‘ಮಿರಾಜ್-2000’ ದುರಂತ; ಬ್ಲ್ಯಾಕ್‌ಬಾಕ್ಸ್‌ ಫ್ರಾನ್ಸ್‌ಗೆ ರವಾನೆ

7

‘ಮಿರಾಜ್-2000’ ದುರಂತ; ಬ್ಲ್ಯಾಕ್‌ಬಾಕ್ಸ್‌ ಫ್ರಾನ್ಸ್‌ಗೆ ರವಾನೆ

Published:
Updated:
Prajavani

ಬೆಂಗಳೂರು: ಎಚ್‌ಎಎಲ್‌ ನಿಲ್ದಾಣದಲ್ಲಿ ದುರಂತಕ್ಕೀಡಾದ ‘ಮಿರಾಜ್–2000’ ಯುದ್ಧ ವಿಮಾನದ ‘ಬ್ಲ್ಯಾಕ್‌ ಬಾಕ್ಸ್’ ಫ್ರಾನ್ಸ್‌ಗೆ ರವಾನೆಯಾಗಿದೆ.

ವಿಮಾನ ಸ್ಫೋಟಗೊಂಡ ಕಾರಣ ಬ್ಲ್ಯಾಕ್‌ ಬಾಕ್ಸ್‌ಗೂ ಹಾನಿಯಾಗಿದೆ. ವಿಮಾನ ಎಷ್ಟು ವೇಗದಲ್ಲಿ ಸಾಗುತ್ತಿತ್ತು? ಎಷ್ಟು ಎತ್ತರಕ್ಕೆ ಹಾರಿದ್ದಾಗ ದುರಂತ ಸಂಭವಿಸಿತು ಎಂಬುವೂ ಸೇರಿದಂತೆ ಎಲ್ಲ ತಾಂತ್ರಿಕ ಮಾಹಿತಿಗಳೂ ಅದರಲ್ಲಿ ದಾಖಲಾಗಿರುತ್ತವೆ. ತನಿಖೆ ಕೈಗೆತ್ತಿಕೊಂಡಿರುವ ಎಚ್‌ಎಎಲ್–ಐಎಎಫ್‌ ಅಧಿಕಾರಿಗಳು, ಆ ಮಾಹಿತಿಗಳನ್ನು ಸುರಕ್ಷಿತವಾಗಿ ಪಡೆಯಲು ಅದನ್ನು ವಿಮಾನದ ಮೂಲ ಉತ್ಪಾದಕ ಕಂಪನಿಯಾದ ಫ್ರಾನ್ಸ್‌ನ ‘ಡಸಾಲ್ಟ್ ಏವಿಯೇಷನ್’ಗೆ ಕಳುಹಿಸಿದ್ದಾರೆ. ‘ಸಾಮಾನ್ಯವಾಗಿ ತನಿಖಾ ತಂಡವೇ ಬ್ಲ್ಯಾಕ್‌ ಬಾಕ್ಸನ್ನು ತೆರೆದು ಮಾಹಿತಿಯನ್ನು ಕಂಪ್ಯೂಟರ್‌ಗೆ ವರ್ಗಾಯಿಸುತ್ತದೆ. ಆದರೆ, ಈ ಪ್ರಕರಣದಲ್ಲಿ ಬಾಕ್ಸ್ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಕಂಪನಿಯ ನೆರವನ್ನೇ ಕೋರಲಾಗಿದೆ. ಅವರು ಮಾಹಿತಿ ಡಿಕೋಡ್ ಮಾಡುವ ವಿಶ್ವಾಸವಿದೆ’ ಎಂದು ಎಚ್‌ಎಎಲ್ ಮೂಲಗಳು ತಿಳಿಸಿವೆ.

ಫೆ.4ರಂದು ವಿಮಾನಕ್ಕೆ ‘ಹೆವಿ ಡ್ರಾಪ್ ಟ್ಯಾಂಕ್’ ಅಳವಡಿಸಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದಾಗ ದುರಂತ ಸಂಭವಿಸಿತ್ತು. ಪೈಲಟ್‌ಗಳಾದ ಸಮೀರ್ ಅಬ್ರೋಲ್ ಹಾಗೂ ಸಿದ್ಧಾರ್ಥ್ ನೇಗಿ ಮೃತಪಟ್ಟಿದ್ದರು.

ಮನಕಲಕಿದ ಕವನ: ಸಮೀರ್ ಸೋದರ ಶುಶಾಂತ್ ಅಬ್ರೋಲ್ ಅವರು ಶವದ ಪಕ್ಕದಲ್ಲೇ ಕುಳಿತು ಕವನ ರಚಿಸಿದ್ದರು. ಅದನ್ನು ಸಿದ್ಧಾರ್ಥ್ ನೇಗಿಯ ಪತ್ನಿ ಗರೀಮಾ ಅವರೂ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆ ಸಾಲುಗಳು ಹೀಗಿವೆ...

‘ಅವರು ಆಗಸದಿಂದ ನೆಲಕ್ಕೆ ಅಪ್ಪಳಿಸಿದರು. ಮುರಿದ ಮೂಳೆಗಳ ಜತೆಗೆ ಬ್ಲ್ಯಾಕ್‌ ಬಾಕ್ಸ್‌ ಸಿಕ್ಕಿತು. ಅವರು ಪ್ಯಾರಚ್ಯೂಟ್ ಬಿಡಿಸಿದ ರೀತಿ ಸರಿಯಾಗಿಯೇ ಇತ್ತು. ಅದಕ್ಕೆ ಬೆಂಕಿ ಹೊತ್ತಿಕೊಂಡು ಕನಸುಗಳೆಲ್ಲ ಸುಟ್ಟು ಹೋದವು. ಅವರು ಹಿಂದೆಂದೂ ಅಷ್ಟು ಭಾರವಾಗಿ ಉಸಿರಾಡಿರಲಿಲ್ಲ.’

‘ಚಾಲ್ತಿಯಲ್ಲಿ ಇಲ್ಲದ ಯಂತ್ರಗಳನ್ನು (ಔಟ್‌ಡೇಟೆಡ್) ಕೊಟ್ಟು ಯೋಧರನ್ನು ಯುದ್ಧಕ್ಕೆ ಕಳುಹಿಸಿದರು. ಕ್ಷಮೆಯೂ ಇಲ್ಲದ, ಧನ್ಯವಾದವೂ ಸಿಗದ ಕೆಲಸ ಅವರದ್ದು. ಬೇರೆಯವರಿಗೆ ಬೆಳಕು ತೋರಿಸುವ ಸಲುವಾಗಿ ತಾವು ಅಪಾಯ ಎದುರಿಸಿದರು. ಅತ್ತ ಅಧಿಕಾರಿಶಾಹಿಗಳು ಭ್ರಷ್ಟಾಚಾರದ ಬೆಣ್ಣೆ ಹಾಗೂ ವೈನ್ ಸವಿಯುತ್ತಿದ್ದರು’ ಎಂದು ಶಶಾಂಕ್ ಬರೆದಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !