ಬೆಳೆ ನಾಶ: ವಿಷ ಕುಡಿಯುವ ಪರಿಸ್ಥಿತಿ: ರೈತರ ಅಳಲು

7
ಜನಸ್ಪಂದನಾ ಸಭೆ

ಬೆಳೆ ನಾಶ: ವಿಷ ಕುಡಿಯುವ ಪರಿಸ್ಥಿತಿ: ರೈತರ ಅಳಲು

Published:
Updated:
Deccan Herald

ಕೋಲಾರ: ‘ವೈರಸ್‌ ರೋಗದಿಂದ ಬೆಳೆಗಳು ನಾಶವಾಗುತ್ತಿದ್ದು, ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ’ ಎಂದು ಹುತ್ತೂರು ಹೋಬಳಿ ರೈತರು ಅಳಲು ತೋಡಿಕೊಂಡರು.

ತಾಲ್ಲೂಕಿನ ಹುತ್ತೂರು ಹೋಬಳಿಯಲ್ಲಿ ಗುರುವಾರ ನಡೆದ ಜನಸ್ಪಂದನ ಸಭೆಯಲ್ಲಿ ರೈತರು, ‘ಜೀವನ ನಿರ್ವಹಣೆಗಾಗಿ ಪಾಲಿಹೌಸ್‌ ನಿರ್ಮಿಸಿಕೊಂಡಿದ್ದೇವೆ. ಆದರೆ, ಸರ್ಕಾರದಿಂದ ಪಾಲಿಹೌಸ್‌ ಸಬ್ಸಿಡಿ ಬಿಡುಗಡೆಯಾಗಿಲ್ಲ. ಮತ್ತೊಂದೆಡೆ ಬೆಳೆ ನಷ್ಟವಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಎದುರು ಕಣ್ಣೀರಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ನಾನು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಸೇವೆ ಸಲ್ಲಿಸಿದ್ದೆ. ಹೀಗಾಗಿ ಈ ಭಾಗದ ರೈತರ ಸಂಕಷ್ಟದ ಅರಿವಿದೆ. ಯಾರೂ ಆತ್ಮಹತ್ಯೆಯ ಯೋಚನೆ ಮಾಡಬಾರದು. ಪಾಲಿಹೌಸ್‌ ನಿರ್ಮಾಣಕ್ಕೆ ನಿರೀಕ್ಷೆಗೂ ಮೀರಿ ಅರ್ಜಿ ಬಂದ ಕಾರಣ ಸಬ್ಸಿಡಿ ವಿತರಣೆಯಲ್ಲಿ ಗೊಂದಲ ಎದುರಾಗಿದ್ದವು. ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮನವಿ ಮಾಡಿದರು.

‘ಬರ ಪರಿಸ್ಥಿತಿ ನಡುವೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಈ ರೀತಿ ಬೆಳೆ ನಷ್ಟವಾದರೆ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಏನೇ ಆದರೂ ಸರ್ಕಾರ ನಿಮ್ಮೊಂದಿಗೆ ಇದೆ. ರೈತರು ಧೃತಿಗಡೆಬಾರದು’ ಎಂದು ಧೈರ್ಯ ತುಂಬಿದರು.

‘ಗ್ರಾಮಕ್ಕೆ ಬರುವ ರಸ್ತೆ ಪಕ್ಕದಲ್ಲಿ ಬಾರ್ ಆರಂಭಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮದ್ಯವ್ಯಸನಿಗಳ ಉಪಟಳದಿಂದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಆ ಭಾಗದಲ್ಲಿ ಓಡಾಡದಂತಾಗಿದೆ. ಬಾರ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹುತ್ತೂರು ಗ್ರಾಮಸ್ಥ ಸತೀಶ್ ಕೋರಿದರು.

ಬಸ್ ಸೌಕರ್ಯವಿಲ್ಲ: ‘ಹುತ್ತೂರು ಹೋಬಳಿ ಕೇಂದ್ರವಾಗಿದ್ದರೂ ಬಸ್ ಸೌಕರ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಯ ತಂಬಳ್ಳಿ ಗೇಟ್ ಬಳಿ ಆಗಾಗ್ಗೆ ಅಪಘಾತ ಸಂಭವಿಸುತ್ತಿವೆ. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ನಿವೇಶನರಹಿತರಿಗೆ ಮನೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿವೇಶನರಹಿತರು ಮತ್ತು ವಸತಿರಹಿತರ ಪಟ್ಟಿ ಸಿದ್ಧಪಡಿಸಿ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಿರಿ. ನಂತರ ಸರ್ಕಾರಿ ಜಾಗ ಗುರುತಿಸಿ ಜಿಲ್ಲಾಡಳಿತದ ಗಮನಕ್ಕೆ ತಂದರೆ ಆಶ್ರಯ ಯೋಜನೆಯಡಿ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಅಕ್ರಮ ಖಾತೆ: ‘ಗ್ರಾ.ಪಂ ವ್ಯಾಪ್ತಿಯಲ್ಲಿ ಅಕ್ರಮ ಖಾತೆ ಸೃಷ್ಟಿ ಹೆಚ್ಚಿದ್ದು, ಪಿಡಿಒಗಳಿಗೆ ದೂರು ಕೊಟ್ಟರೂ ಅಕ್ರಮಕ್ಕೆ ಕಡಿವಾಣ ಬಿದ್ದಿಲ್ಲ’ ಎಂದು ಗ್ರಾಮದ ಸಂತೋಷ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಿವಾನಂದ, ‘ಅಕ್ರಮ ಖಾತೆ ಸೃಷ್ಟಿ ಸಂಬಂಧ ಎರಡು ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ’ ಎಂದು ತಿಳಿಸಿದರು.

‘ರೈತರ ಜಮೀನಿನ ಪಿ ನಂಬರ್‌ ಸಮಸ್ಯೆ ಪರಿಹಾರಕ್ಕೆ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ವರ್ಷವೇ ಕಳೆದರೂ ಅರ್ಜಿ ವಿಲೇವಾರಿ ಆಗುತ್ತಿಲ್ಲ’ ಎಂದು ಗ್ರಾ.ಪಂ ಮಾಜಿ ಸದಸ್ಯ ವೆಂಕಟಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಿಯಮಿತವಾಗಿ ಸಭೆ: ‘ಎಲ್ಲಾ ಹೋಬಳಿ ಮಟ್ಟದಲ್ಲಿ ನಿಯಮಿತವಾಗಿ ಜನಸ್ಪಂದನಾ ಸಭೆ ನಡೆಸುತ್ತೇವೆ. ಇದು ಆರಂಭವಷ್ಟೇ. ನಾವೇ ನಿಮ್ಮ ಗ್ರಾಮಕ್ಕೆ ಬಂದರೆ ಸ್ಥಳೀಯ ಸಮಸ್ಯೆ ಅರಿಯಲು ಸಹಾಯವಾಗುತ್ತದೆ. ಮತ್ತೊಮ್ಮೆ ಹೆಚ್ಚಿನ ಪ್ರಚಾರ ನೀಡಿ ಸಭೆ ಹಮ್ಮಿಕೊಳ್ಳುತ್ತೇವೆ. ಸಭೆಯಲ್ಲಿ ಸಲ್ಲಿಕೆಯಾಗಿರುವ ದೂರುಗಳ ಸಂಬಂಧ ಅಧಿಕಾರಿಗಳನ್ನು ಕರೆಸಿ ಪರಿಹಾರ ಕಲ್ಪಿಸಲು ಸೂಚಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಕಂದಾಯ ಅದಾಲತ್: ‘ಹುತ್ತೂರು ಹೋಬಳಿಯಲ್ಲಿ ಕಂದಾಯ ಅದಾಲತ್ ನಡೆಸಲಾಗಿದ್ದು, ಮತ್ತೊಂದು ಹಂತದ ಅದಾಲತ್‌ಗೆ ದಿನಾಂಕ ನಿಗದಿಪಡಿಸಲಾಗಿದೆ. ಅದಾಲತ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ’ ಎಂದು ತಹಶೀಲ್ದಾರ್ ವಿಜಯಣ್ಣ ಮಾಹಿತಿ ನೀಡಿದರು.

ಹುತ್ತೂರು ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಸಂಬಂಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಾಜಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ಹುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ದೇವರಾಜ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಹಾಜರಿದ್ದರು.

***

ಅಂಕಿ ಅಂಶ.....
* 8 ಕಂದಾಯ ವೃತ್ತಗಳು
* 43 ಕಂದಾಯ ಗ್ರಾಮಗಳು
* 4 ಗ್ರಾಮ ಪಂಚಾಯಿತಿಗಳು
* 18,575 ಮಂದಿ ಖಾತೆದಾರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !