ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲತ್ತಹಳ್ಳಿಯ ಕಲಾಗ್ರಾಮ: ಯೋಜನೆಗೆ ಇನ್ನೂ ಸಿಕ್ಕಿಲ್ಲ ಕಾಯಕಲ್ಪ

ಮ್ಯೂಸಿಯಂ ನಿರ್ಮಾಣ
Last Updated 31 ಮಾರ್ಚ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿನಾಟಕ ಅಕಾಡೆಮಿಯು ನಿರ್ಮಿಸಲು ಉದ್ದೇಶಿಸಿದ್ದ ‘ಮ್ಯೂಸಿಯಂ ನಿರ್ಮಾಣ’ ಯೋಜನೆಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ.

20 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಲಾಗ್ರಾಮದ ‘ಸಂಸ್ಕೃತಿ ಕಾಂಪ್ಲೆಕ್ಸ್‌’ ನಲ್ಲಿ150x200 ಅಡಿ ಜಾಗ ನೀಡುವಂತೆ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿಕೊಂಡಿತ್ತು.

‘ವಿಶು ಕುಮಾರ್‌ ಅವರು ಇಲಾಖೆಯ ನಿರ್ದೇಶಕರಾಗಿದ್ದಾಗಲೇಈ ಕೋರಿಕೆಯನ್ನು ಸಲ್ಲಿಸಲಾಗಿತ್ತು.ಈ ತನಕ ಅದು ಈಡೇರಿಲ್ಲ. ಮ್ಯೂಸಿಯಂ ನಿರ್ಮಾಣವಾದರೆಭವಿಷ್ಯದ ರಂಗ ಕಲಾವಿದರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎನ್ನುತ್ತವೆ ನಾಟಕ ಅಕಾಡೆಮಿಯ ಮೂಲಗಳು.

ಕಾಂಪ್ಲೆಕ್ಸ್‌ನಲ್ಲಿ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ), ಕುವೆಂಪು ಭಾಷಾ ಭಾರತಿ ಕಟ್ಟಡಗಳಿದ್ದು, ಲಲಿತ ಕಲಾ ಅಕಾಡೆಮಿಗೂ ಜಾಗ ನೀಡಲು ಸ್ಥಳ ಗುರುತಿಸಲಾಗಿದೆ.

‘ಕಾಂಪ್ಲೆಕ್ಸ್‌ನ ಕೆಳ ಮಹಡಿಯಲ್ಲಿ ಖಾಸಗಿ ಶಿಲ್ಪಕಲಾ ಸಂಸ್ಥೆಯವರಿಗೆ ಸ್ಥಳಾವಕಾಶ ನೀಡಿದ್ದಾರೆ. ಅವರು ಜಾಗ ಬಿಟ್ಟು ಹೋಗುತ್ತಿಲ್ಲ.

ಕಲಾಗ್ರಾಮದ ಸಭಾ ಭವನದ ಮೇಲ್ಭಾಗದಲ್ಲಿರುವ ಸ್ಟುಡಿಯೊ ಥಿಯೇಟರನ್ನುಎನ್‌ಎಸ್‌ಡಿ ಅವರು ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ತಮ್ಮದೇ ಕಟ್ಟಡ ನಿರ್ಮಾಣಗೊಂಡಿದ್ದರೂಸ್ಟುಡಿಯೊ ಥಿಯೇಟರನ್ನು ಇಲಾಖೆಗೆ ಬಿಟ್ಟುಕೊಟ್ಟಿಲ್ಲ. ಖಾಲಿ ಇರುವ ಈ ಜಾಗವನ್ನಾದರೂ ಅಕಾಡೆಮಿಗೆ ನೀಡುವಂತೆ ಕೇಳಿದ್ದರೂ ನೀಡಿಲ್ಲ’ ಎಂದು ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೂ ಜಾಗ ನೀಡಿ, ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿ ಕೊಡಲಿ ಸಾಕು. ಅದರ ನೆಲಮಹಡಿಯಲ್ಲಿ ನಾಟಕ ಅಕಾಡೆಮಿ ಕಚೇರಿ,ಮೊದಲ ಮಹಡಿಯನ್ನು ಹವ್ಯಾಸಿ ರಂಗಭೂಮಿ ಚಟುವಟಿಕೆಗೆ ಬಳಸುತ್ತೇವೆ.

ಅಲ್ಲಿ ಒಂದು ಮ್ಯೂಸಿಯಂ ಕೂಡಾ ನಿರ್ಮಿಸುತ್ತೇವೆ. ಎರಡನೇ ಮಹಡಿಯನ್ನು ವೃತ್ತಿ ರಂಗಭೂಮಿಗೆ ಹಾಗೂ ಮೂರನೇ ಮಹಡಿಯನ್ನು ಇತರ ರಂಗಭೂಮಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದೇವೆ. ಆದರೆ, ಇಲಾಖೆ ಸ್ಥಳಾವಕಾಶ ನೀಡಲು ಮುಂದಾಗುತ್ತಿಲ್ಲ’ ಎಂದರು.

‘ಇಡೀಕಾಂಪ್ಲೆಕ್ಸ್‌ ಅನ್ನು ಬಳಸಲು ಅಕಾಡೆಮಿಗೆ ಅನುಮತಿ ನೀಡಿದರೆ, ಇಲ್ಲಿ ಥಿಯೇಟರ್‌,ಮ್ಯೂಸಿಯಂ ನಿರ್ಮಿಸಿಕೊಂಡು, ರಂಗ ಚಟುವಟಿಕೆಗಳನ್ನು ನಡೆಸುತ್ತೇವೆ.‌

ಇದರಿಂದ ರಂಗ ಚಟುವಟಿಕೆಗಳಿಗಾಗಿ ನಿತ್ಯ ಬರುವವರಿಗೆ ಅನುಕೂಲವಾಗಲಿದೆ ಎಂದು ಇಲಾಖೆಗೆ ತಿಳಿಸಿದ್ದೇವೆ. ಆದರೂ ನಮ್ಮ ಬೇಡಿಕೆಯನ್ನು ಇಲಾಖೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಧ್ವನಿ ಬೆಳಕಿನ ವ್ಯವಸ್ಥೆ–ದುರಸ್ತಿ ಭಾಗ್ಯವಿಲ್ಲ

ಕಲಾಗ್ರಾಮದ ರಂಗ ಮಂದಿರ ಸಭಾಂಗಣದ ಧ್ವನಿ ಬೆಳಕು ವ್ಯವಸ್ಥೆ ಮಾಡುವ ಕೊಠಡಿ ಡಿಸೆಂಬರ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಒಳಗಾಗಿತ್ತು. ಅಲ್ಲಿನ ಬೆಳಕಿನ ವ್ಯವಸ್ಥೆಯ ಡಿಮ್ಮರ್‌ಗಳು ಸುಟ್ಟು ಹೋಗಿದ್ದವು. ನಾಲ್ಕು ತಿಂಗಳು ಕಳೆದರೂ ಅವುಗಳನ್ನು ದುರಸ್ತಿಪಡಿಸುವ ಕಾರ್ಯ ನಡೆದಿಲ್ಲ. ಹಾಗಾಗಿ ಇಲ್ಲಿ ನಾಟಕ ಪ್ರದರ್ಶನಕ್ಕೆ ಅಡ್ಡಿ ಉಂಟಾಗಿದೆ.

ಈ ಕುರಿತು ಕೂಡಲೇ ರಂಗ ತಜ್ಞರ ಸಭೆ ಕರೆಯಬೇಕೆಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದಿದ್ದಾರೆ.

ಕಲಾಗ್ರಾಮದ 20 ಎಕರೆ ಪ್ರದೇಶದ ಪೈಕಿ 10 ಎಕರೆಯನ್ನು ರಂಗ ಮಂದಿರ ಸುವರ್ಣ ಸಮುಚ್ಚಯಕ್ಕೆ ಬಳಸಿಕೊಳ್ಳಲಾಗಿದೆ. ಸಭಾಭವನ, ಪ್ರದರ್ಶನ ಕೊಠಡಿ, ಬಯಲು ರಂಗಮಂದಿರ, ಸ್ಟುಡಿಯೊ ಮತ್ತಿತರ ಸೌಕರ್ಯಗಳನ್ನು ₹ 3.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಮಾರು 300 ಆಸನಗಳ ಸಾಮರ್ಥ್ಯವನ್ನು ಸಭಾಂಗಣ ಹೊಂದಿದೆ.

ಕೆಲವು ನಾಟಕ ತಂಡಗಳು ಅನಿವಾರ್ಯ ಸಂದರ್ಭಗಳಲ್ಲಿ ತಾವೇ ಸಭಾಂಗಣಕ್ಕೆ ಧ್ವನಿ-ಬೆಳಕು ವ್ಯವಸ್ಥೆಯನ್ನು ಮಾಡಿಕೊಂಡು ಪ್ರದರ್ಶನ ನೀಡಬೇಕಾಗಿದೆ. ಕಲಾಗ್ರಾಮದ ಬಯಲು ರಂಗಮಂದಿರದಲ್ಲಿ ಮಾತ್ರ ರಂಗ ಚಟುವಟಿಕೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT