ಜಲಮೂಲಗಳ ಮೀಸಲು ಬದಲು: 1,179 ಹೆಚ್ಚುವರಿ ನಿವೇಶನ

ಮಂಗಳವಾರ, ಮಾರ್ಚ್ 26, 2019
26 °C

ಜಲಮೂಲಗಳ ಮೀಸಲು ಬದಲು: 1,179 ಹೆಚ್ಚುವರಿ ನಿವೇಶನ

Published:
Updated:

ಬೆಂಗಳೂರು: ಕೆರೆ ಮತ್ತು ರಾಜಕಾಲುವೆಗಳ ಮೀಸಲು ಪ್ರದೇಶಕ್ಕೆ ಸಂಬಂಧಿಸಿದಂತೆ ಹಸಿರು ನ್ಯಾಯಮಂಡಳಿಯ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿರುವ ಕಾರಣ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಗಾಗಿ 1,179 ನಿವೇಶನಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ. 

ರಾಜ್ಯ ಸರ್ಕಾರವು 2014ರಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಅನುಮೋದನೆ ನೀಡಿತ್ತು. ಕೆರೆ ಹಾಗೂ ರಾಜಕಾಲುವೆಗಳಿಗೆ 2015ರ ನಗರ ಮಹಾಯೋಜನೆ ಪ್ರಕಾರ ಮೀಸಲು ಪ್ರದೇಶವನ್ನು ನಿಗದಿಪಡಿಸಿ ಬಿಡಿಎ ಬಡಾವಣೆಯ ಯೋಜನೆ ರೂಪಿಸಿತ್ತು.

2016ರ ಮೇ 4ರಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ಕೆರೆ ಹಾಗೂ ರಾಜಕಾಲುವೆಗಳಿಗೆ ಬಿಡಬೇಕಾದ ಮೀಸಲು ಪ್ರದೇಶವನ್ನು ಹೆಚ್ಚಳ ಮಾಡಿ ಆದೇಶ ಮಾಡಿತು. ಈ ಆದೇಶವನ್ನು ಪೂರ್ವಾನ್ವಯ ಮಾಡಬೇಕು ಎಂದೂ ಸೂಚಿಸಿತ್ತು. ಆದ್ದರಿಂದ ಪ್ರಾಧಿಕಾರವು ಮೂಲ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡು ಎನ್‌ಜಿಟಿ ಆದೇಶದನ್ವಯ ನಿವೇಶನ ಹಂಚಿಕೆ ಮಾಡಬೇಕಾಯಿತು. 

‘ಬಡಾವಣೆ ಮೂಲ ಯೋಜನೆ ಪ್ರಕಾರ ವಿವಿಧ ಅಳೆತಯ 1,179 ನಿವೇಶನಗಳು ಪರಿಷ್ಕೃತ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಬರುವುದು ತಿಳಿದುಬಂತು. ಹಾಗಾಗಿ ಅಂತಹನಿವೇಶನಗಳನ್ನು ಉಳಿಸಿಕೊಂಡು, ಉಳಿದ ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಲು ನಿರ್ಧರಿಸಿದ್ದೆವು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರತಿ ಇನ್ನೂ ಕೈಸೇರಿಲ್ಲ. ಅದನ್ನು ನೋಡಿದ ಬಳಿಕವಷ್ಟೇ ಮೀಸಲು ಪ್ರದೇಶ ಬದಲಾವಣೆಯಿಂದ ಹೆಚ್ಚುವರಿಯಾಗಿ ಲಭ್ಯವಾಗುವ ಜಾಗದಲ್ಲಿ ನಿವೇಶನದ ಬಗ್ಗೆ ತೀರ್ಮಾನ ಕೈಗೊಳ್ಳಬಹುದು’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಶಿವಶಂಕರ್‌ ತಿಳಿಸಿದರು.

ಒಟ್ಟು 4,043 ಎಕರೆ 27 ಗುಂಟೆಯಲ್ಲಿ ಬಿಡಿಎ ಈ ಬಡಾವಣೆಯನ್ನು ನಿರ್ಮಿಸುತ್ತಿದೆ. 2,319 ಎಕರೆ ಪ್ರದೇಶದಲ್ಲಿ ಪ್ರಾಧಿಕಾರವು ಈಗಾಗಲೇ ನಿವೇಶನಗಳನ್ನು ಅಭಿವೃದ್ಧಿಪಡಿಸಿದೆ.

ಈ ಬಡಾವಣೆಯಲ್ಲಿ ಮೊದಲ ಹಂತದಲ್ಲಿ  5000 ಹಾಗೂ ಎರಡನೇ ಹಂತದಲ್ಲಿ 4,971ನಿವೇಶನಗಳನ್ನು ಹಂಚಿಕೆ ಮಾಡ
ಲಾಗಿದೆ. ಭೂಮಿ ಬಿಟ್ಟುಕೊಟ್ಟವರಿಗೆ ಮೊದಲ ಹಂತದಲ್ಲಿ 2,157 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ 3,800ನಿವೇಶನಗಳನ್ನು ಹಂಚಿಕೆ ಮಾಡಬೇಕಿದೆ. ಅಲ್ಲದೇ ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್‌ ಹಾಗೂ ರೀಡು ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡವರಿಗೆ 849 ನಿವೇಶನಗಳನ್ನು ನೀಡಲಾಗಿದೆ. 

ನಿಟ್ಟುಸಿರುಬಿಟ್ಟ ಫಲಾನುಭವಿಗಳು

ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶದ ಬಗ್ಗೆ ಸಮರ್ಪಕ ಮಾಹಿತಿ ಸಿಗದ ಕಾರಣ ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾದ ಫಲಾನುಭವಿಗಳಲ್ಲಿ ಆತಂಕ ಮನೆಮಾಡಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಈ ಬಡಾವಣೆಯ ನಿವೇಶನದಾರರು ನಿಟ್ಟುಸಿರು ಬಿಡುವಂತಾಗಿದೆ.

‘ಮೀಸಲು ಪ್ರದೇಶದ ಬಗ್ಗೆ ಬಿಡಿಎ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಹಂಚಿಕೆ ಮಾಡಿರುವ ಯಾವುದೇ ನಿವೇಶನಗಳೂ ಮೀಸಲು ಪ್ರದೇಶದಲ್ಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ನಾವು ಸ್ಥಳಕ್ಕೆ ಹೋಗಿ ನೋಡಿದಾಗ ರಾಜಕಾಲುವೆ ಪಕ್ಕದ ಕೆಲವು ನಿವೇಶನಗಳಿಗೆ ಎನ್‌ಜಿಟಿ ಆದೇಶಕ್ಕಿಂತ ಕಡಿಮೆ ಮೀಸಲು ಬಿಟ್ಟಿದ್ದು ಕಂಡು ಬಂದಿತ್ತು. ಹಾಗಾಗಿ ಇಂತಹ ನಿವೇಶನದಲ್ಲಿ ಮನೆ ನಿರ್ಮಿಸುವಾಗ ಬಿಬಿಎಂಪಿಯವರು ತಕರಾರು ಮಾಡುತ್ತಾರೋ ಎಂಬ ಆತಂಕ ಅನೇಕರಲ್ಲಿತ್ತು. ಈಗ ಈ ಆತಂಕ ದೂರವಾಗಿದೆ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರರ ಮುಕ್ತವೇದಿಕೆ ಸಂಸ್ಥಾಪಕ ಸೂರ್ಯಕಿರಣ್‌ ‘‍ಪ್ರಜಾವಾಣಿ’ಗೆ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !