ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಕಾಮಗಾರಿ; ನೆಮ್ಮದಿಗಿಲ್ಲ ‘ದಾರಿ’

ಬನ್ನೇರುಘಟ್ಟ ರಸ್ತೆಯಲ್ಲಿ ಯಂತ್ರಗಳ ಮೊರೆತ * ತಂಗುದಾಣವಿಲ್ಲದೆ ಬಿಸಿಲಿನಲ್ಲಿ ಬೇಯುವ ಪ್ರಯಾಣಿಕರು
Last Updated 2 ಮೇ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ದಟ್ಟಣೆಯ ಮಾರ್ಗಗಳಲ್ಲಿ ಒಂದಾದ ಬನ್ನೇರುಘಟ್ಟ ರಸ್ತೆಯಲ್ಲಿ ‘ನಮ್ಮ ಮೆಟ್ರೊ’ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿಗಳು ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಬಸ್‌ ತಂಗುದಾಣ ಇದ್ದೂ ಇಲ್ಲದಂತಾಗಿದ್ದು, ಪ್ರಯಾಣಿಕರು ಬಿಸಿಲಿನಲ್ಲಿ ಬೇಯುತ್ತಬಸ್‌ಗಳಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಜಯದೇವ ಆಸ್ಪತ್ರೆ, ಬಿಳೇಕಹಳ್ಳಿ, ಅಪೊಲೊ ಆಸ್ಪತ್ರೆ, ಜೇಡಿಮರ ಜಂಕ್ಷನ್‌,ಅರಕೆರೆ, ಮೀನಾಕ್ಷಿ ದೇವಸ್ಥಾನ, ಗೊಟ್ಟಿಗೆರೆ, ಬಸವನಪುರ, ಕೋಳಿಫಾರಂ ಗೇಟ್‌, ದೇವರಚಿಕ್ಕನಹಳ್ಳಿ ಕಡೆಗೆ ತೆರಳುವ ಬಹುತೇಕ ಬಸ್‌ಗಳುಈ ಮಾರ್ಗದಮೂಲಕವೇ ಹಾದುಹೋಗುತ್ತವೆ. ಈ ಪ್ರದೇಶಗಳಿಂದ ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌.ಮಾರುಕಟ್ಟೆ, ಶಿವಾಜಿನಗರ ಹಾಗೂ ಬ್ರಿಗೇಡ್‌ ರಸ್ತೆಗೆ ತಲುಪುವ ಬಸ್‌ಗಳು ಇದೇ ಮಾರ್ಗ ಬಳಸುತ್ತವೆ. ಪ್ರಯಾಣಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ.

ಬಯಲು ದಿಣ್ಣೆಯೇ ತಂಗುದಾಣ:ಹುಳಿಮಾವಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣವೊಂದನ್ನು ನಿರ್ಮಿಸಲಾಗಿತ್ತು. ಸದ್ಯ ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಅದು ಅನಾಥವಾಗಿದೆ. ಮೆಟ್ರೊ ನಿಗಮದವರು ಹಾಗೂ ಬಿಎಂಟಿಸಿಯವರು ಪರ್ಯಾಯ ವ್ಯವಸ್ಥೆ ಮಾಡದ ಕಾರಣಪ್ರಯಾಣಿಕರು ಇಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ದಿಣ್ಣೆಯ ಮೇಲೆ ಬಸ್‌ಗಾಗಿ ಬಿಸಿಲಿನಲ್ಲಿಯೇಕಾಯುತ್ತಾರೆ.

ಬಿಸಿಲು ಜಾಸ್ತಿಯಾದರೆ, ಹಿರಿಯ ನಾಗರಿಕರು, ಮಹಿಳೆಯರು ಪಕ್ಕದಲ್ಲಿನ ದೇವಸ್ಥಾನ, ಹೋಟೆಲ್ ಮತ್ತುಅಂಗಡಿಗಳ ಮುಂಭಾಗದಲ್ಲಿ ಕುಳಿತುಕೊಳ್ಳುತ್ತಾರೆ. ಬಸ್‌ ಬಂದಾಗೊಮ್ಮೆ ಓಡೋಡಿ ಬಂದು ಅದು ತಾವು ಹೋಗಬೇಕಾದ ಪ್ರದೇಶಕ್ಕೆ ಹೋಗುತ್ತದೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಂಡು ಬೇರೆ ಮಾರ್ಗದ ಬಸ್‌ ಆಗಿದ್ದರೆ, ಮತ್ತೆ ಅಲ್ಲಿಯೇ ಹೋಗಿ ಕುಳಿತುಕೊಳ್ಳುತ್ತಾರೆ.

ಬುಡಮೇಲಾದ ಟೆಂಟ್‌: ಪ್ರಯಾಣಿಕರು ಕಷ್ಟ ಅನುಭವಿಸುವುದನ್ನು ಕಂಡು ದಾನಿಗಳೊಬ್ಬರು ಟೆಂಟ್‌ ಹಾಕಿ, ನೆರಳು ಮಾಡಿದ್ದರು. ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಳೆ ಗಾಳಿಗೆ ಅದು ಬಿದ್ದು ಹೋಗಿದ್ದರಿಂದ ಪ್ರಯಾಣಿಕರು ಮತ್ತೆ ಬಿಸಿಲಿನಲ್ಲಿ ಕಾಯುವುದು ಮುಂದುವರೆದಿದೆ.

ಇಲ್ಲಿ ಆಸ್ಪತ್ರೆ ಕಾಂ‍ಪೌಂಡೇ ತಂಗುದಾಣ: ಮೆಟ್ರೊ ಕಾಮಗಾರಿ ಹಿನ್ನೆಲೆಯಲ್ಲಿ ಮೀನಾಕ್ಷಿ ದೇವಸ್ಥಾನದ ಬಳಿ ಇದ್ದ ತಂಗುದಾಣವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಅದು ಸ್ವಲ್ಪ ದೂರವಾಗುವುದರಿಂದ ಜನರು ಅಲ್ಲಿಗೆ ಹೋಗುವುದಿಲ್ಲ. ಖಾಸಗಿ ಆಸ್ಪತ್ರೆಯೊಂದರ ಕಾಂಪೌಂಡ್‌ ಎದುರು ಬಸ್‌ಗಳನ್ನು ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳಲಾಗುತ್ತದೆ.

ಪ್ರಯಾಣಿಕರೂ ಅಲ್ಲಿಯೇ ನಿಂತು ಬಸ್‌ಗಳಿಗಾಗಿ ಕಾಯುತ್ತಾರೆ.

ಬಿಳೇಕಹಳ್ಳಿಯಲ್ಲಿಯೂ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಮಧ್ಯೆ ಭಾಗದಲ್ಲಿ ಕಂಬಗಳನ್ನು ಹಾಕಲು ರಂಧ್ರ ಕೊರೆಯಲಾಗುತ್ತಿದೆ. ಅಷ್ಟೇ ಅಲ್ಲದೆ ಜಲಮಂಡಳಿ ಕಾಮಗಾರಿಯೂ ನಡೆಯುತ್ತಿದೆ. ಆದ್ದರಿಂದ ಇಡೀ ರಸ್ತೆ, ಕಾಮಗಾರಿ ಸ್ಥಳವಾಗಿ ಮಾರ್ಪಟ್ಟಿದ್ದು, ಒಂದು ದೊಡ್ಡ ವಾಹನ ಹೋಗುವಷ್ಟು ಜಾಗವನ್ನು ಮಾತ್ರ ಬಿಡಲಾಗಿದೆ.

ತಂಗುದಾಣದ ಮುಂಭಾಗದಲ್ಲಿ ಆಟೊಗಳ ಹಾವಳಿ ಹೆಚ್ಚಾಗಿರುವುದರಿಂದ ಪ್ರಯಾಣಿಕರಿಗೆ ನಿಲ್ಲಲು ಸ್ಥಳವಿಲ್ಲದೇ ವಾಹನ ದಟ್ಟಣೆ ಉಂಟಾಗುತ್ತಿದೆ. ಬಸ್‌ ನಿಲ್ದಾಣವನ್ನು ಸ್ಥಳಾಂತರಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ.

‘ನಮ್ಮ ಮೆಟ್ರೊ’ ಯೋಜನೆಯ 2ನೇ ಹಂತದ ಕಾಮಗಾರಿ ನಡೆಯುತ್ತಿದೆ. ಜೇಡಿ ಮರ ಜಂಕ್ಷನ್‌ನಿಂದ ಗೊಟ್ಟಿಗೆರೆಯವರೆಗೆ ಮಾರ್ಗ ನಿರ್ಮಾಣಕ್ಕಾಗಿ ರಸ್ತೆಯ ಮಧ್ಯೆ 4 ಮೀಟರ್‌ ಜಾಗವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಸ್ವಾಧೀನ ಪಡಿಸಿಕೊಂಡಿದ್ದು, ಸದ್ಯ ಕಾಮಗಾರಿ ನಡೆಯುತ್ತಿದೆ.

ಇನ್ನೊಂದು ಕಡೆ ಜೇಡಿ ಮರ ಜಂಕ್ಷನ್‌ನಿಂದ ಕೋಳಿ ಫಾರಂ ಗೇಟ್‌ವರೆಗೆ ರಸ್ತೆ ವಿಸ್ತರಿಸಲಾಗುತ್ತಿದ್ದು, ರಸ್ತೆಯನ್ನು 155 ಅಡಿಗೆ ವಿಸ್ತರಣೆ ಮಾಡಲಾಗುತ್ತಿದೆ.

ಮಿತಿಮೀರಿದ ದಟ್ಟಣೆ

ಬನ್ನೇರುಘಟ್ಟ ರಸ್ತೆಯು ಸದಾ ವಾಹನಗಳಿಂದ ಗಿಜಿಗುಡುತ್ತಿರುತ್ತದೆ. ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಈ ಮಾರ್ಗದಲ್ಲಿ ಆಸ್ಪತ್ರೆಗಳು ಹೆಚ್ಚಿರುವುದರಿಂದ ನಿತ್ಯ ಆಂಬ್ಯುಲೆನ್ಸ್‌ಗಳು ಸಂಚರಿಸುತ್ತವೆ. ‌

ದಟ್ಟಣೆ ಉಂಟಾಗುವುದರಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲಾಗುವುದಿಲ್ಲ.

ಅಂಕಿ–ಅಂಶ

ಬನ್ನೇರುಘಟ್ಟ ರಸ್ತೆಯಲ್ಲಿರುವ ಸಣ್ಣ ಬಸ್‌ ತಂಗುದಾಣಗಳು – 17
ಈ ರಸ್ತೆಯನ್ನು ಬಳಸುವ ಬಸ್‌ ಮಾರ್ಗಗಳ (ಶೆಡ್ಯೂಲ್‌) ಸಂಖ್ಯೆ – 45

***

ಪ್ರಾಥಮಿಕ ಹಂತದ ಮೆಟ್ರೊ ಕಾಮಗಾರಿ ಮುಗಿದ ತಕ್ಷಣ ಬಿಬಿಎಂಪಿಯವರ ಜೊತೆ ಚರ್ಚಿಸಿ ಬಸ್‌ ತಂಗುದಾಣಗಳನ್ನು ಸ್ಥಳಾಂತರ ಮಾಡಲಾಗುವುದು.

- ಡಾ.ಎನ್‌.ವಿ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ

ಬಿಸಿಲಲ್ಲಿ ಬಸ್‌ಗಾಗಿ ಕಾಯಬೇಕು. ಮಕ್ಕಳು, ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಾರೆ. ಬಸ್‌ ನಿಲ್ದಾಣಗಳನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಿದರೆ ಅನುಕೂಲವಾಗಲಿದೆ.

- ಶಿವರಾಜು, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT