ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

7
ಕಾಟನ್‌ ಬಳಕೆ ಕುರಿತು ಜಾಹೀರಾತು ಕಂಪನಿಗಳು ಸಲ್ಲಿಸಿರುವ ಪ್ರಮಾಣ ಪತ್ರ

ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

Published:
Updated:
Deccan Herald

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಜಾಹಿರಾತು ಫಲಕಗಳಲ್ಲಿ ಶೇ 100ರಷ್ಟು ಕಾಟನ್ ಬಳಸಲಾಗುತ್ತಿದೆ ಎಂದು ವಿವಿಧ ಜಾಹಿರಾತು ಕಂಪನಿಗಳು ಸಲ್ಲಿಸಿರುವ ಪ್ರಮಾಣ ಪತ್ರಗಳ ಬಗ್ಗೆ ಇದೇ 17ರೊಳಗೆ ಸಮಗ್ರ ಪ್ರತಿಕ್ರಿಯೆ ಸಲ್ಲಿಸಿ’ ಎಂದು ಹೈಕೋರ್ಟ್ ಬಿಬಿಎಂಪಿಗೆ ತಾಕೀತು ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ ಹಾಗೂ ಹೋರ್ಡಿಂಗ್ಸ್‌ ತೆರವುಗೊಳಿಸಲು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ನಡೆಸಿತು.

ವಿಚಾರಣೆ ವೇಳೆ ಜಾಹೀರಾತುದಾರ ಕಂಪನಿಗಳ ಪರ ವಕೀಲರು, ‘10ಕ್ಕೂ ಹೆಚ್ಚು ಜಾಹಿರಾತು ಕಂಪನಿಗಳು ಶೇ 100ರಷ್ಟು ಕಾಟನ್ ಬಳಸಲಾಗುತ್ತಿದೆ’ ಎಂದು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದೇವೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಕುರಿತಂತೆ ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ, ಅಂತೆಯೇ ಜಾಹೀರಾತು ನೀತಿಗೆ ಸಂಬಂಧಿಸಿದ ಬೈಲಾ ಬಗ್ಗೆಯೂ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ’ ಎಂದು ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರಿಗೆ ಸೂಚಿಸಿತು.‌

ಇದಕ್ಕೆ ಉತ್ತರಿಸಿದ ಶ್ರೀನಿಧಿ, ‘ಜಾಹೀರಾತು ನೀತಿಯ ಬಗ್ಗೆ ಕೆಲವೊಂದು ‍ಪರಿಣಾಮಕಾರಿ ಸಲಹೆಗಳು ಬಂದಿವೆ. ಅವುಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದರು.

113 ರಿಟ್ ಅರ್ಜಿಗಳು: ಜಾಹಿರಾತು ಫಲಕಗಳಿಗೆ ತೆರಿಗೆ ವಿಧಿಸಿದ, ದಂಡ ಹಾಕಿದ ಮತ್ತು ಜಾಹಿರಾತು ಫಲಕಗಳನ್ನು ತೆರವುಗೊಳಿಸದಂತೆ ತಡೆಯಾಜ್ಞೆ ಪಡೆದಿರುವುದೂ ಸೇರಿದಂತೆ ಸುಮಾರು 113 ಪ್ರಕರಣಗಳಲ್ಲಿ ರಿಟ್ ಅರ್ಜಿಗಳು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿವೆ. ವಿವಿಧ ಅಧೀನ ನ್ಯಾಯಾಲಯಗಳಲ್ಲಿ 87 ಸಿವಿಲ್ ದಾವೆಗಳು ವಿಚಾರಣಾ ಹಂತದಲ್ಲಿವೆ’ ಎಂದು ಶ್ರೀನಿಧಿ ವಿವರಿಸಿದರು.

ಎಎಜಿ ವಿವರಣೆ: ‘ಸರ್ಕಾರಿ ಬಸ್‌ ಹಾಗೂ ಆಟೋ ರಿಕ್ಷಾಗಳ ಜಾಹಿರಾತು ಫಲಕಗಳಲ್ಲಿ ಫ್ಲೆಕ್ಸ್ ಬಳಸುತ್ತಿಲ್ಲ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ನ್ಯಾಯಪೀಠಕ್ಕೆ ತಿಳಿಸಿದರು.

‘ಅನಧಿಕೃತ ಜಾಹಿರಾತು ಫಲಕಗಳನ್ನು ಅಳವಡಿಸಿದವರ ಮೇಲೆ ಒಟ್ಟು 480 ಪ್ರಕರಣ ದಾಖಸಿಕೊಳ್ಳಲಾಗಿದೆ. ಅವುಗಳಲ್ಲಿ 232 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದ್ದು, 258 ಪ್ರಕರಣ ವಿಚಾರಣೆಗೆ ಬಾಕಿ ಇವೆ’ ಎಂದೂ ಅವರು ವಿವರಿಸಿದರು.

ಈ ವಿವರಣೆಗೆ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್ ಮಾಹೇಶ್ವರಿ, ‘ಅಷ್ಟೊಂದು ಪ್ರಕರಣಗಳು ಏಕೆ ಬಾಕಿ ಇವೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಏಕೆ ನಿಧಾನ ಗತಿ ಅನುಸರಿಸುತ್ತಿದ್ದಾರೆ, ಪೊಲೀಸ್ ಆಯುಕ್ತರನ್ನು ಇಲ್ಲಿಗೆ ಕರೆಸಿ ಹೇಳಬೇಕಾ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !