆಲೆಯಿಂದ ಗುರುತಿಸಬಾರದು. ಶ್ರೀಮಂತ, ಬಡವರ ಮಕ್ಕಳಿಗೆ ಒಂದೇ ಸೂರಿನಡಿ ಸಮಾನ ಶಿಕ್ಷಣ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಶಾಂತಾ ಕಾಲೇಜಿನ ಪ್ರಾಂಶುಪಾಲ ಕೋಡಿರಂಗಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಬಾಬು ಜಗಜೀವನರಾಂ ಅವರ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಾಬು ಜಗಜೀವನರಾಂ ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳು ಇದ್ದರೂ ಪ್ರಧಾನಿ ಆಗಲಿಲ್ಲ. ಈ ದೇಶದಲ್ಲಿ ಜಾತಿ ವ್ಯವಸ್ಥೆಯ ಬೇರುಗಳು ಬಹಳ ಆಳವಾಗಿ ನೆಲೆಯೂರಿದ್ದೇ ಅದಕ್ಕೆ ಮುಖ್ಯ ಕಾರಣ. ಹಾಗೆಂದು ಅವರು ಎದೆಗುಂದಲಿಲ್ಲ ಬದಲು ಉಪ ಪ್ರಧಾನಿಯಾಗಿ ಸಾಕಷ್ಟು ಕೆಲಸಗಳನ್ನು ಮಾಡಿದರು’ ಎಂದು ಹೇಳಿದರು.

‘ದೇಶ ಕಂಡ ಅಪ್ರತಿಮ ಸಂಸದೀಯ ಪಟುವಾಗಿದ್ದ ಜಗಜೀವನರಾಂ ಅವರು ತಮ್ಮ ಜೀವನದುದ್ದಕ್ಕೂ ಸರ್ವ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದರು. ರಕ್ಷಣಾ ಸಚಿವರಾಗಿ ಸೇನೆಯ ಬಲ ವೃದ್ಧಿಸಿದರು. ಕೃಷಿ ಸಚಿವರಾಗಿದ್ದ ವೇಳೆ ಅವರು ಹಸಿರುಕ್ರಾಂತಿ ಮೂಲಕ ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಿದರು’ ಎಂದರು.

‘ನಮಗೆ ಆಹಾರ ಎಷ್ಟು ಮುಖ್ಯವೋ ಓದು ಸಹ ಅಷ್ಟೇ ಮುಖ್ಯ. ಓದು ಮನುಷ್ಯನ ಅವಿಭಾಜ್ಯ ಅಂಗವಾಗಬೇಕು. ನಮ್ಮ ಜೀವನ ಬೆಳಿಗ್ಗೆ ಓದುವುದರಿಂದ ಆರಂಭವಾಗಿ ಸಂಜೆ ಬರೆಯುವುದರ ಮೂಲಕ ಮುಗಿಯಬೇಕು. ನಾವು ಎಲ್ಲಿಯವರೆಗೆ ಓದುವುದನ್ನು ಮೈಗೂಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿ ಹೊಂದುವುದಿಲ್ಲ. ಯಾವ ದೇಶದಲ್ಲಿ ಶಿಕ್ಷಣ ಸಂಪತ್ತು ಇದೆಯೋ ಆ ದೇಶ ನಷ್ಟ ಹೊಂದುವುದಿಲ್ಲ’ ಎಂದು ತಿಳಿಸಿದರು.

‘ಜರ್ಮನಿ, ಜಪಾನ್‌ನಂತಹ ದೇಶಗಳಲ್ಲಿ ಸಮಸ್ಯೆಗಳೇ ಇಲ್ಲ. ಏಕೆಂದರೆ ಅಲ್ಲಿನ ಜನ ಸರ್ಕಾರಗಳನ್ನು ಅವಲಂಬಿಸದೆ, ವೈಯಕ್ತಿಕವಾಗಿ ಬೆಳೆದಿದ್ದಾರೆ. ನಾವು ಸಹ ಸರ್ಕಾರದ ಯೋಜನೆಗಳು ಹಾಗೂ ನಮ್ಮನ್ನು ಯಾವುದೋ ವ್ಯಕ್ತಿ ನೋಡಿಕೊಳ್ಳುತ್ತಾನೆ ಎನ್ನುವ ಮನೋಭಾವ ಬಿಡಬೇಕು. ಯಾರನ್ನೂ ನಂಬುದು ಬೇಡ ನಮ್ಮನ್ನು ನಾವು ನಂಬಿ, ದೊಡ್ಡ ಆದರ್ಶಗಳನ್ನು ನಂಬಿ ಬೆಳೆಯಬೇಕಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್‌ ಮಾತನಾಡಿ, ‘ನಮ್ಮಲ್ಲಿ ಸಮಾನತೆ ಬರಬೇಕಾದರೆ ಕನಕ ಜಯಂತಿ, ಅಂಬೇಡ್ಕರ್, ಬಸವಣ್ಣ, ಕೆಂಪೇಗೌಡ ಜಯಂತಿಗಳು ಮಾಡುವ ಸಂದರ್ಭದಲ್ಲಿ ಸರ್ಕಾರ ಎಲ್ಲಾ ಸಮುದಾಯಗಳು ಸೇರಿ ಜಯಂತಿಗಳು ಆಚರಣೆ ಮಾಡಬೇಕು. ಇಂತಹ ವೇದಿಕೆಗಳಲ್ಲಿ ಎಲ್ಲಾ ಜಾತಿಯ ಮುಖಂಡರಿಗೂ ಅವಕಾಶ ಮಾಡಿಕೊಟ್ಟಾಗ ಮಾತ್ರ ಸಮಾನತೆ ತರಲು ಸಾಧ್ಯ’ ಎಂದರು.

‘ಜಯಂತಿಗಳು ಒಂದು ಜಾತಿಯ ಹಾಗೂ ಸಮುದಾಯಗಳಿಗೆ ಸೀಮಿತ ಮಾಡಬಾರದು. ನಮ್ಮ ಪೂರ್ವಿಕರ ತತ್ವ ಮತ್ತು ಆದರ್ಶಗಳು ಎಲ್ಲಾ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಆಗ ಮಾತ್ರ ಇಂತಹ ಜಯಂತಿಗೆ ಇಂದು ಅರ್ಥ ಇರುತ್ತದೆ. ಇಲ್ಲವಾದರೆ ಜಯಂತಿಗಳು ಬೂಟಾಟಿಕೆಯಾಗಿ ಉಳಿದುಬಿಡುತ್ತವೆ’ ಎಂದು ಹೇಳಿದರು.

‘ನಮಗೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದಲಿತರು ಮನೆ, ಖಾಲಿ ನಿವೇಶನಗಳಿಗೆ ಅರ್ಜಿ ಹಾಕುವುದು ತಪ್ಪಿಲ್ಲ. ಇಂದಿಗೂ ಸಹ ಜಿಲ್ಲೆಯಲ್ಲಿ ದಲಿತರಿಗೆ ಸರಿಯಾದ ಮನೆಗಳು ಇಲ್ಲ. ಭೂಮಿ ಇಲ್ಲ, ಭೂಮಿ ಇದ್ದವರಿಗೆ ಕೊಳವೆ ಬಾವಿ, ವಿದ್ಯುತ್ ಇಲ್ಲ. ಹೀಗಾದರೆ ನಾವು ಹೇಗೆ ಬದುಕಬೇಕು’ ಎಂದು ಪ್ರಶ್ನೆ ಮಾಡಿದರು.

ಜಿಲ್ಲಾಧಿಕಾರಿ ಪಿ.ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್‌ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ತಹಶೀಲ್ದಾರ್ ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತೇಜಆನಂದ ರೆಡ್ಡಿ ಡಿವೈಎಸ್‍ಪಿ ಪ್ರಭುಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ತಿರುಮಳಪ್ಪ. ಡಿ.ಎಸ್ಎಸ್ ಮುಖಂಡರಾದ ಬಿ.ಎನ್.ಗಂಗಾಧರ್, ವೆಂಕಟರವಣಪ್ಪ, ಸು.ಧಾ.ವೆಂಕಟೇಶ್, ತಿಪ್ಪೇನಹಳ್ಳಿ ನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT