ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಣಿಪಾಲ್ ಆಸ್ಪತ್ರೆ ನಿರ್ಲಕ್ಷ್ಯದಿಂದ ತಾಯಿ ಸಾವು’

ನೈಜೀರಿಯಾ ಪ್ರಜೆ ತೋಬಿ ಆರೋಪ
Last Updated 25 ಏಪ್ರಿಲ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಮಣಿಪಾಲ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ತಾಯಿ ಜೂಲಿಯಟ್ (58) ಅವರು ಸಾವನ್ನಪ್ಪಿದ್ದಾರೆ’ ಎಂದು ನೈಜೀರಿಯಾ ಪ್ರಜೆ ತೋಬಿ ಆಜಿಸೆಗ್ಬೇಡೆ ಎಂಬುವರು ಆರೋಪಿಸಿದ್ದಾರೆ.

‘ನಾನು ನೆಟ್‌ವರ್ಕ್‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಲಾಗೋಸ್‌ನ ‘ವೇದಿಕ್ ಲೈಫ್‌ಕೇರ್‌’ ವೈದ್ಯರ ಸೂಚನೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದೆ. ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ಪಡೆದಿದ್ದ ಆಸ್ಪತ್ರೆಯವರು, ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದರು. ಅದರಿಂದಲೇ ತಾಯಿ ಮೃತಪಟ್ಟಿದ್ದಾರೆ. ನನಗೆ ನ್ಯಾಯ ಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಬೆಂಗಳೂರಿನಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಎಂದು ಬಂದಿದ್ದೆ. ಶಸ್ತ್ರಚಿಕಿತ್ಸೆ ನಡೆಸಲು ₹ 6.98 ಲಕ್ಷ ಶುಲ್ಕವಾಗುತ್ತದೆ ಎಂದು ಆಸ್ಪತ್ರೆಯವರು ಹೇಳಿದ್ದರು. ಅದಕ್ಕೆ ಒಪ್ಪಿ ಮುಂಗಡ ಹಣವನ್ನೂ ಪಾವತಿ ಮಾಡಿದ್ದೆ. ಆದರೆ, ಈಗ ಹಣವೂ ಹೋಗಿದೆ. ತಾಯಿಯನ್ನೂ ಕಳೆದುಕೊಂಡಿದ್ದೇನೆ’ ಎಂದು ದೂರಿದ್ದಾರೆ.

2015ರಲ್ಲೂ ಸಾವು ಸಂಭವಿಸಿತ್ತು: ‘ಮಣಿಪಾಲ್ ಆಸ್ಪತ್ರೆಗೆ 2015ರಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದ ನೈಜೀರಿಯಾದ ಎಡ್ವಿನ್ ಮಾಡೂಕ್ (72) ಎಂಬುವರು ಸಹ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದರು’ ಎಂದು ತೋಬಿ ಆಜಿಸೆಗ್ಬೇಡೆ ಅವರ ಪರ ವಕೀಲ ತಾಜಿ ಜಾರ್ಜ್‌ ಆರೋಪಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ನಗರದ ವಿವಿಧಆಸ್ಪತ್ರೆಗಳಲ್ಲಿ ನೈಜೀರಿಯಾದ 100ಕ್ಕೂ ಹೆಚ್ಚು ಪ್ರಜೆಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ ಹಲವರಿಗೆ ಆಸ್ಪತ್ರೆಗಳಿಂದ ಅನ್ಯಾಯ ಆಗುತ್ತಿದೆ. ಈ ಬಗ್ಗೆ ನೈಜೀರಿಯಾದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಸಹಾಯಕ್ಕೆ ಬರುವಂತೆ ಕೋರಲಿದ್ದೇವೆ’ ಎಂದು ಹೇಳಿದರು.

ಆರೋಪ ತಳ್ಳಿಹಾಕಿದ ಆಸ್ಪತ್ರೆ ಅಧಿಕಾರಿ

ತೋಬಿ ಆಜಿಸೆಗ್ಬೇಡೆ ಅವರು ಮಾಡಿರುವ ಆರೋಪ ತಳ್ಳಿ ಹಾಕಿದ ಮಣಿಪಾಲ್ ಆಸ್ಪತ್ರೆಯ ಪ್ರಾದೇಶಿಕ ಕಾರ್ಯಾಚರಣೆ ಮುಖ್ಯ ಅಧಿಕಾರಿ ಡಾ. ದೀಪಕ್ ವೇಣುಗೋಪಾಲ್, ‘ಆಸ್ಪತ್ರೆಯು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಯ ಪ್ರತಿ ಹಂತದಲ್ಲೂ ಕುಟುಂಬಸ್ಥರ ಒಪ್ಪಿಗೆ ಪಡೆದು ವೈದ್ಯರು ಮುಂದುವರಿಯುತ್ತಾರೆ’ ಎಂದು ಹೇಳಿದರು.

‘ಜೂಲಿಯಟ್ ಅವರು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ’ ಎಂದು ಅವರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT