ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹರಸಿ ದಂಪತಿಯಿಂದ 3,600 ಕಿ.ಮೀ ‘ಮಹಾ ಓಟ’

7
ಆರೋಗ್ಯ ಜಾಗೃತಿ, ಸೈನಿಕ ಕಲ್ಯಾಣ ನಿಧಿ ಸಂಗ್ರಹ ಉದ್ದೇಶ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹರಸಿ ದಂಪತಿಯಿಂದ 3,600 ಕಿ.ಮೀ ‘ಮಹಾ ಓಟ’

Published:
Updated:

ಹುಬ್ಬಳ್ಳಿ: ‘ಅತ್ಯುತ್ತಮ ಆಡಳಿತ ನೀಡುವ ಮೂಲಕ ದೇಶದ ಪ್ರಗತಿಗೆ ದುಡಿಯುತ್ತಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ದೇಶದ ಯುವಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ದೇಶದ ರಕ್ಷಣೆಗೆ ಹಗಲಿರುಳು ದುಡಿಯುವ ಸೈನಿಕರ ಕಲ್ಯಾಣ ನಿಧಿಗೆ ಹಣ ಸಂಗ್ರಹ ನಮ್ಮ ‘ಮಹಾ ಓಟ’ದ ಉದ್ದೇಶ’ ಎಂದು ನೀರಗುಂದ ಮಲ್ಲಪ್ಪ ಕುಮಾರ್ ಮತ್ತು ಅವರ ಪತ್ನಿ ರೂಪಾ ಕುಮಾರ್ ಹೇಳಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 3,600 ಕಿ.ಮೀ ‘ಮಹಾ ಓಟ’ ಆರಂಭಿಸಿರುವ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಓಟದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ‘ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಬೆಂಗಳೂರಿನಲ್ಲಿ ಸ್ವಂತ ಉದ್ದಿಮೆ ನಡೆಸುತ್ತಿರುವ ನಾವು ಮೋದಿ ಅವರ ಆಡಳಿತ ವೈಖರಿ ಹಾಗೂ ನಾಯಕತ್ವವನ್ನು ಮೆಚ್ಚಿ ಅವರಿಗಾಗಿ ಈ ಓಟ ಆರಂಭಿಸಿದ್ದೇವೆ. ಇದಕ್ಕಾಗಿ ಸುಮಾರು ₹40 ಲಕ್ಷ ಖರ್ಚಾಗುತ್ತಿದ್ದು, ಅದನ್ನು ನಾವೇ ಭರಿಸುತ್ತಿದ್ದೇವೆ. ಯಾರಿಂದಲೂ ಧನ ಸಹಾಯ ಸ್ವೀಕರಿಸಿಲ್ಲ’ ಎಂದು ದಂಪತಿ ಹೇಳಿದರು.

‘ನಾವು ಈ ಓಟ ಆರಂಭಿಸಿರುವ ವಿಷಯ ಮೋದಿ ಅವರಿಗೆ ಗೊತ್ತಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಖಂಡಿತ ಸಂತೋಷವಾಗುತ್ತದೆ. ಶ್ರೀನಗರದಲ್ಲಿ ನಡೆಯುವ ಸಮಾರೋಪ ಸಮಾರಂಭಕ್ಕೆ ಅವರು ಬಂದರೆ ಅವರ ಮೂಲಕವೇ ಕಲ್ಯಾಣ ನಿಧಿಯನ್ನು ಸೈನಿಕರಿಗೆ ಹಸ್ತಾಂತರಿಸಲಾಗುವುದು’ ಎಂದರು.

‘ಈ ಓಟಕ್ಕೆಂದೇ ವಿಶೇಷ ಬಸ್ ವಿನ್ಯಾಸಗೊಳಿಸಲಾಗಿದೆ. ಆಹಾರವನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಇಬ್ಬರು ಬಸ್ ಚಾಲಕರು ಸೇರಿದಂತೆ ಆರು ಮಂದಿ ನಮ್ಮೊಂದಿಗಿದ್ದಾರೆ. ನಮ್ಮ ಓಟ ಬೆಂಬಲಿಸುವರು ನಮ್ಮೊಂದಿಗೆ ಅಥವಾ ಬಸ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಕೈಲಾದಷ್ಟು ಹಣವನ್ನು ಸೈನಿಕರ ಕಲ್ಯಾಣ ನಿಧಿಗೆ ನೀಡಬಹುದು’ ಎಂದು ಕುಮಾರ್ ಹೇಳಿದರು.

ಗುರುವಾರ (ಫೆ.14) ಬೆಳಿಗ್ಗೆ 7 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಕುಮಾರ ಮತ್ತು ರೂಪಾ ದಂಪತಿಯನ್ನು ಬೀಳ್ಕೊಡಲಾಗುವುದು. ಆಸಕ್ತರು ಅವರೊಂದಿಗೆ ಸ್ವಲ್ಪ ದೂರ ಓಡಬಹುದು ಎಂದು ‘ಟೀಮ್ ಮೋದಿ’ ಮುಖಂಡ ಸುಭಾಷ್ ಜಾಮದಾರ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !