ಬುಧವಾರ, ಏಪ್ರಿಲ್ 14, 2021
31 °C

ಕೇಂದ್ರ ಗೃಹ ಸಚಿವರಿಗೆ ವರದಿ ರವಾನಿಸಿದ ರಾಜ್ಯಪಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಪಕ್ಕಾ ಲೆಕ್ಕ ಹಾಗೂ ಬಹುಮತ ಸಾಬೀತುಪಡಿಸುವಂತೆ ನೀಡಿದ ಸೂಚನೆಯನ್ನು ಮುಖ್ಯಮಂತ್ರಿ ಉಲ್ಲಂಘಿಸಿರುವ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರು, ಕೇಂದ್ರ ಗೃಹ ಸಚಿವರಿಗೆ ವರದಿ ರವಾನಿಸಿದ್ದಾರೆ.

ವರದಿಯ ಪ್ರತಿಯನ್ನು ರಾಷ್ಟ್ರಪತಿ ಭವನಕ್ಕೂ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ರಾಜೀನಾಮೆ ನೀಡಿರುವ ಶಾಸಕರು ತಮ್ಮನ್ನು ಭೇಟಿಯಾಗಿ ತಮ್ಮ ನಿರ್ಧಾರಕ್ಕೆ ವ ಕಾರಣವನ್ನು ವಿವರಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮುಖ್ಯಮಂತ್ರಿ ಮಂಡಿಸಿ, ಅದಕ್ಕೆ ದಿನಾಂಕವನ್ನೂ ಗೊತ್ತು ಮಾಡಲಾಗಿತ್ತು.’

‘ರಾಜೀನಾಮೆಯನ್ನು ಸ್ವೀಕರಿಸಲು ಸಭಾಧ್ಯಕ್ಷರು ವಿಳಂಬ ಧೋರಣೆ ಅನುಸರಿಸುವ ಮೂಲಕ ಅಲ್ಪಮತಕ್ಕೆ ಕುಸಿದ ಸರ್ಕಾರವನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂಬ ಸಂಶಯ ಮೂಡಿದೆ. ವಿಶ್ವಾಸಮತ ಯಾಚನೆಯ ನಿರ್ಣಯದ ದಿನ ಅದನ್ನು ಮತಕ್ಕೆ ಹಾಕದೇ ಅನಗತ್ಯವಾಗಿ ಮುಂದೂಡಲಾಗುತ್ತಿದೆ. ಎರಡು ಬಾರಿ ಗಡುವು ವಿಧಿಸಿದ ಬಳಿಕವೂ ಮುಖ್ಯಮಂತ್ರಿ ಅದನ್ನು ಉಲ್ಲಂಘಿಸಿ, ಸಾಂವಿಧಾನಿಕವಾದ ತನ್ನ ಪರಮಾಧಿಕಾರವನ್ನು ಕಡೆಗಣಿಸಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟಿನತ್ತ ಕರ್ನಾಟಕ ಸಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಕಾಲ ಇದಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸದೇ ಇದ್ದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುವ ಸಂಭವ ಇದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು