ಜಾಹೀರಾತು ಸ್ಟ್ರಕ್ಚರ್ಸ್ ತಂಟೆಗೆ ಹೋಗಬೇಡಿ: ಹೈಕೋರ್ಟ್‌

7

ಜಾಹೀರಾತು ಸ್ಟ್ರಕ್ಚರ್ಸ್ ತಂಟೆಗೆ ಹೋಗಬೇಡಿ: ಹೈಕೋರ್ಟ್‌

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಸ್ಥಳಗಳಲ್ಲಿನ ಜಾಹೀರಾತು ಫಲಕ ನೇತು ಹಾಕುವ ಆಧಾರಕಂಬ ಅಥವಾ ರಚನೆಗಳ (ಸ್ಟ್ರಕ್ಚರ್‌) ತೆರವಿಗೆ ತಡೆ ನೀಡುವಂತೆ ಕೋರಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.

ಈ ಕುರಿತಂತೆ ನಗರದ ಎಲಿಕ್ಸಿರ್ ಜಾಹೀರಾತು ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿ, ‘ಅರ್ಜಿದಾರರು ಹಾಕಿರುವ ಸ್ಟ್ರಕ್ಚರ್ಸ್ ತೆರವಿಗೆ ಮುಂದಾಗಬಾರದು’ ಎಂದು ನಿರ್ದೇಶಿಸಿ ಮಧ್ಯಂತರ ತಡೆ ನೀಡಿದೆ.‌

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ಜಾಹೀರಾತು ಫಲಕಗಳನ್ನು ನೇತು ಹಾಕಲು ಆಧಾರವಾಗಿರುವ ಸ್ಟ್ರಕ್ಚರ್‌ಗಳನ್ನು ತೆಗೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಬಿಬಿಎಂಪಿ ಅವುಗಳ ತಂಟೆಗೆ ಹೋಗದಂತೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ಸಾರ್ವಜನಿಕರ ಆರೋಗ್ಯ ಹಾಗೂ ಜೀವರಕ್ಷಣೆ ದೃಷ್ಟಿಯಿಂದ ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆ ಅನುಸಾರ ಇಂತಹ ಸ್ಟ್ರಕ್ಚರ್‌ಗಳನ್ನು ತೆಗೆಯಲು ಬಿಬಿಎಂಪಿಗೆ ಎಲ್ಲ ಅಧಿಕಾರವಿದೆ’ ಎಂದರು.

‘ನಗರದ ಸೌಂದರ್ಯ ವೃದ್ಧಿಗೆ ಮತ್ತು ಕಾನೂನು ಬಾಹಿರ ಜಾಹೀರಾತುಗಳನ್ನು ತೆರವುಗೊಳಿಸುವ ದಿಸೆಯಲ್ಲಿ ಬಿಬಿಎಂಪಿ ಕಾರ್ಯ ಪ್ರವೃತ್ತವಾಗಿದೆ’ ಎಂದೂ ಪ್ರತಿಪಾದಿಸಿದರು.

‍ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು, ಪೂರ್ವ ವಲಯದ ಜಂಟಿ ನಿರ್ದೇಶಕ ಮತ್ತು ಎಚ್‌ಆರ್‌ಆರ್ ಲೇಔಟ್‌ ಉಪ ವಿಭಾಗದ ಸಹಾಯಕ ಕಂದಾಯಾಧಿಕಾರಿ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯ‍ಪೀಠ, ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದೆ. 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !