ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಒಂದೇ ಕಡೆ ನಿಲ್ದಾಣ ನಿರ್ಮಿಸಲು ನಿಗಮ ನಕಾರ

ಮರ ಸ್ಥಳಾಂತರಕ್ಕೆ ಹಸಿರು ನಿಶಾನೆ
Last Updated 9 ಮೇ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ಗೊಟ್ಟಿಗೆರೆ– ನಾಗವಾರ ಮಾರ್ಗದಲ್ಲಿ ವೆಲ್ಲಾರ ಜಂಕ್ಷನ್‌ ಹಾಗೂ ಲ್ಯಾಂಗ್‌ಫೋರ್ಡ್‌ ಟೌನ್‌ನಲ್ಲಿ ನಿಲ್ದಾಣ ನಿರ್ಮಿಸುವ ಬದಲು ಒಂದೇ ಕಡೆ ನಿಲ್ದಾಣ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿರಸ್ಕರಿಸಿದೆ.

ಆದರೆ, ಈ ನಿಲ್ದಾಣಗಳ ನಿರ್ಮಾಣಕ್ಕಾಗಿ ಕಡಿಯಬೇಕಾಗುವ ಮರಗಳ ಪೈಕಿ ಕೆಲವೊಂದನ್ನು ಸ್ಥಳಾಂತರ ಮಾಡಲು ನಿಗಮವು ಹಸಿರು ನಿಶಾನೆ ತೋರಿದೆ. ಈ ಎರಡು ನಿಲ್ದಾಣಗಳಿಗಾಗಿ ಭಾರಿ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದನ್ನು ತಪ್ಪಿಸುವ ಸಲುವಾಗಿ ಪರಿಸರ ಕಾರ್ಯಕರ್ತರು ಈ ಬೇಡಿಕೆ ಮುಂದಿಟ್ಟಿದ್ದರು.

ಪರಿಸರ ಕಾರ್ಯಕರ್ತದ ಬೇಡಿಕೆ ಕುರಿತು ಪ್ರತಿಕ್ರಿಯಿಸಿರುವ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌, ‘ಈ ಎರಡು ನಿಲ್ದಾಣಗಳ ಬದಲು ಒಂದೇ ನಿಲ್ದಾಣ ನಿರ್ಮಿಸುವುದು ಕಾರ್ಯಸಾಧುವಲ್ಲ’ ಎಂದು ತಿಳಿಸಿದ್ದಾರೆ.

‘ವೆಲ್ಲಾರ ಜಂಕ್ಷನ್‌ ನಿಲ್ದಾಣ ನಿರ್ಮಿಸದಿದ್ದರೆ, ಲ್ಯಾಂಗ್‌ಫೋರ್ಡ್‌ ಟೌನ್ ಮತ್ತು ಎಂ.ಜಿ.ರಸ್ತೆ ನಿಲ್ದಾಣಗಳ ನಡುವಿನ ಅಂತರ 2.14 ಕಿ.ಮೀ.ಗಳಷ್ಟಾಗುತ್ತದೆ. ವೆಲ್ಲಾರ ಜಂಕ್ಷನ್‌, ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣ, ಗರುಡಾ ಮಾಲ್‌, ಕ್ಯಾಥೆಡ್ರಲ್‌ ಹೈಸ್ಕೂಲ್‌, ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಹಾಗೂ ಸೇಂಟ್‌ ಫಿಲೋಮಿನಾ ಆಸ್ಪತ್ರೆಗಳಿಗೆ ಹೊಗುವ ಪ್ರಯಾಣಿಕರಿಗೆ ಅನನುಕೂಲವಾಗುತ್ತದೆ’ ಎಂದರು.

‘ಸುರಂಗ ಮಾರ್ಗದಲ್ಲಿ ಎರಡು ನಿಲ್ದಾಣಗಳ ನಡುವಿನ ಅಂತರ 1.5 ಕಿ.ಮೀ.ಗಿಂತ ಹೆಚ್ಚಾದರೆ, ಗಾಳಿಯಾಡುವುದಕ್ಕೆ ಹಾಗೂ ತುರ್ತು ಸಂದರ್ಭದಲ್ಲಿ ಅಪಾಯದಲ್ಲಿ ಸಿಲುಕಿದವರ ರಕ್ಷಣೆಗೆ ‍ಪ್ರತ್ಯೇಕ ಕಿಂಡಿಯ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

ಈ ಎರಡು ನಿಲ್ದಾಣಗಳ ಬದಲು ಒಂದೇ ಕಡೆ ನಿಲ್ದಾಣ ನಿರ್ಮಿಸುವಂತೆ ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ ಸಂಘಟನೆ ಒತ್ತಾಯಿಸಿತ್ತು. ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಈ ಸಂಘಟನೆಯ ಸದಸ್ಯರ ನಿಯೋಗವು, ‘ಎರಡು ನಿಲ್ದಾಣಗಳ ಬದಲು ಒಂದೇ ಕಡೆ ನಿಲ್ದಾಣ ನಿರ್ಮಿಸುವುದರಿಂದ 80 ಮರಗಳನ್ನು ಕಡಿಯುವುದನ್ನು ತಪ್ಪಿಸಬಹುದು. ಇದರಿಂದ ವೆಚ್ಚವೂ ಉಳಿತಾಯವಾಗುತ್ತದೆ’ ಎಂದು ಸಲಹೆ ನೀಡಿತ್ತು.

‘ಈ ಎರಡು ನಿಲ್ದಾಣಗಳ ಕಾಮಗಾರಿಗಾಗಿ ಕಡಿಯಬೇಕಾದ ಮರಗಳ ಸಂಖ್ಯೆ 50 ದಾಟುವುದಿಲ್ಲ. ಇವುಗಳಲ್ಲಿ ಹೆಚ್ಚಿನವುಗಳನ್ನು ಸ್ಥಳಾಂತರ ಮಾಡಬಹುದು. ಹಾಗಾಗಿ ಚರ್ಚ್‌ ಪ್ರಾಂಗಣದ ಹಸಿರು ಕವಚಕ್ಕೆ ಹೆಚ್ಚಿನ ಹಾನಿಯೇನೂ ಆಗುವುದಿಲ್ಲ’ ಎಂದು ಚೌಹಾಣ್‌ ಅಭಿಪ್ರಾಯಪಟ್ಟರು.

‘ನಿಲ್ದಾಣಗಳ ನಡುವೆ 1.3 ಕಿ.ಮೀ ಅಂತರವಿರಲಿ’
ಎರಡು ಮೆಟ್ರೊ ನಿಲ್ದಾಣಗಳ ನಡುವೆ ಸರಾಸರಿ 1.3 ಕಿ.ಮೀ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮೆಟ್ರೊ ನಿಗಮಗಳಿಗೆ ಸಲಹೆ ನೀಡಿದೆ.

ಮೆಟ್ರೊ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ ಸಚಿವಾಲಯವು, ‘ಮೆಟ್ರೊ ರೈಲು ಯೋಜನೆಗಳ ವೆಚ್ಚಕ್ಕೆ ಸಂಬಂಧಿಸಿದ ಮಾನದಂಡ ನಿಗದಿಪಡಿಸಿರುವ ವರದಿ ಪ್ರಕಾರ ಸುರಂಗ ಮಾರ್ಗದಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ನಿಲ್ದಾಣದ ಅಂಚಿನಲ್ಲಿರಬೇಕು.

ಡೇರಿ ವೃತ್ತ– ನಾಗವಾರ ನಡುವೆ ನಿರ್ಮಾಣವಾಗುವ ಸುರಂಗ ಮಾರ್ಗದಲ್ಲಿ ನಿಲ್ದಾಣಗಳ ನಡುವೆ ಸರಾಸರಿ 1.12 ಕಿ.ಮೀ ಅಂತರವಿದೆ. ಡೇರಿ ವೃತ್ತ– ವೆಲ್ಲಾರ ಜಂಕ್ಷನ್‌ ನಡುವಿನ ಮೂರು ನಿಲ್ದಾಣಗಳ ನಡುವಿನ ಸರಾಸರಿ ಅಂತರ 0.924 ಕಿ.ಮೀ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT