ಹಣಕ್ಕಾಗಿ ತಂದೆ ಕೊಲೆಗೆ ಯತ್ನ!

7
ಇಸ್ಪೀಟ ಆಡಲು ದುಡ್ಡು ಕೊಡದಿದ್ದಕ್ಕೆ ಕೃತ್ಯ

ಹಣಕ್ಕಾಗಿ ತಂದೆ ಕೊಲೆಗೆ ಯತ್ನ!

Published:
Updated:
Prajavani

ಬೆಂಗಳೂರು: ಇಸ್ಪೀಟ್‌ ಆಡಲು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಸಂತೋಷ್ ಅಲಿಯಾಸ್ ಸ್ಕ್ರ್ಯಾಪ್ ಎಂಬಾತ, ತನ್ನ ತಂದೆ ರಾಜಣ್ಣ ಎಂಬುವರ ಕೊಲೆಗೆ ಯತ್ನಿಸಿದ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಿರಿನಗರದ ದ್ವಾರಕನಗರದಲ್ಲಿ ಭಾನುವಾರ ನಸುಕಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಸಂತೋಷ್, ಜೈಲಿಗೂ ಹೋಗಿ ಬಂದಿದ್ದ. ಆತ, ಅಪರಾಧ ಹಿನ್ನೆಲೆಯುಳ್ಳವ ಆಗಿದ್ದ. ಈಗ ಕೊಲೆಗೆ ಯತ್ನ ಆರೋಪದಡಿ ಆತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶನಿವಾರ ರಾತ್ರಿ ಇಸ್ಪೀಟ್‌ ಆಡಲು ಹೋಗಿದ್ದ ಸಂತೋಷ್, ಸ್ನೇಹಿತರಿಂದ ಸಾಲ ಪಡೆದುಕೊಂಡ ಹಣವನ್ನು ಕಟ್ಟಿ ಸೋತಿದ್ದ. ಸ್ನೇಹಿತರು ಹಣ ವಾಪಸ್‌ ಕೇಳುತ್ತಿದ್ದಂತೆ, ಅವರನ್ನು ಕರೆದುಕೊಂಡು ಭಾನುವಾರ ನಸುಕಿನ 3 ಗಂಟೆ ಸುಮಾರಿಗೆ ಮನೆಗೆ ಬಂದು ಬಾಗಿಲು ಬಡಿದಿದ್ದ. ತಂದೆ ರಾಜಣ್ಣ, ಬಾಗಿಲು ತೆರೆದಿದ್ದರು.’

‘ಹಣ ನೀಡುವಂತೆ ತಂದೆಯನ್ನು ಒತ್ತಾಯಿಸಿದ್ದ ಆರೋಪಿ, ಹಣವಿಲ್ಲವೆಂದು ಅವರು ಹೇಳುತ್ತಿದ್ದಂತೆ ಜಗಳ ತೆಗೆದಿದ್ದ. ಬೈಕ್‌ನ ಕೀಯಿಂದ ಮುಖಕ್ಕೆ ಚುಚ್ಚಿದ್ದ. ಅವರ ಮುಖದಿಂದ ರಕ್ತ ಸೋರಲಾರಂಭಿಸಿತ್ತು. ಕೂಗಾಟ ಕೇಳಿ ಸಹಾಯಕ್ಕೆ ಬಂದ ಸ್ಥಳೀಯರು, ಜಗಳ ಬಿಡಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ರಾಜಣ್ಣ, ಮನೆಗೆ ಹೋಗಿದ್ದರು. ಮಗನ ವಿರುದ್ಧ ದೂರು ನೀಡಲು ನಿರಾಕರಿಸಿದ್ದರು. ಗಸ್ತು ಸಿಬ್ಬಂದಿಯೇ ಮನೆಗೆ ಹೋಗಿ ದೂರು ಪಡೆದುಕೊಂಡು ಬಂದಿದ್ದಾರೆ’ ಎಂದರು.

‘ಆಟೊ ಚಾಲಕರಾಗಿದ್ದ ರಾಜಣ್ಣ, ಪತ್ನಿ ಹಾಗೂ ಮಗನ ಜೊತೆಯಲ್ಲಿ ವಾಸವಿದ್ದರು. ದುಶ್ಚಟಗಳ ದಾಸನಾಗಿದ್ದ ಸಂತೋಷ್, ನಿತ್ಯವೂ ಕಿರುಕುಳ ನೀಡುತ್ತಿದ್ದನೆಂದು ಪೋಷಕರು ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !