ಸೋಮವಾರ, ಅಕ್ಟೋಬರ್ 14, 2019
28 °C
ಆರೋಗ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ ನಗರದ ಖಾಸಗಿ ಆಸ್ಪತ್ರೆಗಳು

ಡೆಂಗಿ ಹೆಸರಲ್ಲಿ ಸುಲಿಗೆ ದಂಧೆ

Published:
Updated:

ಬೆಂಗಳೂರು: ನಗರದಲ್ಲಿ ಒಂದೇ ಸಮನೆ ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳು ಜನರನ್ನು ಭಯದ ಕೂಪಕ್ಕೆ ತಳ್ಳಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು ಸಾಮಾನ್ಯ ಜ್ವರಕ್ಕೂ ಡೆಂಗಿ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಶಿಫಾರಸು ಮಾಡುತ್ತಿವೆ. ಇನ್ನೊಂದೆಡೆ, ಸರ್ಕಾರದ ನಿಯಮಗಳನ್ನು ಕೂಡಾ ಗಾಳಿಗೆ ತೂರಿ, ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿವೆ.

ವರ್ಷದ ಆರಂಭದಲ್ಲೇ ನಗರದಲ್ಲಿ ಡೆಂಗಿ ಜ್ವರ ವ್ಯಾಪಕವಾಗಿ ಕಾಣಿಸಿಕೊಂಡಿತ್ತು. ಜೂನ್ ಹಾಗೂ ಜುಲೈ ತಿಂಗಳಲ್ಲಂತೂ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿತ್ತು. ಪ್ರತಿವರ್ಷ ಆಗಸ್ಟ್‌, ಸೆಪ್ಟೆಂಬರ್ ತಿಂಗಳ ವೇಳೆಗೆ ಜ್ವರ ನಿಯಂತ್ರಣಕ್ಕೆ ಬರುತ್ತದೆ. ಆದರೆ, ಈ ಬಾರಿ ಮಳೆ ಜೋರಾದರೂ ಡೆಂಗಿ ಜ್ವರದ ಕಾವು ಮಾತ್ರ ಕಡಿಮೆಯಾಗಿರಲಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸಾ ಸೌಲಭ್ಯ ಹಾಗೂ ಪ್ರಯೋಗಾಲಯದ ಕೊರತೆಯಿಂದಾಗಿ ರೋಗಿಗಳು ಚಿಕಿತ್ಸೆ ಹಾಗೂ ಪರೀಕ್ಷೆಗೆ ನಗರಕ್ಕೆ ಬರುತ್ತಿದ್ದಾರೆ. ಇದನ್ನೇ ಆದಾಯದ ಮೂಲ ಮಾಡಿಕೊಂಡಿರುವ ಕೆಲ ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸ್ಟಿಕ್ ಲ್ಯಾಬ್‌ಗಳು ಡೆಂಗಿ ಪರೀಕ್ಷೆಗೆ ₹1 ಸಾವಿರದಿಂದ ₹ 2 ಸಾವಿರದವರೆಗೂ ಶುಲ್ಕ ವಿಧಿಸುತ್ತಿರುವುದು
ಬೆಳಕಿಗೆ ಬಂದಿದೆ. 

ಸರ್ಕಾರಿ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಡೆಂಗಿ ಪರೀಕ್ಷೆ ಮಾಡಲಾಗುತ್ತದೆ. ಆದರೆ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇಲ್ಲದ ಕಾರಣ ಅನಿವಾರ್ಯವಾಗಿ ರೋಗಿಗಳು ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಬೇಕಾಗುತ್ತದೆ. ಬೇಕಾಬಿಟ್ಟಿ ಶುಲ್ಕ ವಸೂಲಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆರೋಗ್ಯ ಇಲಾಖೆ ಮೂರು ವರ್ಷಗಳ ಹಿಂದೆಯೇ ಖಾಸಗಿ ಆಸ್ಪತ್ರೆಗಳ ವೈದ್ಯರ ಜತೆಗೆ ಮಾತುಕತೆ ನಡೆಸಿ, ಡೆಂಗಿ ಪರೀಕ್ಷೆಗೆ ದರ ನಿಗದಿ ಮಾಡಿದೆ. ಅದೇ ರೀತಿ, ಆಸ್ಪತ್ರೆಗಳು ದರದ ಪಟ್ಟಿಯನ್ನು ಪ್ರದರ್ಶಿಸಬೇಕೆಂದು ನಿಯಮದಲ್ಲಿ ಸೂಚಿಸಲಾಗಿದೆ. ಆದರೆ, ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. 

12 ಸಾವಿರ ಪ್ರಕರಣಗಳು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಈ ವರ್ಷ ಈವರೆಗೆ 12,253 ಮಂದಿ ಡೆಂಗಿ ಜ್ವರದಿಂದ ಬಳಲಿರುವುದು ದೃಢಪಟ್ಟಿದೆ. ಇದರಲ್ಲಿ ಅರ್ಧಕ್ಕಿಂತ ಅಧಿಕ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ವರದಿಯಾಗಿವೆ. 

ಡೆಂಗಿ ಪರೀಕ್ಷೆಗೆ ಆರೋಗ್ಯ ಇಲಾಖೆ ₹ 250 ಶುಲ್ಕ ನಿಗದಿಪಡಿಸಿದೆ. ಇಷ್ಟಾಗಿಯೂ ಖಾಸಗಿ ಆಸ್ಪತ್ರೆಗಳು ಅಧಿಕ ಹಣ ವಸೂಲಿ ಮಾಡುತ್ತಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯರಲ್ಲಿ ಮಾನವೀಯತೆ ಮರೆಯಾಗುತ್ತಿದೆಯೇ ಎಂದು ಜನತೆ ಪ್ರಶ್ನಿಸಲು ಆರಂಭಿಸಿದ್ದಾರೆ.

‘ಜ್ವರದ ಕಾರಣದಿಂದ ಹತ್ತಿರದ ಖಾಸಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡೆ. ಜ್ವರದ ಲಕ್ಷಣಗಳನ್ನು ಕೇಳಿದ ವೈದ್ಯರು ತಪಾಸಣೆ ಬಳಿಕ ಡೆಂಗಿ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಸೂಚಿಸಿದರು. ಈ ಪರೀಕ್ಷೆಗಳಿಗೆ ಒಟ್ಟು ₹ 2,300 ಶುಲ್ಕ ಪಾವತಿಸುವಂತೆ ಸೂಚಿಸಿದರು. ಡೆಂಗಿ ಪರೀಕ್ಷೆಯೊಂದಕ್ಕೆ ₹ 950 ಎಂದು ನಮೂದಿಸಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಉಳಿದ ಆಸ್ಪತ್ರೆಗಳಲ್ಲಿ ಶುಲ್ಕ ಜಾಸ್ತಿಯಿದೆ ಎಂದು ಹೇಳಿದರು. ಹಾಗಾಗಿ, ಅಷ್ಟು ಮೊತ್ತವನ್ನು ಪಾವತಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕಾಯಿತು. ಬಳಿಕ ಸಾಮಾನ್ಯ ಜ್ವರ ಎಂದು ವೈದ್ಯರು ವರದಿ ನೀಡಿದರು’ ಎಂದು ಬನಶಂಕರಿಯ ನಿವಾಸಿ ಜಿ. ಗೌರೀಶ್ ತಿಳಿಸಿದರು.

ಡೆಂಗಿ ಪರೀಕ್ಷೆಗೆ ₹ 950 ಶುಲ್ಕ ಪಾವತಿಸಲೇಬೇಕು ಎಂದು ಆಸ್ಪತ್ರೆಯ ನಗದು ಸ್ವೀಕರಿಸುವ ಸಿಬ್ಬಂದಿ ತಿಳಿಸಿದರು. ಅದೇ ರೀತಿ, ಆರ್‌.ಟಿ. ನಗರದಲ್ಲಿರುವ ಕೇಂದ್ರಗಳಲ್ಲಿ ₹ 1,000 ಪಡೆಯುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ‘ಇಷ್ಟು ಹಣ ಪಾವತಿಸಿದರೆ ಮಾತ್ರ ಪರೀಕ್ಷೆ ಮಾಡಲಾಗುತ್ತದೆ’ ಎಂದು ವೈದ್ಯರು ಸ್ಪಷ್ಟಪಡಿಸಿದರು. 

‘ಮಳೆ ಜೋರಾದ ಬಳಿಕ ಡೆಂಗಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಡೆಂಗಿ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಪರೀಕ್ಷೆಗೆ ತೆಗೆದುಕೊಳ್ಳುವ ಹಾಗಿಲ್ಲ. ಅಧಿಕ ಹಣವನ್ನು ಪಡೆದರೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಪ್ರಕಾಶ್ ಕುಮಾರ್ ತಿಳಿಸಿದರು.  

‘ಅಧಿಕ ಹಣ ವಸೂಲಿ ಮಾಡುವುದು ತಪ್ಪು. ವೈದ್ಯರಾದವರು ಮಾನವೀಯತೆ ಹೊಂದಿರಬೇಕು. ನಿಗದಿತ ಶುಲ್ಕವನ್ನು ಮಾತ್ರ ಪಡೆಯಬೇಕು. ಈ ಬಗ್ಗೆ ಮಾಹಿತಿ ಪಡೆದು, ದರದ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲಾಗುವುದು’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್‌ಗಳ ಒಕ್ಕೂಟದ (ಪಾನಾ) ಅಧ್ಯಕ್ಷ ಡಾ.ಆರ್‌. ರವೀಂದ್ರ ಹೇಳಿದರು.

ದೂರು ನೀಡಿದಲ್ಲಿ ಹಣ ವಾಪಸ್

‘ಡೆಂಗಿ ಪರೀಕ್ಷೆ ವಿಚಾರವಾಗಿ ನಿಯಮವನ್ನು ಉಲ್ಲಂಘಿಸುತ್ತಿರುವ ಆಸ್ಪತ್ರೆ ಹಾಗೂ ಡಯಾಗ್ನಸ್ಟಿಕ್ ಲ್ಯಾಬ್‌ಗಳ ಬಗ್ಗೆ ದೂರು ನೀಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲ, ದೂರುದಾರರಿಗೆ ಹೆಚ್ಚುವರಿ ಹಣವನ್ನು ವಾಪಸು ಮಾಡಿಸಲಾಗುತ್ತದೆ. ಈವರೆಗೂ ಯಾವುದೇ ದೂರು ಬಂದಿಲ್ಲ’ ಎಂದು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದರು. 

‘ನಿಯಮದ ಪ್ರಕಾರ ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸ್ಟಿಕ್ ಲ್ಯಾಬ್‌ಗಳು ಐಜಿಜಿ, ಎನ್‌ಎಸ್‌1 ಮತ್ತು ಐಜಿಎಂ ಪರೀಕ್ಷೆಗೆ ₹ 250 ಪಡೆಯಬೇಕು. ಒಂದು ವೇಳೆ ಈ ಮೂರು ಪರೀಕ್ಷೆ ಮಾಡಿದರೂ ₹ 500ಗಿಂತ ಅಧಿಕ ಹಣ ಪಡೆಯುವ ಹಾಗಿಲ್ಲ’ ಎಂದರು. 

‘ಮಾಹಿತಿ ಕೊರತೆ ಹಾಗೂ ಭವಿಷ್ಯದಲ್ಲಿ ಚಿಕಿತ್ಸೆ ನಿರಾಕರಿಸುವ ಭಯದಿಂದ ಬಹುತೇಕರು ಕೇಳಿದಷ್ಟು ಹಣ ಪಾವತಿಸಿ, ಸುಮ್ಮನಾಗುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳು ಹಾಗೂ ಲ್ಯಾಬ್‌ಗಳಲ್ಲಿ ವಸೂಲಿ ರಾಜಾರೋಷವಾಗಿ ನಡೆಯುತ್ತಿದೆ‘ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಅಧಿಕ ಹಣ ವಸೂಲಿ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಹಣ ಹೋದರೆ ಹೋಗಲಿ ಎಂದು ಸುಮ್ಮನಾಗಿದ್ದೇವೆ’ ಎಂದು ರೋಗಿಯೊಬ್ಬರು ತಿಳಿಸಿದರು. 

ಸಾಮಾನ್ಯ ಜ್ವರಕ್ಕೂ ಹತ್ತಾರು ಪರೀಕ್ಷೆ

ನಗರದಲ್ಲಿ ಡೆಂಗಿ ಭಯ ವ್ಯಾಪಿಸಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜ್ವರಕ್ಕೂ ಹತ್ತಾರು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದೆ. ರಕ್ತ, ಮೂತ್ರ ಪರೀಕ್ಷೆ ಸಾಮಾನ್ಯವಾಗಿದ್ದು, ಡೆಂಗಿ ಸೇರಿದಂತೆ ವಿವಿಧ ಜ್ವರಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಒಮ್ಮೆ ಜ್ವರಕ್ಕೆ ಆಸ್ಪತ್ರೆಯ ಮೆಟ್ಟಿಲೇರಿದರೆ ₹ 2 ಸಾವಿರದಿಂದ ₹ 3 ಸಾವಿರದವರೆಗೆ ಶುಲ್ಕ ಪಾವತಿಸಬೇಕಾಗಿದೆ. ಇದು ಬಡ–ಮಧ್ಯಮ ವರ್ಗದವರಿಗೆ ಹೊರೆಯಾಗಿ ಪರಿಣಮಿಸಿದ್ದು, ಜ್ವರವನ್ನು ನಿರ್ಲಕ್ಷಿಸಿ ಔಷಧ ಅಂಗಡಿಗಳಲ್ಲಿ ಸಿಗುವ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ.

ನಗರಕ್ಕೆ ಶಾಪವಾದ ಕಸ

ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಲು ಕಸದ ಸಮಸ್ಯೆಯೇ ಪ್ರಮುಖ ಕಾರಣ ಎಂಬುದು ವೈದ್ಯರ ಅಭಿಮತ.

‘ಡೆಂಗಿ ಜ್ವರವು ಈಡೀಸ್‌ ಜಾತಿಯ ಸೋಂಕಿತ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡಲಿದೆ. ನಗರದಲ್ಲಿ ಎಲ್ಲೆಂದರೆಲ್ಲಿ ಮಳೆಯ ನೀರು ನಿಲ್ಲುವುದರಿಂದ ಲಾರ್ವಾ ಉತ್ಪತ್ತಿ ಹೆಚ್ಚುತ್ತಿದೆ’ ಎಂದು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅನ್ಸಾರಿ ಅಹ್ಮದ್ ತಿಳಿಸಿದರು. 

‘ನೀರು ಶೇಖರಣೆಯ ಸಿಮೆಂಟ್‌ ತೊಟ್ಟಿ, ಬ್ಯಾರಲ್‌, ಡ್ರಮ್, ಏರ್‌ಕೂಲರ್, ಹೂವಿನಕುಂಡ ಸೇರಿದಂತೆ ವಿವಿಧೆಡೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್‌ ಕವರ್, ಪ್ಲಾಸ್ಟಿಕ್‌ ಲೋಟ, ಟೈರ್, ಎಳನೀರಿನ ಚಿಪ್ಪು ಇತರೆ ವಸ್ತುಗಳನ್ನು ಎಲ್ಲೆಂದರೆಲ್ಲಿ ಎಸೆಯಲಾಗುತ್ತಿದೆ. ಈ ವಸ್ತುಗಳಲ್ಲಿ ಕೂಡಾ ನೀರು ನಿಂತು, ಲಾರ್ವಾ ಉತ್ಪತ್ತಿಯಾಗುತ್ತಿದೆ’ ಎಂದರು. 

‘ರಾತ್ರಿ ಮಲಗುವಾಗ ಸೊಳ್ಳೆ ಪರದೆಯನ್ನು ಬಳಸಬೇಕು. ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು. ಸೊಳ್ಳೆ ನಿರೋಧಕಗಳಾದ ಸೊಳ್ಳೆ ಬತ್ತಿ, ಮುಲಾಮು, ದ್ರಾವಣ ಉಪಯೋಗಿಸಬೇಕು. ಡೆಂಗಿ ಹರಡುವ ಸೊಳ್ಳೆ ಹೆಚ್ಚಾಗಿ ಹಗಲಿನ ವೇಳೆ ಕಚ್ಚುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

23 ಸೂಕ್ಷ್ಮ ವಾರ್ಡ್‌ಗಳು

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ 23 ವಾರ್ಡ್‌ಗಳನ್ನು ಸೂಕ್ಷ್ಮಪ್ರದೇಶಗಳು ಎಂದು ಗುರುತಿಸಲಾಗಿದೆ. ಹೊಯ್ಸಳನಗರ, ಬೆಳ್ಳಂದೂರು, ತಿಪ್ಪಸಂದ್ರ, ಜೀವನ್‌ಬಿಮಾನಗರ, ಕೋರಮಂಗಲ, ರಾಜಾಜಿನಗರ, ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್ ನಗರ, ಶಿವಾಜಿನಗರ ಸೇರಿದಂತೆ ನಗರದ ವಿವಿಧ ವಾರ್ಡ್‌ಗಳಲ್ಲಿ ಡೆಂಗಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗಿವೆ.

‘ಸೂಕ್ಷ್ಮ ಪ್ರದೇಶಗಳಲ್ಲಿ ರೋಗದ ನಿಯಂತ್ರಣಕ್ಕೆ ಈಡೀಸ್ ಸೊಳ್ಳೆಯ ಲಾರ್ವಾ ಪತ್ತೆ ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಜತೆಗೆ ಅರಿವು ಮೂಡಿಸಿದ್ದೇವೆ. ಇದರಿಂದಾಗಿ ಡೆಂಗಿ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ. ಆಗಸ್ಟ್ ಕೊನೆಯ ವಾರದಲ್ಲಿ 225 ಪ್ರಕರಣಗಳು ವರದಿಯಾಗಿವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಬಿ.ಕೆ. ತಿಳಿಸಿದರು.

‘ಡೆಂಗಿ ಹರಡುವ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಲು ಒಂದು ವಾರಗಳು ಸಾಕು. ಲೋಟದಲ್ಲಿ ನೀರು ತುಂಬಿಟ್ಟು ಒಂದು ವಾರ ಹಾಗೆಯೇ ಬಿಟ್ಟರೆ ಅದರಲ್ಲೂ ಸೊಳ್ಳೆ ಲಾರ್ವಾ ಕಾಣಿಸಬಹುದು. ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆ ಉತ್ಪಾದನೆಯೂ ನಿಯಂತ್ರಣಕ್ಕೆ ಬರಲಿದೆ’ ಎಂದರು.

***

₹ 250 – ಡೆಂಗಿ ಪರೀಕ್ಷೆಗೆ ಆರೋಗ್ಯ ಇಲಾಖೆ ನಿಗದಿಪಡಿಸಿರುವ ಶುಲ್ಕ

7,262 – ಬಿಬಿಎಂಪಿ ವ್ಯಾಪ್ತಿಯಲ್ಲಿ ವರದಿಯಾದ ಡೆಂಗಿ ಪ್ರಕರಣಗಳು

313 – ಕಳೆದ ವರ್ಷ ಈ ವೇಳೆ ವರದಿಯಾಗಿದ್ದ ಡೆಂಗಿ ಪ್ರಕರಣಗಳು

Post Comments (+)