ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಶೇ 50ರಷ್ಟು ಮಹಿಳೆಯರಿಗೆ ದುಡಿಮೆ ಅವಕಾಶ ಸಿಗುತ್ತಿಲ್ಲ'

ಭಾರತ್‌ ಬಯೋಟೆಕ್‌ ಇಂಟರ್‌ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಕೃಷ್ಣ ಎಂ.ಎಲ್ಲ
Last Updated 1 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ವಿಷಯದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಇವರಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ದೇಶದಲ್ಲಿ ಶೇ 50ರಷ್ಟು ಮಹಿಳೆಯರಿಗೆ ದುಡಿಮೆಯ ಅವಕಾಶ ಸಿಗುತ್ತಿಲ್ಲ. ಇದರಿಂದ ದೇಶಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ’ ಎಂದು ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ ಅಧ್ಯಕ್ಷ ಕೃಷ್ಣ ಎಂ.ಎಲ್ಲ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಮಂಗಳವಾರ ಆಯೋಜಿಸಿದ್ದ 54ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ರೈತರು ಅಂದಿನಿಂದಲೂ ಕೃಷಿ ಉತ್ಪಾದನೆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದಕ್ಕಾಗಿ ತಮ್ಮ ಶ್ರಮವನ್ನೆಲ್ಲಾ ಮೀಸಲಿಡುತ್ತಾರೆ. ಆದರೆ, ಫಸಲನ್ನು ಮಾರಿ ಲಾಭ ಪಡೆಯುವ ವಿಚಾರದಲ್ಲಿ ಹಿಂದುಳಿದಿದ್ದಾರೆ. ರೈತರಿಗೆ ಮಾರುಕಟ್ಟೆ ಜ್ಞಾನ ಕಡಿಮೆಯಿದ್ದು, ಈ ಬಗ್ಗೆ ಅವರಿಗೆ ಕೌಶಲ ಹೆಚ್ಚಬೇಕಿದೆ’ ಎಂದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಎಸ್‌.ಸವದಿ, ‘ರಾಜ್ಯದಲ್ಲಿ ಕೃಷಿಗೆ ಯೋಗ್ಯ ಭೂಮಿ ಕಡಿಮೆಯಾಗುತ್ತಿದೆ. ಇದರಿಂದ ಕೃಷಿಗೂ ಹಿನ್ನಡೆಯಾಗುತ್ತಿದೆ.222 ಲಕ್ಷ ಹೆಕ್ಟೇರ್ ಭೂಮಿ ಬಂಜರಾಗಿ ಉಳಿದಿದೆ.ಇದನ್ನು ಕೃಷಿಗೆ ಯೋಗ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸುವ ಸವಾಲು ಕೃಷಿ ವಿಜ್ಞಾನಿಗಳ ಮುಂದಿದೆ’ ಎಂದರು.

‘ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆಯಬೇಕು. ಕೃಷಿ ಆಧರಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ತಜ್ಞರು ನೆರವಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದಕ್ಕೆ ಬೆಂಬಲ ನೀಡಬೇಕು’ ಎಂದರು.

ಆನ್‌ಲೈನ್‌ನಲ್ಲಿ ಕಾಲೇಜು ಪ್ರವೇಶಾತಿ, ಶುಲ್ಕ ಪಾವತಿ, ರಶೀದಿ ಪಡೆಯಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ಬಾಹ್ಯ ಪರೀಕ್ಷಾ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಉಗಮ್‌’ ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಲಾಯಿತು.

ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಡೀನ್‌ ಎಂ.ಪಾಂಡಿಯನ್ ಅವರಿಗೆ ‘ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಅತ್ಯುತ್ತಮ ಕೃಷಿ ಸಂಶೋಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮೂಡಲಗಿರಿಯಪ್ಪ ಅವರಿಗೆ ‘ನಾಗಮ್ಮ ದತ್ತಾತ್ರೇಯ ರಾವ್‌ ಪ್ರಶಸ್ತಿ’, ಎಚ್‌.ಸಿ.ಲೋಹಿತಾಶ್ವ, ಸೋಮಶೇಖರ, ಬಿ.ಎಸ್‌.ಲಲಿತಾ, ಶಿವಲಿಂಗಯ್ಯ ಅವರಿಗೆ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’, ಸವಿತಾ ಎಸ್‌.ಮಂಗಾನವರ ಅವರಿಗೆ ‘ಮೆ.ಜುವಾರಿ ಇಂಡಸ್ಟ್ರಿಸ್‌ ಲಿಮಿಟೆಡ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ ಪ್ರಶಸ್ತಿ’ ಹಾಗೂ ಎ.ಎಸ್‌.ಕುಮಾರಸ್ವಾಮಿ ಅವರ ‘ಮೋಡ ಮಳೆ ಬೆಳೆ’ ಕೃತಿಗೆ ‘ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT