ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೆಳ್ಳೆಗಣ್ಣು: ಇರಲಿ ಜಾಗೃತಿ!

Last Updated 3 ಜುಲೈ 2019, 19:45 IST
ಅಕ್ಷರ ಗಾತ್ರ

ಫಾತಿಮಾ ಮೊದಲ ದಿನ ಶಾಲೆಗೆ ಹೋದಾಗ ಮಕ್ಕಳೆಲ್ಲಾ ಆಕೆಯನ್ನು ವಿಚಿತ್ರವಾಗಿ ನೋಡುತ್ತಿದ್ದರು. ಒಬ್ಬರನ್ನೊಬ್ಬರು ನೋಡಿಕೊಂಡು ಮುಸಿ, ಮುಸಿ ನಗುತ್ತಿದ್ದರು. ಸಮಸ್ಯೆಯ ಅರಿವು ಇಲ್ಲದೆ ಆಕೆ ಸಾಕಷ್ಟು ನೋವು ಹಾಗೂ ಹಿಂಸೆಯನ್ನು ಅನುಭವಿಸಿದಳು. ದಿನೇ ದಿನೇ ಮಾನಸಿಕವಾಗಿ ಕುಗ್ಗಿದಳು.

8 ವರ್ಷದ ಬಾಲಕಿ ಫಾತಿಮಾ ತಾನು ಶಾಲೆಗೆ ಹೋಗುವುದೇ ಇಲ್ಲ ಎಂದು ಹಠ ಹಿಡಿದು ಕುಳಿತಾಗ ದಿಕ್ಕು ಕಾಣದ ಪೋಷಕರು ಕಾರಣ ಹುಡುಕಲು ಆರಂಭಿಸಿದರು. ಹುಟ್ಟಿದಾಗಲೇ ಇದ್ದ ಮೆಳ್ಳೆಗಣ್ಣು ಆಕೆಯನ್ನು ಬಹುವಾಗಿ ಕಾಡಿತ್ತು. ವಿಚಿತ್ರವಾಗಿ ಕತ್ತನ್ನು ತಿರುಗಿಸಿ ನೋಡುವ ಅಭ್ಯಾಸದಿಂದಾಗಿಯೇ ಇತರ ಮಕ್ಕಳು ಆಕೆಯನ್ನು ಹತ್ತಿರ ಸೇರಿಸುತ್ತಿರಲಿಲ್ಲ.

‘ನೇರವಾಗಿ ನೋಡುತ್ತಿರಲಿಲ್ಲ. ಕತ್ತನ್ನು ಬಾಗಿಸಿ ಮೆಳ್ಳೆಗಣ್ಣಿನಿಂದ ನೋಡುತ್ತಿದ್ದಳು. ದಿನ ಕಳೆದಂತೆಕತ್ತು ಬಾಗಿಕೊಂಡಿತ್ತು. ಹುಟ್ಟಿದಾಗಲೇ ಅವಳಿಗೆ ಮೆಳ್ಳೆಗಣ್ಣು ಇತ್ತು. ಆದರೆ ಇದಕ್ಕೂ ಚಿಕಿತ್ಸೆ ಇರಬಹುದು ಎಂಬ ಜ್ಞಾನ ನಮಗೆ ಇರಲಿಲ್ಲ. ಸಮಸ್ಯೆ ಹೆಚ್ಚಾದಾಗ ವೈದ್ಯರನ್ನು ಕಾಣಲು ನಿರ್ಧರಿಸಿದೆವು‘ ಎಂದು ಫಾತಿಮಾಳ ತಂದೆ ಸೈಯದ್ ನಾಜಿಂ ಹೇಳಿದರು.

ಮೆಳ್ಳೆಗಣ್ಣಿಗೂ ಇದೆ ಚಿಕಿತ್ಸೆ

ಮೆಳ್ಳೆಗಣ್ಣು ಇರುವ ಮಗು ಹುಟ್ಟಿದ್ದು ನಮ್ಮ ದುರಾದೃಷ್ಟ ಎಂದು ತಿಳಿದುಕೊಂಡು ಸುಮ್ಮನಾಗುವ ಪೋಷಕರೇ ಹೆಚ್ಚು. ಇದಕ್ಕೂ ಚಿಕಿತ್ಸೆ ಇರಬಹುದು ಎಂಬ ಜ್ಞಾನ ಬಹಳಷ್ಟು ಮಂದಿಗೆ ಇಲ್ಲ. ವೈದ್ಯರ ಪ್ರಕಾರ ಮೆಳ್ಳೆಗಣ್ಣು ಇರುವ ಶೇ 90 ರೋಗಿಗಳನ್ನು ಗುಣಪಡಿಸಬಹುದು. ಕೆಲವರಿಗೆ ನಿಯಮಿತವಾಗಿ ಕನ್ನಡಕ ಹಾಕಿದರೆ ಸಾಕು ಸರಿಹೋಗುತ್ತದೆ. ಕೆಲವರಿಗೆ ಪೊರೆ ಶಸ್ತ್ರಚಿಕಿತ್ಸೆ ಮಾಡಿದರೂ ಸರಿಯಾಗಿಬಿಡುತ್ತದೆ. ಇನ್ನು ಕೆಲವರಿಗೆ ಸಂಕೀರ್ಣವಾದ ತೊಂದರೆ ಇರುತ್ತದೆ. ಕಣ್ಣಿನಲ್ಲಿ ದೃಷ್ಟಿ ಬರುವ ಲಕ್ಷಣಗಳು ಇದ್ದರೆ ಮಾತ್ರ ಚಿಕಿತ್ಸೆ ಯಶಸ್ವಿಯಾಗುತ್ತದೆ.

ಅಪರೂಪದ ಕಾಯಿಲೆ

ಫಾತಿಮಾಗೆ ಇದ್ದದ್ದು ಬರಿ ಮೆಳ್ಳೆಗಣ್ಣು ಮಾತ್ರ ಅಲ್ಲ. ‘ಕಾಂಜೆನಿಟಲ್‌ ಸುಪೀರಿಯರ್‌ ಒಬ್ಲಿಕ್‌ ಪಾಲಿ’ ಎಂಬ ಅಪರೂಪದ ಕಾಯಿಲೆ. ಇದು ಕಣ್ಣಿನ ಸ್ನಾಯುವಿಗೆ ಆಗುವ ಪಾರ್ಶ್ವವಾಯು. ಕತ್ತನ್ನು ತಿರುಗಿಸಿ ನೋಡುವ ಕಾರಣದಿಂದ ಆಗುತ್ತದೆ. ದುರ್ಬಲ ಮಾಂಸಖಂಡಗಳು ಕಣ್ಣಿನ ಚಲನವಲನಗಳಿಗೆ ಅಡ್ಡಿ ಉಂಟುಮಾಡುತ್ತವೆ. ಹೀಗೆ ಆದಾಗ ಎದುರು ಇರುವ ವಸ್ತು ಅಥವಾ ವ್ಯಕ್ತಿ ಎರಡೆರಡು ಕಾಣಲು ಶುರುವಾಗುತ್ತದೆ. ಆಗ ಮಕ್ಕಳು ಓರೆಯಾಗಿ ನೋಡುತ್ತಾರೆ. ಈ ರೀತಿ ನೋಡುವುದರಿಂದ ದೂರದಲ್ಲಿನ ಎರಡು ವಸ್ತುಗಳನ್ನು ಒಟ್ಟಿಗೆ ನೋಡಲು ಸಾಧ್ಯವಾಗುತ್ತದೆ. ಕ್ರಮೇಣ ಇದೇ ಅಭ್ಯಾಸವಾಗುತ್ತದೆ.

ಡಾ.ಅಗರವಾಲ್‌ ಆಸ್ಪತ್ರೆಯ ವೈದ್ಯ ಮುರಳೀಧರ ಕೃಷ್ಣ ಈ ಕುರಿತು ಸಾಕಷ್ಟು ಮಾಹಿತಿ ನೀಡಿದರು. ‘ವರ್ಟಿಕಲ್‌ ಸ್ಕ್ವಿಂಟ್‌’ ಇದು ಲಕ್ಷದಲ್ಲಿ ಮೂರು ಮಕ್ಕಳಿಗೆ ಮಾತ್ರ ಬರುತ್ತದೆ. ದೊಡ್ಡವರಿಗೆ ಬರುವುದಿಲ್ಲ. ಅಪಘಾತ ಆದಾಗ ಮಾತ್ರ ದೊಡ್ಡವರಲ್ಲಿ ಕಂಡುಬರಬಹುದು. ಫಾತಿಮಾಗೆ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ತಡ ಆಗಿದ್ದರೆ ಕತ್ತಿನ ಮಾಂಸಖಂಡದಲ್ಲಿ ಶಾಶ್ವತ ಬದಲಾವಣೆ ಆಗಿರುತ್ತಿತ್ತು. 1 ತಾಸು 15 ನಿಮಿಷಗಳ ಸವಾಲಿನ ಶಸ್ತ್ರಚಿಕಿತ್ಸೆ ಬಳಿಕ ಆಕೆ ಸರಿಹೋಗಿದ್ದಾಳೆ’ ಎಂದು ಅವರು ಮಾಹಿತಿ ನೀಡಿದರು.

ಈಗ ಆಕೆಯ ಅಸಹಜ ಭಂಗಿ ಕಡಿಮೆಯಾಗಿದೆ. ನೇರವಾಗಿ ನೋಡುತ್ತಿದ್ದಾಳೆ. ಪಾರ್ಶ್ವವಾಯುವಿಗೆ ಒಳಗಾಗಿದ್ದ ಸ್ನಾಯುವನ್ನು ಸರ್ಜರಿ ಮೂಲಕ ಸರಿಮಾಡಲಾಗಿದೆ.

ಸರ್ಜರಿಯ ಸವಾಲುಗಳು

‘ಮೆಳ್ಳೆಗಣ್ಣನ್ನು ಸುಲಭವಾಗಿ ಗುರುತಿಸಬಹುದು. ಆದರೆ ಫಾತಿಮಾಗೆ ಇದ್ದಂತಹ ಸಮಸ್ಯೆಗಳನ್ನು ಅಷ್ಟು ಸುಲಭಕ್ಕೆ ಗುರುತಿಸಲು ಸಾಧ್ಯವಾಗಲಿಲ್ಲ. ಅನಸ್ತೇಷಿಯಾ ಕೊಟ್ಟು ಕೆಲವು ಪರೀಕ್ಷೆಗಳನ್ನು ಮಾಡಿದ ಬಳಿಕ ಆಕೆಗೆ ಇರುವ ‘ಲೇಜಿ ಐ’, ಪಾರ್ಶ್ವವಾಯುವಿನ ಸಮಸ್ಯೆಗಳು ತಿಳಿದವು. ಸರ್ಜರಿ ಕೂಡ ಅಷ್ಟೇ ಸೂಕ್ಷ್ಮವಾದದ್ದು. ಕಣ್ಣಿನ ಸ್ನಾಯುವನ್ನು ಸರಿಸುವ ಕೆಲಸ ಕಷ್ಟ. ಇದಾದ ನಂತರವೂ ಕೆಲವರಿಗೆ ಸಮಸ್ಯೆ ಸರಿಹೋಗುವುದಿಲ್ಲ. ಆದ್ದರಿಂದಲೇ ಬಹಳಷ್ಟು ವೈದ್ಯರು ಈ ಸರ್ಜರಿ ಮಾಡಲು ಒಪ್ಪುವುದಿಲ್ಲ’ ಎಂದು ಡಾ.ಅಗರವಾಲ್‌ ಆಸ್ಪತ್ರೆಯ ಡಾ.ರಘು ನಾಗರಾಜ್‌ ಹೇಳಿದರು.

ಈ ಶಸ್ತ್ರಚಿಕಿತ್ಸೆಗೆ ₹50 ಸಾವಿರ ಖರ್ಚಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT