ಶುಕ್ರವಾರ, ಮಾರ್ಚ್ 5, 2021
18 °C
ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದ ಯುವ ವಿಜ್ಞಾನಿಯ ಸಾಧನೆಯ ಕಥೆ

ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಇಲ್ಲ: ಪ್ರತಾಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಯಾರೋ ನಿಗದಿ ಮಾಡಿದ ಪಠ್ಯಕ್ರಮವನ್ನು ಓದುವುದು ಸಾಧನೆಯಲ್ಲ, ನೀವೇ ಪಠ್ಯಕ್ರಮವನ್ನು ನಿಗದಿಗೊಳಿಸಿದಾಗ ಅದು ನಿಜಕ್ಕೂ ದೊಡ್ಡ ಸಾಧನೆ. ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಇಲ್ಲ’ ಎಂದು ಯುವ ವಿಜ್ಞಾನಿ ಎನ್‌.ಎಂ. ಪ್ರತಾಪ್ ಹೇಳಿದರು.

ಕೆಎಲ್‌ಇ ಸಂಸ್ಥೆಯ ಬಿಸಿಎ ವಿಭಾಗ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಆಕ್ಯುಮನ್–19’ ಎರಡು ದಿನಗಳ ರಾಷ್ಟ್ರೀಯ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ನಿಮ್ಮ ಕಲ್ಪನೆ– ಕನಸುಗಳನ್ನು ಸಾಕಾರಗೊಳಿಸಲು ಪರಿಶ್ರಮ ಹಾಕಿ. ಜೀವನದಲ್ಲಿ ಯಾರಿಗೆ ಯಾರೂ ಸಹಾಯ ಮಾಡುವುದಿಲ್ಲ. ನಮಗೇ ನಾವೇ ಎಂದುಕೊಂಡು ಮುಂದೆ ಸಾಗಬೇಕು. ಸಾಧನೆಯ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳಿಗೆ ಎಂದಿಗೂ ಎದೆಗುಂದದೆ ಮುನ್ನುಗ್ಗಿ’ ಎಂದರು.

‘ದೇಶದ ಬಗ್ಗೆ ಅಪಾರ ಅಭಿಮಾನ ಇರಬೇಕು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯಲ್ಲಿ ಭಗವದ್ಗೀತೆ ಕಾಣಬೇಕು. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರೇ ನಿಜವಾದ ದೇಶಪ್ರೇಮಿಗಳು. ಅನ್ಯರಿಗೆ ಸಹಾಯ ಮಾಡದಿದ್ದರೂ ಸರಿ, ತೊಂದರೆ ನೀಡಬಾರದು. ನನ್ನ ದೇಶ ಎಂಬ ಅಭಿಮಾನ ಹೃದಯಲ್ಲಿ ಇರಲಿ’ ಎಂದು ತಿಳಿಸಿದರು.

‘ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ನಾನು ನನ್ನೊಳಗೆ ಮೂಡಿದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿರ್ಧಾರ ಮಾಡಿದೆ. ಜಪಾನ್‌ ದೇಶದಲ್ಲಿ ನಡೆದ ಯುವ ವಿಜ್ಞಾನಿ ಪ್ರಶಸ್ತಿ ಗೆಲ್ಲುವ ವರೆಗೂ ಸಾಗಿದೆ. ಆ ಪ್ರಶಸ್ತಿ ಘೋಷಣೆಯಾಗಿ ಬಂಗಾರದ ಪದಕವನ್ನು ಕೊರಳಿಗೆ ಹಾಕಿ ರಾಷ್ಟ್ರಗೀತೆ ಮೊಳಗಿಸಿದಾಗ ಸಂತೋಷವಾಯಿತು.  ನನ್ನ ದೇಶ ಮೊದಲ ಸ್ಥಾನದಲ್ಲಿದೆ ಅಂದೊಕೊಂಡಾಗ ಹೆಮ್ಮೆ ಅನಿಸಿತು’ ಎಂದರು.

ಕೆಎಲ್‌ಇ ತಂತ್ರಜ್ಞಾನ ಸಂಸ್ಥೆಯ ಪ್ರಾಂಶುಪಾಲ ಬಿ.ಎಸ್. ಅನಾಮಿ, ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಎಸ್‌.ವಿ. ಹಿರೇಮಠ್, ಬಿಸಿಎ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜ್ಯೋತಿ ಮಾನದ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.