ಶುಕ್ರವಾರ, ಫೆಬ್ರವರಿ 26, 2021
29 °C
ವಿದ್ಯಾರ್ಥಿವೇತನ ವಿತರಣೆ

ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಗಳಿಸಿದ ಹಣ ಎಂದಿಗೂ ನಮ್ಮದಲ್ಲ. ನಾವು ಪಡೆದದ್ದನ್ನು ಸಮಾಜಕ್ಕೆ ಹಿಂತಿರುಗಿಸಿ, ಅದರ ಋಣ ತೀರಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ‘ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜೆ.ಪಿ.ನಾರಾಯಣಸ್ವಾಮಿ ಅವರು ತಮ್ಮ ಬದುಕಿನುದ್ದಕ್ಕೂ ದುರ್ಬಲ ಜನರ ಸೇವೆಗಾಗಿಯೇ ಶ್ರಮಿಸಿದ್ದರು. ಅವರ ದಾರಿಯಲ್ಲೇ ಮಗನೂ (ಜೆ.ಪಿ.ಸುಧಾಕರ) ಸಾಗುತ್ತಿದ್ದಾನೆ. ಆರ್ಥಿಕವಾಗಿ ಹಿಂದುಳಿದ, ವಿಶೇಷ ಚೇತನ ಮಕ್ಕಳಿಗಾಗಿಯೇ ಪ್ರತಿಷ್ಠಾನಆರಂಭಿಸಲಾಗಿದೆ’ ಎಂದರು.

ನಟ ಪುನೀತ್‌ ರಾಜಕುಮಾರ್, ‘ಯಾರೇ ಆಗಲಿ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿ, ನೂರಾರು ಜನರ ಬಾಳಿಗೆ ಬೆಳಕಾಗಿ’ ಎಂದರು.

ಪ್ರತಿಷ್ಠಾನದ ಗ್ರಂಥಾಲಯವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ವಿಶೇಷ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯ ನೀಡುವುದಾಗಿ ಪ್ರತಿಷ್ಠಾನ ಪ್ರಕಟಿಸಿತು. ಆರು ಮಕ್ಕಳಿಗೆ ತಲಾ ₹5 ಸಾವಿರ ವಿತರಿಸಲಾಯಿತು.  

‘ಆರ್ಥಿಕವಾಗಿ ಹಿಂದುಳಿದ ಬಡಮಕ್ಕಳ ಕಂಡುಬಂದಲ್ಲಿ ತಿಳಿಸಿ. ಅವರಿಗೂ ನೆರವು ಸಿಗುವಂತಾಗಲಿ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ತಿಳಿಸಿದರು.

₹ 7.5 ಲಕ್ಷ ನೆರವು: ನಗರದ ಮಾತೃಶ್ರೀ ಮನೋವಿಕಾಸ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳಿಗೆ ಒಂದು ವರ್ಷಕ್ಕಾಗುವಷ್ಟು ಸಮವಸ್ತ್ರ ಮತ್ತು ಊಟದ ಖರ್ಚಿಗೆ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ ಅವರು ₹ 7.5 ಲಕ್ಷ ನೆರವು ನೀಡಿದರು. ಬಳಿಕ ಆರ್‌.ಎಲ್‌.ಜಾಲಪ್ಪ ಟ್ರಸ್ಟ್‌ ₹ 1 ಲಕ್ಷ ನೆರವು ಪ್ರಕಟಿಸಿತು.

358 ಬಡ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಾರ್ಷಿಕ ₹ 20.65 ಲಕ್ಷ ವಿದ್ಯಾರ್ಥಿವೇತನ ವಿತರಿಸುವುದಾಗಿಯೂ ಪ್ರತಿಷ್ಠಾನವು ಘೋಷಿಸಿತು. (‍ಪದವಿ ₹ 5 ಸಾವಿರ, ಸ್ನಾತಕೋತ್ತರ ₹ 10, ಮೆಡಿಕಲ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹ 15 ಸಾವಿರ ವಿದ್ಯಾರ್ಥಿವೇತನ). ಮೈಕ್ರೊಬಯಾಲಜಿಯಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.

ಸಾಧಕರಿಗೆ ಸನ್ಮಾನ: ಲಕ್ಷ್ಮೀನರಸಯ್ಯ (ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ), ಎ.ಆರ್‌.ರಾಮಯ್ಯ (ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ), ಅಂಜಯ್ಯ (ಸಮಾಜದ ಹಿರಿಯರು), ಜಗದೀಶ (ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ), ಪರಶುರಾಮ್ (ಹಾವೇರಿ ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ).

104ರಲ್ಲೂ ಸ್ವಂತ ದುಡಿಮೆ ನಂಬಿರುವ ಲಿಂಗಮ್ಮ

ಮಂಡ್ಯದ ಲಿಂಗಮ್ಮ (104) ಎಂಬುವವರಿಗೆ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಮಾಸಾಶನ ನೀಡುವುದಾಗಿ ಪ್ರತಿಷ್ಠಾನವು ಪ್ರಕಟಿಸಿತು. 

ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಲಿಂಗಮ್ಮ, ಈ ವಯಸ್ಸಿನಲ್ಲೂ ಜೀವನದ ಬಂಡಿ ಮುನ್ನೆಡೆಸಲು ಸ್ವಂತ ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಅವರು ಮಂಡ್ಯದ ಮಹಾವೀರ ಚಿತ್ರಮಂದಿರದ ಬಳಿ ನಿತ್ಯ ಕಡಲೆಕಾಯಿ ವ್ಯಾಪಾರ ಮಾಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.