ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಸೆಷನ್ಸ್‌ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ

ಆರೋಪ ಹೊರಿಸುವ ಹಂತದಲ್ಲೇ ಅಧಿಕಾರಿ ಖುಲಾಸೆ
Last Updated 9 ಜನವರಿ 2019, 19:09 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿದ ಆರೋಪಕ್ಕೊಳಗಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿಯರ್‌ ಸೇವ್ಯಾ ನಾಯ್ಕ ಅವರನ್ನು ಆರೋಪ ಹೊರಿಸುವ ಹಂತದಲ್ಲೇ ಖುಲಾಸೆಗೊಳಿಸಿದ ಚಿತ್ರದುರ್ಗ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಸೂಚಿಸಿದ್ದಾರೆ.

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಸಮಗ್ರವಾಗಿ ಪರಿಶೀಲಿಸಿದ ಲೋಕಾಯುಕ್ತದ ಕಾನೂನು ವಿಭಾಗ, ‘ಅಧಿಕಾರಿ ವಿರುದ್ಧ ಆರೋಪ ಹೊರಿಸುವ ಸಂದರ್ಭದಲ್ಲಿ ನ್ಯಾಯಾಲಯ ಆರೋಪಗಳ ಅರ್ಹತೆಯನ್ನು ವಿಶ್ಲೇಷಿಸುವುದು ಸರಿಯಲ್ಲ. ಈ ಪ್ರಕರಣದಲ್ಲಿ ಶಿಕ್ಷೆಯಾಗುವುದೊ ಅಥವಾ ಖುಲಾಸೆಯಾಗುವುದೊ ಎಂಬ ಅಂಶಗಳನ್ನು ನೋಡದೆ, ಆರೋಪ ಹೊರಿಸಲು ಸಾಕಾಗುವಷ್ಟು ಸಾಕ್ಷ್ಯಾಧಾರಗಳಿವೆಯೇ ಎಂದಷ್ಟೇ ಗಮನಿಸಬೇಕು. ಆರೋಪಿ ಒದಗಿಸಿರುವ ಸಾಕ್ಷ್ಯಾಧಾರಗಳಲ್ಲಿರುವ ವಿವಾದಿತ ಅಂಶಗಳನ್ನು ನ್ಯಾಯಾಲಯ ಪರಿಗಣಿಸಿದೆ. ಆದರೆ, ವಿಚಾರಣಾ ಪೂರ್ವ ಹಂತದಲ್ಲಿ ಇದಕ್ಕೆ ಅವಕಾಶವಿಲ್ಲ’ ಎಂದೂ ಅಭಿಪ್ರಾಯಪಟ್ಟಿದೆ.

ಈ ಅಂಶಗಳ ಆಧಾರದಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ ಪರಿಶೀಲನಾ ಅರ್ಜಿ ಸಲ್ಲಿಸಬಹುದು ಎಂದು ಕಾನೂನು ವಿಭಾಗ ನೀಡಿರುವ ಸಲಹೆಯನ್ನು ಒಪ್ಪಿಕೊಂಡಿರುವ ಲೋಕಾಯುಕ್ತರು, ತಕ್ಷಣ ಕ್ರಿಮಿನಲ್‌ ಅರ್ಜಿ ಸಲ್ಲಿಸುವಂತೆ ತಮ್ಮ ಪೊಲೀಸ್‌ ವಿಭಾಗಕ್ಕೆ ಸೂಚಿಸಿದ್ದಾರೆ.

ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದ ಮೇಲೆ ಸೇವ್ಯಾ ನಾಯ್ಕ ಅವರ ವಿರುದ್ಧಲೋಕಾಯುಕ್ತದ ಚಿತ್ರದುರ್ಗ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13 (1)(ಇ) ಮತ್ತು 13 (2) ಅಡಿ ಮೊಕದ್ದಮೆ ದಾಖಲಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 1987ರ ನವೆಂಬರ್‌ 6ರಿಂದ 2013ರ ಸೆಪ್ಟೆಂಬರ್ 26ರವರೆಗಿನ ಆದಾಯ ಮೂಲ ಕುರಿತ ಚೆಕ್‌ ರಿ‍ಪೋರ್ಟ್‌ ಅನ್ನು ಅವರು ಹಾಕಿದ್ದರು. ಸೇವ್ಯಾ ನಾಯ್ಕ ಆದಾಯ ಮೀರಿ ಶೇ 155 ರಷ್ಟು ಅಧಿಕ ಆಸ್ತಿ ಹೊಂದಿರುವುದಾಗಿ ದೂರಿದ್ದರು.

ಆರೋಪ ಹೊರಿಸುವ ಸಂದರ್ಭದಲ್ಲಿ ಕಾರ್ಯಪಾಲಕ ಎಂಜಿನಿಯರ್‌ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 227ರ ಅಡಿ ಭ್ರಷ್ಟಾಚಾರ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಮನವಿ ಮಾಡಿದ್ದರು. ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧದ ನಡುವೆಯೂ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಈ ಅಧಿಕಾರಿಯನ್ನು ಖುಲಾಸೆಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT