ಭಾನುವಾರ, ಸೆಪ್ಟೆಂಬರ್ 19, 2021
23 °C
ತ್ಯಾಜ್ಯ ನೀರು ಸಂಸ್ಕರಣಕ್ಕೆ ಜಲಮಂಡಳಿಯಿಂದ ಟೆಂಡರ್‌

ಕಗ್ಗದಾಸಪುರ ಕೆರೆಗಾಗಿ ಎಸ್‌ಟಿಪಿ ನಿರ್ಮಾಣ

ಪೀರ್‌ಪಾಷಾ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಳಚೆನೀರು, ಕಳೆ ಸಸ್ಯಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಕಗ್ಗದಾಸಪುರ ಕೆರೆ ಉಳಿಸುವ ಪ್ರಯತ್ನ ಕೊನೆಗೂ ಆರಂಭವಾಗಿದೆ.

ಈ ಕೆರೆಯ ಮೂಲೆಯೊಂದರಲ್ಲಿ ತ್ಯಾಜ್ಯನೀರು ಸಂಸ್ಕರಣ ಘಟಕವೊಂದನ್ನು(ಎಸ್‌ಟಿಪಿ) ನಿರ್ಮಿಸುವ ಮೂಲಕ ಜಲಮಾಲಿನ್ಯ ತಡೆಯಲು, ಕೆರೆ ಹಾಗೂ ಜಲಚರಗಳ ಜೀವ ಉಳಿಸಲು, ಸುತ್ತಲಿನ ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಎಸ್‌ಟಿಪಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ.

ರಾಜಕಾಲುವೆ ಇರುವ ಕೆರೆಯ ಉತ್ತರ ಭಾಗದಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದನ್ನು ನಿರ್ಮಾಣ ಮಾಡುವ ಗುತ್ತಿಗೆದಾರರೇ ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡುವ ಕರಾರನ್ನು ಟೆಂಡರ್‌ನಲ್ಲಿ ಸೇರಿಸಲಾಗಿದೆ.

‘ತ್ಯಾಜ್ಯನೀರು ಸಂಸ್ಕರಣೆಗೊಂಡ ಬಳಿಕ ಅದರಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಭಾರಲೋಹಗಳು ಬೇರ್ಪಡುತ್ತವೆ. ಜಲಚರಗಳ ಆವಾಸಕ್ಕೆ ಬೇಕಾಗುವಷ್ಟು ಆಮ್ಲಜನಕ ಪ್ರಮಾಣ (ಬಯೋಲಾಜಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌) ನೀರಿನಲ್ಲಿ ಇರಲಿದೆ. ಇದರಿಂದ ಕೆರೆಯಲ್ಲಿ ಕಳೆ ಸಸ್ಯಗಳು ಬೆಳೆಯುವುದಿಲ್ಲ’ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಕಳೆದ ವರ್ಷದ ಜೂನ್‌ನಲ್ಲಿ ಈ ಪ್ರದೇಶಕ್ಕೆ ನೀಡಿದ್ದಾಗ ಸ್ಥಳೀಯರು ಕೆರೆ ಅಭಿವೃದ್ಧಿಗೆ ಮನವಿ ಮಾಡಿದ್ದರು.

ಕೆರೆಯ ಸದ್ಯದ ಸ್ಥಿತಿ: ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಕಗ್ಗದಾಸಪುರ ಕೆರೆಯಲ್ಲಿ ಕೊಳಚೆನೀರು ನಿಂತಿದೆ.

ಜೊಂಡುಹುಲ್ಲು ಬೆಳೆದಿದೆ. ಸುತ್ತಲಿನ ನಾಗವಾರಪಾಳ್ಯ, ಭುವನೇಶ್ವರಿ ನಗರ, ಬೆನ್ನಿಗಾನಹಳ್ಳಿ, ಬೈರಸಂದ್ರ, ಮಲ್ಲೇಶಪಾಳ್ಯ, ಜಿ.ಎಂ.ಪಾಳ್ಯ, ಕಗ್ಗದಾಸಪುರ, ವಾರ್ಸೊವಾ ಬಡಾವಣೆಯ ತ್ಯಾಜ್ಯನೀರು ಕೆರೆಯ ಒಡಲು ಸೇರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿ ಸಾರ್ವಜನಿಕರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದುರ್ವಾಸನೆಯೂ ಹರಡುತ್ತಿದೆ.

ಅಂಕಿ–ಅಂಶ
37 ಎಕರೆ: ಕಗ್ಗದಾಸಪುರ ಕೆರೆಯ ವಿಸ್ತೀರ್ಣ
2 ಎಕರೆ: ಕೊಳಚೆನೀರು ಸಂಸ್ಕರಣ ಘಟಕ ನಿರ್ಮಾಣಗೊಳ್ಳುವ ಪ್ರದೇಶ
50 ಲಕ್ಷ ಲೀಟರ್‌: ಎಸ್‌ಟಿಪಿಯಲ್ಲಿ ಪ್ರತಿದಿನ ಸಂಸ್ಕರಣೆಗೊಳ್ಳುವ ಕೊಳಚೆನೀರಿನ ಪ್ರಮಾಣ
₹ 20 ಕೋಟಿ: ಜಲಮಂಡಳಿ ನಿಗದಿಪಡಿಸಿರುವ ಟೆಂಡರ್‌ ಮೊತ್ತ
18 ತಿಂಗಳು: ಕಾಮಗಾರಿ ಮುಗಿಸಲು ನಿಗದಿ ಪಡಿಸಿರುವ ಗಡುವು 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು