ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಆರಾಧನೆಗೆ ನಗರ ಸಜ್ಜು

ವಿಗ್ರಹ, ಹೂವು, ಪೂಜಾ ಸಾಮಗ್ರಿ ಖರೀದಿ ಭರಾಟೆ ಜೋರು l ಬೆಲೆ ಏರಿಕೆ ನಡುವೆಯೂ ಹಬ್ಬದ ಸಡಗರ
Last Updated 1 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಗರ ಸಜ್ಜಾಗಿದೆ. ಹಬ್ಬದ ಮುನ್ನಾದಿನವಾದ ಭಾನುವಾರ ಹಬ್ಬಕ್ಕೆ ಬೇಕಾದ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.

ಹಣ್ಣು-ಹಂಪಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಗೌರಿ, ಗಣೇಶ ಹಬ್ಬದ ಸಂಭ್ರಮ ಕಡಿಮೆಯಾದಂತೆ ಕಾಣಿಸಲಿಲ್ಲ. ಆದರೆ, ಮಾರಾಟಗಾರರ ಬಳಿ ಗ್ರಾಹಕರು ಚೌಕಾಸಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ರಜೆ ಇದ್ದಿದ್ದರಿಂದ ಸಂಜೆ ವೇಳೆಗೆಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್ ಹಾಗೂ ನಗರದ ವಿವಿಧ ಬಡಾವಣೆಯ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿತ್ತು.

ಮಾರುಕಟ್ಟೆಗೆ ಬಗೆ ಬಗೆಯ ಗೌರಿ-ಗಣೇಶ ಮೂರ್ತಿಗಳು ಬಂದಿದ್ದು, ₹20ರಿಂದ ಸುಮಾರು ₹1 ಲಕ್ಷ ವರೆಗೆ ಮೂರ್ತಿಗಳು ಮಾರಾಟವಾಗುತ್ತಿವೆ. ಮತ್ತೊಂದೆಡೆ ಗೌರಿ ಹಬ್ಬ ಆಚರಿಸುವವರು ಗಜಗೌರಿ, ಮಡಿಗೌರಿ ಮತ್ತಿತರ ಬಗೆಯ ಗೌರಿಯರನ್ನು ಮಹಿಳೆಯರು ಖರೀದಿಸಿದರು. ಅದೇ ರೀತಿ, ಗರಿಕೆ, ಬೇಲದಹಣ್ಣು, ಎಕ್ಕದ ಹೂವಿನಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಜತೆಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ದರು. ಎಕ್ಕದ ಹಾರಕ್ಕೆ ₹ 50, ಗರಿಕೆಗೆ ₹ 10-20 , ಬೇಲದಹಣ್ಣಿಗೆ
₹ 20ರಿಂದ ₹25 ಇದ್ದವು. ಪ್ರದೇಶವಾರು ದರದಲ್ಲಿ ಏರುಪೇರಿತ್ತು. ಬಾಳೆಕಂಬ ಜೋಡಿಗೆ ₹30ನಿಂದ ₹2 00 ವರೆಗೆ ಮಾರಾಟವಾಗುತ್ತಿದ್ದವು.

ಸಗಟು ದರದಲ್ಲಿ ಕೆ.ಜಿ. ಸೇವಂತಿಗೆ ಹೂವು ₹ 100ನಿಂದ ₹ 240 ಇದ್ದರೆ, ಗುಲಾಬಿ ₹ 100ರಿಂದ ₹ 200 ಇದೆ. ಆನೇಕಲ್, ಹೊಸಕೋಟೆ, ದೇವನಹಳ್ಳಿ ಮತ್ತಿತರ ಭಾಗಗಳಿಂದ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿವೆ.

ಹಣ್ಣುಗಳ ದರ ಏರಿಕೆಯಾಗಿದೆ. ಏಲಕ್ಕಿ ಬಾಳೆ ಹಣ್ಣು ಹಾಪ್‍ಕಾಮ್ಸ್‌ ಮಳಿಗೆಗಳಲ್ಲಿ ಕೆ.ಜಿ.ಗೆ ₹ 91 ಇದ್ದರೆ ಚಿಲ್ಲರೆ ದರದಲ್ಲಿ ₹ 100ರಿಂದ ₹ 110ಕ್ಕೆ ಮಾರಾಟವಾಗುತ್ತಿದೆ‌. ಪಚ್ಚಬಾಳೆ ಕೆ.ಜಿ.ಗೆ ₹ 30 ಇದೆ. ಮೂಸಂಬಿ ದರದಲ್ಲಿ ಭಾರಿ ಏರಿಕೆಯಾಗಿದ್ದು, ಕೆ.ಜಿ.ಗೆ ₹ 80 ರಿಂದ
₹ 100ಕ್ಕೆ ಮಾರಾಟವಾಗುತ್ತಿದೆ.

ಮಂಡಳಿಯಿಂದ 38 ಟ್ಯಾಂಕ್

ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 38 ಸಂಚಾರಿ ತೊಟ್ಟಿಗಳನ್ನು ವ್ಯವಸ್ಥೆ ಮಾಡಿದೆ.ಗಣಪತಿ ನಗರ, ಲಗ್ಗೆರೆ ಉದ್ಯಾನ, ಬನ್ನೇರುಘಟ್ಟ ರಸ್ತೆ, ಟಿ. ದಾಸರಹಳ್ಳಿ,ಜಯನಗರ,ಜೀವನ್ ಬಿಮಾನಗರ,ರಾಜರಾಜೇಶ್ವರಿ ನಗರ,ಮಹದೇವಪುರ ಸೇರಿದಂತೆ ನಗರದ ವಿವಿಧೆಡೆ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಸಂಜೆ 4ರಿಂದ ರಾತ್ರಿ 10ಗಂಟೆವರೆಗೆ ಸೇವೆ ದೊರೆಯಲಿದೆ ಎಂದು ಮಂಡಳಿ ತಿಳಿಸಿದೆ.

5001 ಮಣ್ಣಿನ ಮೂರ್ತಿ ವಿತರಣೆ

ಬಾಂಧವ ಸಂಸ್ಥೆ ವತಿಯಿಂದ ಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಗೌರಿಗಣೇಶ ಹಬ್ಬದ ಅಂಗವಾಗಿ ಜೇಡಿ ಮಣ್ಣಿನಿಂದ ತಯಾರಿಸಿದ 5001 ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು. ಸಸಿಗಳ ಬೀಜಗಳನ್ನು ಹುದುಗಿಸಿರುವ ಮೂರ್ತಿಗಳನ್ನು ಮೇಯರ್‌ ಗಂಗಾಂಬಿಕೆ, ಶಾಸಕ ರಾಮಲಿಂಗಾ ರೆಡ್ಡಿ, ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಪಾಲಿಕೆ ಸದಸ್ಯಎನ್.ನಾಗರಾಜ್ ಅವರು ಸಾರ್ವಜನಿಕರಿಗೆ ವಿತರಿಸಿದರು.

ವಿಸರ್ಜನೆಗೆ 400 ಸಂಚಾರಿ ತೊಟ್ಟಿ

ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮೂರ್ತಿಗಳ ವಿಸರ್ಜನೆಗೆ ನಗರದಾದ್ಯಂತ 37 ಕಲ್ಯಾಣಿ ಅಥವಾ ತಾತ್ಕಾಲಿಕ ಹೊಂಡ ನಿರ್ಮಿಸಿದೆ. 400 ಸಂಚಾರಿ ಟ್ಯಾಂಕ್‌ಗಳ ವ್ಯವಸ್ಥೆಯನ್ನೂ ಮಾಡಿದೆ.

ನಿಷೇಧಿತ ವಸ್ತುವಿನಿಂದ ಗಣೇಶ ಮೂರ್ತಿ ತಯಾರಿಸುವುದು ಮತ್ತು ಮಾರಾಟ ಮಾಡುವುದು ಹಾಗೂ ವಿಸರ್ಜನೆ ಮಾಡುವುದು ಶಿಕ್ಷಾರ್ಹವಾಗಿದ್ದು, ₹10 ಸಾವಿರದವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿರುವ ಕಲ್ಯಾಣಿಗಳು ಹಾಗೂ ಸಂಚಾರಿ ಟ್ಯಾಂಕ್‌ಗಳಲ್ಲಿ ಪಿಓಪಿಯ ಹಾಗೂ ವಿಷಕಾರಿ ರಾಸಾಯನಿಕ ಬಣ್ಣ ಲೇಪಿಸಿದ ಮೂರ್ತಿಗಳನ್ನು ವಿಸರ್ಜಿಸಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

‘ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಅಲ್ಲಲ್ಲಿ ಕಸ ರಾಶಿ ಬೀಳುವುದನ್ನು ತಡೆಯುವ ಸಲುವಾಗಿ ಕಲ್ಯಾಣಿಗಳ ಬಳಿಯೇ ಕಸ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಕಸ ವಿಲೇವಾರಿಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ರಂದೀಪ್‌ ತಿಳಿಸಿದರು.

ಪ್ರಮುಖ ಕೆರೆಗಳು: ಅಲ್ಲಾಳಸಂದ್ರ ಕೆರೆ, ಅಟ್ಟೂರು, ಕೋಗಿಲು, ರಾಚೇನಹಳ್ಳಿ, ಜಕ್ಕೂರು, ಪಳನಹಳ್ಳಿ, ದೊಡ್ಡಬೊಮ್ಮಸಂದ್ರ, ಚಳ್ಳಕೆರೆ, ಸ್ಯಾಂಕಿ, ಚೊಕ್ಕಸಂದ್ರ, ಸಾದರಮಂಗಲ, ಹೇರೋಹಳ್ಳಿ, ಮೊನ್ನೆಕೊಳಾಲು, ಹಲಸೂರು, ಉಳ್ಳಾಲ, ಮಲ್ಲತ್ತಹಳ್ಳಿ, ಕೈಕೊಂಡ್ರಹಳ್ಳಿ, ಕಸವನಹಳ್ಳಿ, ದೊಡ್ಡಕೊನೇನಹಳ್ಳಿ, ಮೇಸ್ತ್ರಿಪಾಳ್ಯ, ಯಡಿಯೂರು, ದೊರೆಕೆರೆ ಹಾಗೂ ಸಿಂಗಸಂದ್ರ ಕೆರೆ.ಹಲಸೂರು ಕೆರೆ ಮತ್ತು ಸ್ಯಾಂಕಿ ಕೆರೆಯಲ್ಲಿ ಗಣೇಶ ವಿಸರ್ಜನೆಗಾಗಿ ನಡೆಸಿರುವ ಸಿದ್ಧತೆಗಳನ್ನು ಮೇಯರ್‌ ಗಂಗಾಂಬಿಕೆ ಭಾನುವಾರ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT