ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಸಾವಿರ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ!

ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ
Last Updated 14 ಜನವರಿ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಯೋಜನೆಯ ಅಡಿ ಚಿಕಿತ್ಸೆ ಬಯಸಿ ಬಂದ 13,656 ರೋಗಿಗಳನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಸೌಲಭ್ಯ ಕೊರತೆಯ ಕಾರಣ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಸಾಗಹಾಕಿವೆ.

ಸರ್ವರಿಗೂ ಆರೋಗ್ಯ ವಿಮೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ‘ಆರೋಗ್ಯ ಕರ್ನಾಟಕ’ ಯೋಜನೆ ಹಾಗೂ ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ’ ಯೋಜನೆಗಳನ್ನು 2018ರ ಅಕ್ಟೋಬರ್‌ನಲ್ಲಿ ವಿಲೀನಗೊಳಿಸಲಾಯಿತು. ಈ ಯೋಜನೆಯಡಿ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳು ಇನ್ನೂ ಸಜ್ಜಾಗದ ಕಾರಣ ರೋಗಿಗಳು ಅನಿವಾರ್ಯವಾಗಿಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಮೂಲಗಳ ಪ್ರಕಾರ, ದ್ವಿತೀಯ ಹಾಗೂ ತೃತೀಯ ಹಂತದ ಅರೋಗ್ಯ ಸೇವೆಗಳು ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿಲ್ಲ. ಆದ್ದರಿಂದ ಸಂಕೀರ್ಣ ಕಾಯಿಲೆಗಳಿಂದ ಬಳಲುತ್ತಿರುವವರು ಇಂತಹ ಆಸ್ಪತ್ರೆಗಳಿಗೆ ಬಂದಾಗ ಸರ್ಕಾರಿವೈದ್ಯರು, ಯೋಜನೆಯಡಿನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತೆ ಅನಿವಾರ್ಯವಾಗಿ ಶಿಫಾರಸು ಮಾಡಬೇಕಾದ ಸ್ಥಿತಿ ಇದೆ.

ದಂತ ಚಿಕಿತ್ಸೆ, ಪ್ರಸೂತಿ, ಸ್ತ್ರೀರೋಗ, ಮೂಳೆ ಸಂಬಂಧಿ ಕಾಯಿಲೆ, ಜಠರ ಶಸ್ತ್ರಚಿಕಿತ್ಸೆ, ಕಣ್ಣಿನ ತೊಂದರೆ ಮತ್ತುಸಾಮಾನ್ಯ ಶಸ್ತ್ರಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನುದ್ವಿತೀಯ ಹಂತದ ಚಿಕಿತ್ಸೆಗಾಗಿ ಹಾಗೂ ಸುಟ್ಟಗಾಯ,ಹೃದಯ ಸಂಬಂಧಿ ಕಾಯಿಲೆ,ಹೃದಯ ರಕ್ತನಾಳ ಶಸ್ತ್ರಚಿಕಿತ್ಸೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ನರ ಶಸ್ತ್ರಚಿಕಿತ್ಸೆ ಮತ್ತು ಕ್ಯಾನ್ಸರ್‌ ಕಾಯಿಲೆಗಳ ತೃತೀಯ ಹಂತದ ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳು ಒದಗಿಸುತ್ತವೆ. ಆದರೆ ಕೆಲವು ಆಸ್ಪತ್ರೆಗಳಲ್ಲಿದ್ವಿತೀಯ ಮತ್ತು ತೃತೀಯ ಹಂತದ ಅರೋಗ್ಯ ಸೇವೆಗಳು ಲಭ್ಯವಿಲ್ಲ. ನೂತನ ಜಿಲ್ಲೆಗಳಲ್ಲಿತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಸೌಲಭ್ಯ ಒದಗಿಸಲು ಸಮಯ ಹಿಡಿಯುತ್ತದೆ’ ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಮತ್ತು ಯೋಜನೆಯ ಉಸ್ತುವಾರಿ ಡಾ.ಸಜ್ಜನ್ ಶೆಟ್ಟಿ ತಿಳಿಸಿದರು.

‘ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳು ಲಭ್ಯವಿವೆ. ಆದರೆ ಎಲ್ಲ ರೋಗಿಗಳನ್ನು ಬೆಂಗಳೂರು ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದಿಲ್ಲ. ಅವರ ಪಕ್ಕದ ಆಸ್ಪತ್ರೆಗಳಲ್ಲಿಸೇವೆಗಳು ಲಭ್ಯವಿರದಿದ್ದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಇಂತಹದ್ದೇ ಖಾಸಗಿ ಆಸ್ಪತ್ರೆಗೆ ಸೇರಿಸಿ ಎಂದು ಅವರು ಹೇಳುವುದಿಲ್ಲ. ಹಾಗಾಗಿ ಇಲ್ಲಿ ಹಿತಾಸಕ್ತಿ ಸಂಘರ್ಷಕ್ಕೆ ಆಸ್ಪದ ಇಲ್ಲ’ ಎಂದರು.

‘ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಸೌಕರ್ಯ ಕೊರತೆ ಇಲ್ಲ. ಕೆಲವು ಆಸ್ಪತ್ರೆಗಳಲ್ಲಿ ಮೊಣಕಾಲು ಬದಲಿಸುವ ಶಸ್ತ್ರಚಿಕಿತ್ಸೆ ಮತ್ತುಕಾರ್ನಿಯಾ ಕಸಿಯಂತಹ ಚಿಕಿತ್ಸೆಗಳನ್ನು ಸಹ ಮಾಡಿಸಿಕೊಳ್ಳಬಹುದು’ ಎಂದು ಆರೋಗ್ಯ ಇಲಾಖೆಯ ಇನ್ನೊಬ್ಬ ಅಧಿಕಾರಿ ತಿಳಿಸಿದರು.

ಅಂಕಿ–ಅಂಶಗಳು

38,655 - ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆದವರು (ಡಿಸೆಂಬರ್‌ವರೆಗೆ)

13,656 - ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸುಗೊಂಡವರು

₹301 ಕೋಟಿ - ಆರೋಗ್ಯ ಯೋಜನೆ ಅಡಿ ನೀಡಲಾದ ಚಿಕಿತ್ಸೆಗೆ ಆಗಿರುವ ಒಟ್ಟು ವೆಚ್ಚ (ಡಿಸೆಂಬರ್‌ವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT