ಶನಿವಾರ, ಸೆಪ್ಟೆಂಬರ್ 18, 2021
21 °C
ಹೈಕೋರ್ಟ್‌ಗೆ ಖುದ್ದು ಹಾಜರಾದ ಕೇಶವನ್‌

ಇ–ಮೇಲ್‌ ಕಳುಹಿಸಿದ್ದ ವ್ಯಕ್ತಿಯಿಂದ ಕ್ಷಮೆ ಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್‌ ಹಾವಳಿ ತಡೆಯಲು ನನ್ನ ಬಳಿ ಐಡಿಯಾಗಳಿವೆ’ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ಇ–ಮೇಲ್‌ ಮಾಡಿದ್ದ ಅನಾಮಧೇಯ ವ್ಯಕ್ತಿ ಹೈಕೋರ್ಟ್‌ಗೆ ಖುದ್ದು ಹಾಜರಾಗಿ ಕ್ಷಮೆ ಕೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಮತ್ತು ಹೋ‌ರ್ಡಿಂಗ್ಸ್‌ ತೆರವು ಕೋರಿ ಸಲ್ಲಿಸಲಾಗಿರುವ ಸಾರ್ಜಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಮುಂದುವರಿಸಿತು.

ವಿಚಾರಣೆ ವೇಳೆ ಪೊಲೀಸರ ನಿರ್ದೇಶನದಂತೆ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಯಶವಂತಪುರ ಬಳಿಯ ಮುತ್ಯಾಲ ನಗರದ ನಿವಾಸಿ ಕೇಶವನ್‌ ನ್ಯಾಯಪೀಠಕ್ಕೆ ಲಿಖಿತ ಕ್ಷಮೆ ಯಾಚಿಸಿದರು. ನಂತರ ಮುಖ್ಯ ನ್ಯಾಯಮೂರ್ತಿಗಳು, ‘ನೀವು ಹೇಳುವುದನ್ನು ಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆ ಮೂಲಕವೇ ತಿಳಿಸಬೇಕು. ಅದು ಬಿಟ್ಟು ನ್ಯಾಯಾಲಯದ ವ್ಯಾಪ್ತಿ ಮೀರಿ ವರ್ತಿಸಿ ತೊಂದರೆ ಕೊಡಬಾರದು. ನಿಮ್ಮ ದೂರು–ದುಮ್ಮಾನ, ಸಲಹೆಗಳನ್ನು ಬಿಬಿಎಂಪಿಗೆ ಸಲ್ಲಿಸಿ’ ಎಂದು ಕಿವಿಮಾತು ಹೇಳಿದರು.

ಕ್ರಮ ಕೈಗೊಳ್ಳಲಾಗಿದೆ: ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ, ಕೆ.ಆರ್‌. ಪುರದಲ್ಲಿ ಅನಧಿಕೃತ ಫ್ಲೆಕ್ಸ್‌ ಅಳವಡಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಈ ಕುರಿತು ವಿವರಿಸಿದ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ, ‘ಅಕ್ರಮವಾಗಿ ಜಾಹೀರಾತು ಅಳವಡಿಸಿದ್ದ ಮುರಳಿ ಎಂಬುವರನ್ನು ಕೆ.ಆರ್‌ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು