ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಗತಿಯಲ್ಲಿ ಗೊಟ್ಟಿಗೆರೆ–ನಾಗವಾರ ಮೆಟ್ರೊ ಮಾರ್ಗ: ‘ರೀಚ್‌’ ಆದೀತೇ ರೀಚ್‌ 6?

ಮಂದಗತಿಯಲ್ಲಿ ಗೊಟ್ಟಿಗೆರೆ–ನಾಗವಾರ ಮೆಟ್ರೊ ಮಾರ್ಗ
Last Updated 22 ಅಕ್ಟೋಬರ್ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೀಚ್‌–6ರ ಗೊಟ್ಟಿಗೆರೆ–ನಾಗವಾರ ಮಾರ್ಗ ನಿರ್ಮಾಣ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗಿದೆ. ‌

ಗೊಟ್ಟಿಗೆರೆಯಿಂದ – ಸ್ವಾಗತ್‌ ಕ್ರಾಸ್‌ ರೋಡ್‌ವರೆಗೆ ಎತ್ತರಿಸಲ್ಪಟ್ಟ ಮಾರ್ಗದ ಕಾಮಗಾರಿ ಹಂತಹಂತವಾಗಿ ನಡೆಯುತ್ತಿದೆ. 7.5 ಕಿಲೋಮೀಟರ್‌ನ ಈ ವ್ಯಾಪ್ತಿಯಲ್ಲಿ ಐದು ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಕಾಮಗಾರಿ ನಡೆದಿರುವುದು ಹೊರತುಪಡಿಸಿದರೆ ಉಳಿದ ಕಡೆ ಭೂಸ್ವಾಧೀನ ಸಂಬಂಧಿಸಿದ ತಾಂತ್ರಿಕ ಪ್ರಕ್ರಿಯೆಗಳೇ ಮಂದಗತಿಯಲ್ಲಿ ಸಾಗಿವೆ. ಡೇರಿ ವೃತ್ತದಿಂದ ಅಗ್ನಿಶಾಮಕ ಠಾಣೆಯವರೆಗೆ ನಿರ್ಮಿಸಬೇಕಾದ ಭೂಗತ ಮಾರ್ಗದ ಟೆಂಡರ್‌ ಅಂತಿಮಗೊಳಿಸುವ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ.

ಹೀಗಾಗಿ ಈ ಕಾಮಗಾರಿ ಅಂದುಕೊಂಡ ವೇಗದಲ್ಲಿ ನಡೆಯುವುದು ಅನುಮಾನ ಎಂದು ಮೆಟ್ರೊ ಮೂಲಗಳು ಹೇಳಿವೆ.

ಒಟ್ಟಾರೆ ಭೂಗತ ಮಾರ್ಗದ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಎರಡು ಕಾಮಗಾರಿಗಳ ಟೆಂಡರನ್ನು ಕ್ರಮವಾಗಿ ಅ. 25 ಮತ್ತು ನ. 3ರಂದು ತೆರೆಯಲಾಗುವುದು ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಹೇಳಿದರು.

‘ಡೇರಿ ವೃತ್ತದಿಂದ ಲಾಂಗ್‌ಫೋರ್ಡ್‌ ರಸ್ತೆವರೆಗೆ ಭೂಗತ ಮಾರ್ಗ ನಿರ್ಮಿಸುವ ಚಿಂತನೆ ಇದೆ. ಮೂಲತಃ ಇದನ್ನು ಎಂಜಿ ರಸ್ತೆವರೆಗೂ ವಿಸ್ತರಿಸುವ ಆಲೋಚನೆ ಇತ್ತು. ಆದರೆ, ಅದು ತಾಂತ್ರಿಕವಾಗಿ ಕಷ್ಟಸಾಧ್ಯ. ಹೀಗಾಗಿ ಕೆಲ ಭಾಗಗಳಲ್ಲಿ ಮಾತ್ರ ಭೂಗತ ಮಾರ್ಗ ನಿರ್ಮಿಸಲಾಗುತ್ತದೆ’ ಎಂದು ಸೇಠ್‌ ವಿವರಿಸಿದರು.

ಎಂ.ಜಿ. ರಸ್ತೆಯಿಂದ ಶಿವಾಜಿನಗರ ಮಾರ್ಗವಾಗಿ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಇದು. ಮುಂದೆ ಹೆಬ್ಬಾಳ ಫ್ಲೈಓವರ್‌ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಹೊಂದಿದೆ. ಆದರೆ, ಹೆಗಡೆನಗರದ ಬಳಿ ಪೆಟ್ರೋಲಿಯಂ ಪೈಪ್‌ ಲೈನ್‌ ಮಾರ್ಗ ನಿರ್ಮಾಣಕ್ಕೆ ಅಡ್ಡಿ ಉಂಟು ಮಾಡಿದೆ. ಹೀಗಾಗಿ ಯೋಜನೆಯ ವಿನ್ಯಾಸದಲ್ಲಿ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮಾಡುವುದು ಅನಿವಾರ್ಯ ಎಂದು ನಿಗಮದ ಅಧಿಕಾರಿಗಳು ಹೇಳಿದರು.

ಇದುವರೆಗೆ ಎತ್ತರಿಸಲ್ಪಟ್ಟ ಮಾರ್ಗದಲ್ಲಿ ಬರುವ 311 ಆಸ್ತಿಗಳನ್ನು ಗುರುತಿಸಲಾಗಿದ್ದು ಈ ಪೈಕಿ 240 ಆಸ್ತಿಗಳಿಗೆ ನೀಡುವ ಪರಿಹಾರ ಮೊತ್ತವನ್ನು ಕೆಐಎಡಿಬಿಗೆ ಕಳುಹಿಸಲಾಗಿದೆ. 204 ಆಸ್ತಿಗಳಿಗೆ ಸಂಬಂಧಿಸಿದಂತೆ ₹ 478 ಕೋಟಿ ಪರಿಹಾರ ನೀಡಲಾಗಿದೆ. ಕೊತ್ತನೂರು ಡಿಪೊ ನಿರ್ಮಿಸಲು ಬೇಕಾದ 30,589 ಚದರ ಮೀಟರ್‌ ಭೂಮಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿಯೂ ಸಮೀಕ್ಷೆಯೇನೋ ನಡೆದಿದೆ. ಭೂಸ್ವಾಧೀನ ಸಂಬಂಧಿಸಿದ ಪ್ರಕ್ರಿಯೆಗಳಿಗಾಗಿ ಕಾಯಬೇಕಿದೆ ಎಂದು ನಿಗಮ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಅಂದಾಜು ₹ 11,014 ಕೋಟಿ ವೆಚ್ಚದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣವಾಗುತ್ತಿದೆ.ಸದ್ಯ ನಡೆಯುತ್ತಿರುವ ಎತ್ತರಿಸಲ್ಪಟ್ಟ ಮಾರ್ಗಗಳ ಕಾಮಗಾರಿಯ ವೇಗ ವರ್ಧಿಸಬೇಕು. ಬೇಗನೆ ಕಾಮಗರಿ ಮುಗಿಸಿ ಸಂಚಾರದಟ್ಟಣೆ ನಿವಾರಿಸಲು ನಿಗಮ ಕ್ರಮ ಕೈಗೊಳ್ಳಬೇಕು ಎಂದು ಈ ಮಾರ್ಗ ವ್ಯಾಪ್ತಿಯ ನಾಗರಿಕರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT