ಮಂಗಳವಾರ, ಮೇ 18, 2021
28 °C

ಶಿಕ್ಷಕರ ಸಮಸ್ಯೆ ಬಗೆಹರಿಸಲು ಸರ್ಕಾರ ಇಚ್ಛಾಶಕ್ತಿ ತೋರಲಿ: ಬಸವರಾಜ್ ಹೊರಟ್ಟಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ‘ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ನೀತಿ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಸಮಸ್ಯೆಗಳನ್ನೂ ಬಗೆಹರಿಸಲು ಸರ್ಕಾರ ಇಚ್ಛಾಶಕ್ತಿ ತೋರುವ ಅಗತ್ಯವಿದೆ’ ಎಂದು ರಾಜ್ಯ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘವು ನಗರದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸೋಮವಾರ ಮಾತನಾಡಿದರು.

‘ಶಾಲಾ ಆಡಳಿತ ಮಂಡಳಿಗಳು ಶಿಕ್ಷಕರನ್ನು ನೇರವಾಗಿ ನೇಮಕ ಮಾಡಿಕೊಂಡರೂ ಅವರಿಗೆ ಸರ್ಕಾರವೇ ವೇತನ ನೀಡುವ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲಿಯೇ ಇದು ಜಾರಿಯಾಗುವ ಭರವಸೆ ಇದೆ’ ಎಂದರು.

‘ಶಿಕ್ಷಕರ ಸಮಸ್ಯೆಗಳು ಬಗೆಹರಿಯಬೇಕಾದರೆ ಒಗ್ಗಟ್ಟಾಗಬೇಕು. ಸಂಘಟನಾತ್ಮಕವಾಗಿ ಬಲ ತೋರಬೇಕು. 99 ಸಾವಿರ ಡಿಎಡ್, 30 ಸಾವಿರ ಬಿ.ಎಡ್ ಪದವೀಧರರು ಈಗ ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದರು.

ಶಿಕ್ಷಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರ ಕ್ರಮಗಳು ವಿಷಯದಲ್ಲಿ ಉಪನ್ಯಾಸಕ ಎಸ್‌.ವಿ.ವಸ್ತ್ರದ್ ವಿಶೇಷ ಉಪನ್ಯಾಸ ನೀಡಿದರು. ‘ಈಗಿನ ಶಿಕ್ಷಣ ವ್ಯವಸ್ಥೆಯು ಫ್ಯಾಸಿಸ್ಟ್‌ ಆಗಿ ಪರಿವರ್ತನೆ ಹೊಂದಿದೆ. ಅದನ್ನು ಬದಲಾಯಿಸಿ, ಮೌಲ್ಯಕೇಂದ್ರಿತ ಶಿಕ್ಷಣವನ್ನು ರೂಪಿಸಬೇಕಿದೆ’ ಎಂದು ಕರೆ ನೀಡಿದರು.

‘ಮಕ್ಕಳು ಬಯಸುತ್ತಿರುವ ಶಿಕ್ಷಣವನ್ನು ನಾವು ನೀಡುತ್ತಿಲ್ಲ. ಹೊರತಾಗಿ, ಶಿಕ್ಷಕರು, ಉಪನ್ಯಾಸಕರು ಬಯಸಿದ್ದನ್ನು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದೇವೆ. ಇತಿಹಾಸಕ್ಕೇ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ವರ್ತಮಾನದಿಂದ ಮಕ್ಕಳನ್ನು ವಿಮುಖಗೊಳಿಸಲಾಗುತ್ತಿದೆ. ನಮ್ಮ ಕಠೋರ ಶಿಕ್ಷಣ ವ್ಯವಸ್ಥೆಯಿಂದಾಗಿ ಮಕ್ಕಳು ಆತ್ಮಹತ್ಯಗೆ ದುಡುಕುತ್ತಿದ್ದಾರೆ’ ಎಂದರು.

‘ಸಮಯಕ್ಕೆ ಮಹತ್ವ ನೀಡಿ’: ಕಾರ್ಯಕ್ರಮವು ಬಹಳ ಸುದೀರ್ಘವಾಗಿತ್ತು. ಹೀಗಾಗಿ, ‘ಕಾರ್ಯಕ್ರಮದಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎನ್ನುವುದನ್ನು ತಿಳಿದುಕೊಳ್ಳಿ. ಪ್ರಾರ್ಥನ ಗೀತೆ, ಸ್ವಾಗತ ಗೀತೆ, ಸ್ವಾಗತ ಭಾಷಣಗಳ ಬದಲು ನಾಡಗೀತೆಯೊಂದನ್ನು ಹಾಡಿಸಿದರೆ ಸಾಕು. ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ’ ಎಂದು ಬಸವರಾಜ್ ಹೊರಟ್ಟಿ ಸಲಹೆ ನೀಡಿದರು.

‘ಮಂತ್ರಿಯಾಗಿದ್ದರೆ ಇನ್ನಷ್ಟು ಸೇವೆ ಮಾಡಬಹುದಿತ್ತು’: ‘ನಾನು ಕೆಲಸ ಮಾಡುವವನಿದ್ದೆ. ಶಿಕ್ಷಣ ಮಂತ್ರಿಯಾಗಿದ್ದರೆ ಶಿಕ್ಷಕರಿಗೆ ನ್ಯಾಯ ಒದಗಿಸಲು ಅನುಕೂಲವಾಗುತ್ತಿತ್ತು. ಆದರೆ, ಸಭಾಪತಿ ಸ್ಥಾನದಲ್ಲಿ ಕೂರಿಸಿದರು. ಈ ಸ್ಥಾನ ಗೌರವದ ಹುದ್ದೆಯೇ. ಆದರೂ, ಮಂತ್ರಿಯಾಗಿದ್ದರೆ ಇನ್ನಷ್ಟು ಸೇವೆ ಮಾಡಬಹುದಿತ್ತು’ ಎಂದು ಬಸವರಾಜ್ ಹೊರಟ್ಟಿ ಹೇಳಿದರು.

‘ಈ (ಸಭಾಪತಿ) ಸ್ಥಾನ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಜಡ್ಜ್‌ಗಳ ಹುದ್ದೆಯಂತೆ. ಹೀಗೆ ಇರಬೇಕು, ಇಂಥದ್ದೇ ಮಾತನಾಡಬೇಕು ಎನ್ನುತ್ತಾರೆ. 24 ಗಂಟೆನೂ ಮಾತನಾಡಿ ಚಟ ಹಿಡಿದುಬಿಟ್ಟಿದೆ. ಈಗ ಕಷ್ಟವಾಗಿಬಿಟ್ಟಿದೆ’ ಎಂದು ನಗುತ್ತಲೇ ನುಡಿದರು.

ಸನ್ಮಾನ: ನಿವೃತ್ತ ಶಿಕ್ಷಕರು, ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು, ವಿಶೇಷ ಸಾಧನೆ ಮಾಡಿದ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಈ ವೇಳೆ ಗೌರವಿಸಲಾಯಿತು.

ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎನ್.ಜಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ, ಹಿರಿಯ ವಕೀಲ ಎಸ್.ಪಿ.ಕಾಮತ್, ಸಾಹಿತಿ ವಿಷ್ಣು ನಾಯ್ಕ, ಸಂಘದ ಜಿಲ್ಲಾ ಘಟಕದ ಸಂಚಾಲಕ ಪ್ರಕಾಶ ನಾಯ್ಕ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಜೈ ರಂಗನಾಥ ಬಿ.ಎಸ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು