ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮವೇ ಯಶಸ್ಸಿನ ದಾರಿ ದೀಪ: ರಾಜಾಪುರ ಶ್ರೀ

ಆನೇಕಲ್ ಸಮೀಪದ ರಾಜಾಪುರ ಸಂಸ್ಥಾನ ಮಠದಲ್ಲಿ ಲಕ್ಷ ದೀಪೋತ್ಸವ
Last Updated 8 ಡಿಸೆಂಬರ್ 2018, 12:41 IST
ಅಕ್ಷರ ಗಾತ್ರ

ಆನೇಕಲ್: ‘‌ಜೀವನದ ಶ್ರೇಯಸ್ಸಿಗೆ ಧರ್ಮವೇ ದಾರಿ ದೀಪ. ಸುಖ ಶಾಂತಿ ನೆಮ್ಮದಿಯ ಬದುಕಿಗೆ ಧರ್ಮಪ್ರಜ್ಞೆ ಅವಶ್ಯಕವಾದುದು. ಮನುಷ್ಯನಲ್ಲಿನ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಮೂಡಿಸಲು ಭಗವಂತನ ಧ್ಯಾನ, ಸ್ಮರಣೆ ಹಾಗೂ ಭಕ್ತಿ ಮಾರ್ಗದಿಂದ ಸಾಧ್ಯ’ ಎಂದು ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜಾಪುರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಾಜದ ಏಳಿಗೆಗಾಗಿ ದೇವಾಲಯಗಳು, ಮಠಗಳು ನಿರ್ಮಾಣವಾಗಿವೆ. ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ಮಠಗಳು ನಿರತವಾಗಿದ್ದು ಜನರಲ್ಲಿ ಮೌಲ್ಯ ಬಿತ್ತುವ ಕೇಂದ್ರಗಳಾಗಿವೆ. ಜನರು ಇತ್ತೀಚಿನ ದಿನಗಳಲ್ಲಿ ಧಾವಂತದಲ್ಲಿದ್ದು ತಾಳ್ಮೆ, ಸಂಯಮವನ್ನು ಕಳೆದುಕೊಂಡು ನೆಮ್ಮದಿಯಿಂದ ವಂಚಿತರಾಗಿದ್ದಾರೆ. ಹಾಗಾಗಿ ಧರ್ಮದ ಬೆಳಕಿನಲ್ಲಿ ಸನ್ಮಾರ್ಗವನ್ನು ಕಂಡು ಸಂತಸದಿಂದ ಜೀವನ ಸಾಗಿಸಿ ಮುಕ್ತಿ ಪಡೆಯಲು ಪ್ರಾರ್ಥನೆ, ಧ್ಯಾನ, ಪೂಜೆ ಅವಶ್ಯಕತೆಯಿದೆ’ ಎಂದರು.

‘ಭಕ್ತರು ಧಾರ್ಮಿಕ ಸೇವೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದರಿಂದ ನೆಮ್ಮದಿ ದೊರೆಯುತ್ತದೆ. ಎಲ್ಲಾ ಸಮಸ್ಯೆಗಳಿಗೂ ಧರ್ಮ ಔಷಧಿಯಿದ್ದಂತೆ. ಧರ್ಮದಿಂದ ವಿಶ್ವಕ್ಕೆ ಶಾಂತಿ ದೊರೆಯುತ್ತದೆ ಎಂಬುದು ವೀರಶೈವ ಧರ್ಮದ ಮುಖ್ಯ ತತ್ವವಾಗಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಮಾತನಾಡಿ, ‘ಮಠಗಳು ಧಾರ್ಮಿಕ ಕೇಂದ್ರಗಳ ಜೊತೆಗೆ ಶಿಕ್ಷಣ, ವಸತಿ, ದಾಸೋಹಗಳನ್ನು ನೀಡುವಲ್ಲಿ ಕರ್ನಾಟಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿವೆ. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಠ ಮಾನ್ಯಗಳ ಪಾತ್ರ ಪ್ರಮುಖವಾದುದ್ದು. 900 ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ರಾಜಾಪುರ ಸಂಸ್ಥಾನ ಮಠದಲ್ಲಿ ನಿರಂತರ ಧಾರ್ಮಿಕ ಕಾರ್ಯಗಳು ನಡೆಯುವಂತಾಗಲಿ’ ಎಂದರು.

70 ಸಾವಿರ ಮಣ್ಣಿನ ಹಣತೆಗಳು, 1500 ಲೀಟರ್ ಎಣ್ಣೆಯನ್ನು ಬಳಸಿ ದೀಪಗಳನ್ನು ಹೊತ್ತಿಸಲಾಗಿತ್ತು.ದ್ವಾದಶ ಲಿಂಗಗಳಿರುವ ಕಲ್ಯಾಣಿ, ರಾಜಾಪುರ ಮಠದ ಆವರಣದಲ್ಲಿ ದೀಪಗಳ ಸಾಲು ಕತ್ತಲಿನಲ್ಲಿ ಬೆಳಕಿನ ವೈಭವವನ್ನು ಮೂಡಿಸಿತು.ಮಠದಲ್ಲಿನ ಕ್ಷೇತ್ರನಾಥ ವೀರಭದ್ರಸ್ವಾಮಿ, ರಾಜೇಶ್ವರ ಸ್ವಾಮಿ, ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಹಾಗೂ ದ್ವಾದಶ ಜ್ಯೋತಿರ್‌ ಲಿಂಗಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ನಡೆಸಲಾಯಿತು. ಗಣಪತಿ ಹೋಮ, ರುದ್ರ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ದುರ್ಗಾ ಹೋಮಗಳು ನಡೆದವು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೊಡ್ಡಹಾಗಡೆ ಹರೀಶ್, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ, ವಿಶ್ವ ವೀರಶೈವ ಮಹಾಮಂಡಳಿಯ ಅಧ್ಯಕ್ಷ ನಟರಾಜ್, ರಾಜಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಆರ್.ಎಸ್.ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮರಿರಾಜು, ಉಮಾಶಂಕರ್, ಪುರಸಭಾ ಸದಸ್ಯೆ ಮಂಜುಳ ನೀಲಕಂಠಯ್ಯ, ಆನೇಕಲ್ ವೀರಶೈವ ಯುವ ವೇದಿಕೆಯ ಎನ್.ರಾಜಶೇಖರ್, ಎಸ್.ಶಿವಕುಮಾರ್, ಮುಖಂಡರಾದ ಗೊಟ್ಟಿಗೆರೆ ಶಿವಣ್ಣ, ಎಚ್.ವಿ.ನಾಗರಾಜು, ವೀರಗಾಸೆ ಆರ್.ಪ್ರಕಾಶ್, ರಾಜಶೇಖರ್, ಕಾಂತರಾಜು, ವೇದಮೂರ್ತಿ, ವಿಶ್ವನಾಥ್, ಮಮತಾ, ಶಶಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT