ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಬೈ-ಲಾ ನೀತಿ ಅಂತಿಮಗೊಳಿಸಿ: ಸರ್ಕಾರಕ್ಕೆ ಹೈಕೋರ್ಟ್ ಕೊನೆ ಅವಕಾಶ

Last Updated 15 ಮಾರ್ಚ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಹೀರಾತು ನೀತಿಗೆ ಸಂಬಂಧಿಸಿದ ಉಪ ನಿಯಮಗಳ (ಬೈ–ಲಾ) ಕರಡು ನೀತಿಗೆ ಇನ್ನೊಂದು ವಾರದಲ್ಲಿ ಅನುಮೋದನೆ ನೀಡಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಖಡಕ್ ತಾಕೀತು ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್‌, ಹೋರ್ಡಿಂಗ್ಸ್‌ ತೆರವು ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಮತ್ತು ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಕರಡು ನೀತಿ ಅಂತಿಮಗೊಳಿಸುವಂತೆ ಕೋರ್ಟ್ ನೀಡಿರುವ ಆದೇಶ ಪಾಲಿಸಲು ಸಾಧ್ಯವಾಗಿಲ್ಲ’ ಎಂದರು.

ಇದಕ್ಕೆ ನ್ಯಾಯಪೀಠ, ‘ಕೋರ್ಟ್ ಆದೇಶ ಪಾಲಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತದೆಯೇ’ ಎಂದು ಪ್ರಶ್ನಿಸಿತು. ಇದಕ್ಕೆ ಹೊಳ್ಳ ಅವರು, ‘ನ್ಯಾಯಪೀಠ ಈ ಕುರಿತು ಲಿಖಿತ ಆದೇಶ ನೀಡಿದಲ್ಲಿ ಆಕ್ಷೇಪ ಇರುವುದಿಲ್ಲ’ ಎಂದು ತಿಳಿಸಿ, ಒಂದು ವಾರ ಕಾಲಾವಕಾಶ ಕೋರಿದರು.

ಇದನ್ನು ಮನ್ನಿಸಿದ ನ್ಯಾಯಪೀಠ ಲಿಖಿತ ಆದೇಶ ನೀಡಿ, ‘ಇದು ಅಂತಿಮ ಅವಕಾಶ. ಇನ್ನೊಂದು ವಾರದಲ್ಲಿ ಕರಡು ಬೈಲಾಗೆ ಅನುಮೋದನೆ ನೀಡಿ, ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿತು.

ಅನುಮತಿ: ಇದೇ ವೇಳೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲ ವಿ. ಶ್ರೀನಿಧಿ ಮಧ್ಯಂತರ ಅರ್ಜಿ ಕುರಿತಂತೆ ವಿವರಿಸಿ, ‘2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಒಳಪಟ್ಟ ಸ್ಥಿರಾಸ್ತಿಗಳ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಪ್ರಚಾರ ಅಭಿಯಾನದ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ಅನುಮತಿ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಷರತ್ತುಬದ್ಧ ಅನುಮತಿ ನೀಡಿದ ನ್ಯಾಯಪೀಠ, ‘ಚುನಾವಣೆ ಮುಗಿದ ಕೂಡಲೇ ಎಲ್ಲ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು’ ಎಂದು ನಿರ್ದೇಶಿಸಿತು.

ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT