ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಉತ್ಸವ: ವಾಹನ ಸಂಚಾರ ಮಾರ್ಗ ಬದಲಾವಣೆ

Last Updated 18 ಏಪ್ರಿಲ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ ಶುಕ್ರವಾರ ನಡೆಯಲಿದೆ. ಈ ಮಾರ್ಗಗಳಲ್ಲಿ ರಾತ್ರಿ 8ರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದಾರೆ.

ಸಿಟಿ ಮಾರುಕಟ್ಟೆ ವೃತ್ತದಿಂದ (ಅವೆನ್ಯೂ ರಸ್ತೆ) ಮೈಸೂರು ಬ್ಯಾಂಕ್ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇಲ್ಲಿ ಸಂಚರಿಸಬೇಕಿದ್ದ ವಾಹನಗಳು, ಎಸ್.ಜೆ.ಪಿ ರಸ್ತೆ, ಟೌನ್ ಹಾಲ್, ಕೆಂಪೇಗೌಡ ರಸ್ತೆ ಮೂಲಕ ಹೋಗಬಹುದು.

ಉತ್ಸವವು ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಮೈಸೂರು ರಸ್ತೆಯ ಎ.ಎಸ್.ಆರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ವೃತ್ತ, ರಾಯನ್ ವೃತ್ತದ ಮೂಲಕ ಜೆ.ಸಿ.ರಸ್ತೆ ಪ್ರವೇಶಿಸಿಸಬಹುದು. ಮೆಡಿಕಲ್ ಕಾಲೇಜು ವೃತ್ತದಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಪ್ರೊ. ಶಿವಶಂಕರರಾವ್ ವೃತ್ತದ ಮೂಲಕ ಜೆ.ಸಿ. ರಸ್ತೆ ಪ್ರವೇಶಿಸಿ ಮುಂದೆ ಸಾಗಬಹುದು.

ಕರಗವು ಸಿಟಿ ಮಾರುಕಟ್ಟೆ ವೃತ್ತದಿಂದ ಪೊಲೀಸ್ ರಸ್ತೆ ಪ್ರವೇಶಿಸುವ ತನಕ ಬಿವಿಕೆ ಅಯ್ಯಂಗಾರ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳನ್ನು ಚಿಕ್ಕಪೇಟೆ ವೃತ್ತದಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿ ಕರಗ ಮುಂದೆ ಸಾಗಿದ ನಂತರ ಎ.ಎಸ್. ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಮುಂದೆ ಹೋಗಲು ಅವಕಾಶ ಕಲ್ಪಿಸಲಾಗುವುದು. ಉತ್ಸವದಲ್ಲಿನ ರಥಗಳು ಶನಿವಾರ ಮಧ್ಯಾಹ್ನ 3ಗಂಟೆಗೆ ಮಾರುಕಟ್ಟೆ ವೃತ್ತದಿಂದ ಹೊರಟು ಪೊಲೀಸ್ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಸಂಚರಿಸುವ ಅವಧಿಯಲ್ಲಿ ಸಾಗರ್ ಜಂಕ್ಷನ್ ಕಡೆಯಿಂದ ಎ.ಎಸ್.ಚಾರ್ ಸ್ಟ್ರೀಟ್‌ ಕಡೆಗೆ ಸಂಚರಿಸುವ ವಾಹನಗಳು ಕೆ.ಜಿ. ರಸ್ತೆಯಲ್ಲಿ ಸಾಗಿ ಉಪ್ಪಾರಪೇಟೆ ಪಿ.ಎಸ್. ಜಂಕ್ಷನ್, ಶಾಂತಲವೃತ್ತ, ದೇವರಾಜ ಅರಸು ವೃತ್ತ, ಬಿನ್ನಿಮಿಲ್ ರಸ್ತೆ ಮೂಲಕ ಮೈಸೂರು ರಸ್ತೆ ತಲುಪಬಹುದು.

ಪಾರ್ಕಿಂಗ್ ವ್ಯವಸ್ಥೆ: ಸಾರ್ವಜನಿಕರು, ಜೆ.ಸಿ. ರಸ್ತೆಯ ಮಹಾನಗರ ಪಾಲಿಕೆಯ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಬಹುದು. ಕೆ.ಜಿ.ರಸ್ತೆಯ ಕೆಂಪೇಗೌಡ ಮಹಾರಾಜ ಪಾರ್ಕಿಂಗ್ ಕಾಂಪ್ಲೆಕ್ಸ್, ಮಾಮೂಲ್ ಪೇಟೆ ಮುಖ್ಯ ರಸ್ತೆಯ ಕೆಂಪೇಗೌಡ ಪಾರ್ಕಿಂಗ್ ಕಾಂಪ್ಲೆಕ್ಸ್, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಕಾಟನ್‌ಪೇಟೆ ರಸ್ತೆಗೆ ಉತ್ಸವ ಬರಲ್ಲ

ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿ ನಡೆಯುತ್ತಿರುವ ಕಾರಣ ಉತ್ಸವ ಈ ರಸ್ತೆಯಲ್ಲಿ ಸಂಚರಿಸುವುದಿಲ್ಲ. ಪರ್ಯಾಯವಾಗಿ ಅಕ್ಕಿಪೇಟೆಯಲ್ಲಿ ತೆರಳಲಿದೆ. ಈ ರಸ್ತೆಯಲ್ಲಿರುವ ಕುಲಸ್ಥರನ್ನು ಪಕ್ಕದ ರಸ್ತೆಯಲ್ಲಿನ ಗಣಪತಿ ದೇವಾಲಯದ ಸಮೀಪಕ್ಕೆ ಬರಲು ತಿಳಿಸಲಾಗಿದೆ ಎಂದು ಧರ್ಮರಾಯಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ದೇಗುಲ ತಲುಪಿದ ‘ಹಸಿ ಕರಗ’

ಧ್ಜಜಾರೋಹಣದ 8ನೇ ದಿನವಾದ ಗುರುವಾರ ಬೆಳಿಗ್ಗೆ ‘ಹಸಿ ಕರಗ’ ದೇವಾಲಯ ತಲುಪಿತು. ಕರಗ ಹೊರುವ ಅರ್ಚಕರು ಹಾಗೂ ವೀರಕುಮಾರರು ಮಧ್ಯಾಹ್ನ ದೇವಸ್ಥಾನದಿಂದ ಸಂಪಂಗಿ ಕರೆ ಅಂಗಳ ತಲುಪಿ ಪುಣ್ಯಸ್ನಾನ ಹಾಗೂ ಪೂಜಾ ಕೈಂಕರ್ಯ ಮುಗಿಸಿದರು. ರಾತ್ರಿ ಕಬ್ಬನ್ ಪಾರ್ಕ್‍ನ ಕರಗದ ಕುಂಟೆಗೆ ಹೋಗಿ ಪುಣ್ಯ ಸ್ನಾನ ಮುಗಿಸಿ, ಸಂಪಂಗಿ ಕೆರೆ ಅಂಗಳದಲ್ಲಿನ ಶಕ್ತಿ ಪೀಠದಲ್ಲಿ ಖಡ್ಗ, ತ್ರಿಶೂಲಗಳನ್ನಿಟ್ಟು ಕೆಂಪು ಬಟ್ಟೆಯಿಂದ ಅಲಂಕಾರಗೊಂಡ ಹಸೀಕರಗಕ್ಕೆ ಪೂಜೆ ಸಲ್ಲಿಸಿದರು. ವೀರಕುಮಾರರು ಹರಿತವಾದ ಖಡ್ಗಗಳನ್ನು ಹಿಡಿದು ಎದೆ ಮೇಲೆ ಹೊಡೆದುಕೊಂಡು ‘ಅಲುಗು’ ಸೇವೆ ಸಲ್ಲಿಸಿದರು. ಅಲ್ಲಿಂದ ಪೂಜಾರಿ ಕಂಕುಳಲ್ಲಿ ಹಸೀಕರಗು ಹೊತ್ತು ಬೆಳಗಿನ ಜಾವ ಧರ್ಮರಾಯಸ್ವಾಮಿ ದೇವಾಲಯ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT