ರಸ್ತೆಗೆ ನೀರು ಚೆಲ್ಲಿದ್ದಕ್ಕೆ ಹರಿಯಿತು ನೆತ್ತರು!

7
‘ಕಾಂಡಿಮೆಂಟ್ಸ್’ ಮಾಲೀಕನ ಹತ್ಯೆ l ಸಾಫ್ಟ್‌ವೇರ್ ಉದ್ಯೋಗಿಯ ಬೆರಳು ತುಂಡು

ರಸ್ತೆಗೆ ನೀರು ಚೆಲ್ಲಿದ್ದಕ್ಕೆ ಹರಿಯಿತು ನೆತ್ತರು!

Published:
Updated:
Deccan Herald

ಬೆಂಗಳೂರು: ರಸ್ತೆಗೆ ನೀರು ಚೆಲ್ಲಿದ ವಿಚಾರಕ್ಕೆ ಶುರುವಾದ ಜಗಳದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಜೆ.ಸಿ.ನಗರ 17ನೇ ಮುಖ್ಯರಸ್ತೆಯಲ್ಲಿರುವ ‘ಸಾಯಿ ಕಾಂಡಿಮೆಂಟ್ಸ್‌’ ಮಾಲೀಕ ಮಂಜುನಾಥ್ (45) ಮೃತರು. ಬಿಬಿಎಂ ವಿದ್ಯಾರ್ಥಿಯಾಗಿರುವ ಅವರ ಮಗ ಮನೋಜ್‌ ಮೇಲೂ ಚಾಕುವಿನಿಂದ ಹಲ್ಲೆ ನಡೆದಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆ
ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬದವರೂ ಪ್ರತಿದಾಳಿ ನಡೆಸಿದ್ದರಿಂದ ಆರೋಪಿ ಆಕಾಶ್‌ನ ಬೆರಳು ತುಂಡಾಗಿದ್ದು, ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಸುಕಿನಲ್ಲೇ ಮಾರಾಮಾರಿ: ರಾಜಾಜಿನಗರದ ಆಕಾಶ್, ಮಾರತ್ತಹಳ್ಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡು
ತ್ತಾರೆ. ಶನಿವಾರ ರಾತ್ರಿ ನಾಗರಬಾವಿಯ ಗೆಳೆಯನ ಮನೆಗೆ ಹೋಗಿ ಪಾರ್ಟಿ ಮಾಡಿದ್ದ ಅವರು, ಅಲ್ಲಿಂದ ಬೆಳಿಗ್ಗೆ 5.30ರ ಸುಮಾರಿಗೆ ಬುಲೆಟ್ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು.

ಆಗಷ್ಟೇ ಮಳಿಗೆ ಬಾಗಿಲು ತೆಗೆದಿದ್ದ ಮಂಜುನಾಥ್, ಅಂಗಡಿ ಮುಂದೆ ಕಸ ಗುಡಿಸಿ ನೀರು ಹಾಕುತ್ತಿದ್ದರು. ಇಳಿಜಾರಿನ ರಸ್ತೆಯಲ್ಲಿ ವೇಗವಾಗಿ ಬಂದ ಆಕಾಶ್, ನಿಯಂತ್ರಣ ತಪ್ಪಿ ಅಂಗಡಿ ಮುಂದೆಯೇ ಬಿದ್ದರು. ‘ನೀವು ರಸ್ತೆಗೆ ನೀರು ಚೆಲ್ಲಿದ್ದರಿಂದಲೇ ಬೈಕ್ ಸ್ಕಿಡ್ ಆಯಿತು’ ಎಂದು ಮಂಜುನಾಥ್ ಜತೆ ಅವರು ಜಗಳಕ್ಕಿಳಿದರು ಎನ್ನಲಾಗಿದೆ.

ಸ್ವಲ್ಪ ಸಮಯದಲ್ಲೇ ಮಂಜುನಾಥ್ ಪತ್ನಿ ಹಾಗೂ ಮಗ ಸಹ ಅಲ್ಲಿಗೆ ಬಂದರು. ಅಂಗಡಿ ಮಾಲೀಕನ ಪರ ಸ್ಥಳೀಯ ಹುಡುಗರೂ ನಿಂತರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ರಾಡ್ ಹಾಗೂ ದೊಣ್ಣೆಗಳಿಂದ ಆಕಾಶ್ ಅವರನ್ನು ಥಳಿಸಿದರು. ಆಗ ಅವರು ಸಹ ದೊಣ್ಣೆ ಹಿಡಿದು ಸಿಕ್ಕಸಿಕ್ಕವರ ಮೇಲೆರಗಿದ್ದರು.

ಕೆಲ ಹೊತ್ತಿನ ಬಡಿದಾಟವು ಹಿರಿಯರ ಬುದ್ಧಿ ಮಾತಿನ ಬಳಿಕ ನಿಂತಿತು. ಆನಂತರ ಅಲ್ಲಿಂದ ಹೊರಟು ಹೋಗಿದ್ದ ಆಕಾಶ್, ಹತ್ತು ನಿಮಿಷಗಳಲ್ಲೇ ಪುನಃ ವಾಪಸಾದರು. ಇದರಿಂದ ಗಲಾಟೆಯ ತೀವ್ರತೆ ಮತ್ತಷ್ಟು ಜೋರಾಯಿತು. ಈ ಹಂತದಲ್ಲಿ ಚಾಕುವಿನಿಂದ ಮಂಜುನಾಥ್ ಅವರ ಎದೆಗೆ ಚುಚ್ಚಿದ ಆಕಾಶ್, ರಾಡ್ ಹಿಡಿದು ತಮ್ಮತ್ತ ಬಂದ ಮನೋಜ್‌ ಬೆನ್ನಿಗೂ ಇರಿದರು. ಸ್ಥಳೀಯರು ಚಾಕು ಕಸಿದುಕೊಳ್ಳಲು ಮುಂದಾದಾಗ ಆರೋಪಿಯ ಬೆರಳೂ ತುಂಡಾಯಿತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೂವರನ್ನೂ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಮಂಜುನಾಥ್ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಟೆಕಿ ಕೈಗೆ ಚಾಕು ಹೇಗೆ ಬಂತು?

‘ಆಕಾಶ್ ಅವರೇ ಚಾಕು ತಂದಿದ್ದರೇ ಅಥವಾ ಮಂಜುನಾಥ್ ಕುಟುಂಬ ತಂದಿದ್ದ ಚಾಕುವನ್ನು ಅವರು ಕಿತ್ತುಕೊಂಡು ಚುಚ್ಚಿ
ದರೇ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಘಟನೆ ಸಂಬಂಧ ದೂರು–ಪ್ರತಿದೂರು ದಾಖಲಾಗಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಲ್ಮೆಟ್‌ಗಾಗಿ ವಾಪಸ್ ಹೋದೆ’

‘ಸುಮಾರು 15 ಜನ ಸೇರಿಕೊಂಡು ನನಗೆ ಹೊಡೆದಿದ್ದರು. ಗಾಯಗೊಂಡು ಆಸ್ಪತ್ರೆಗೆ ಹೊರಟಿದ್ದ ನಾನು, ಗಲಾಟೆ ವೇಳೆ ರಸ್ತೆಗೆ ಬಿದ್ದಿದ್ದ ಹೆಲ್ಮೆಟ್ ತೆಗೆದುಕೊಂಡು ಹೋಗಲು ವಾಪಸ್ ಆ ಅಂಗಡಿ ಬಳಿ ಹೋಗಿದ್ದೆ. ‘ಮತ್ತೆ ಬರುತ್ತಿದ್ದಾನೆ ಬನ್ರೋ’ ಎಂದು ಹೇಳುತ್ತ ಎಲ್ಲರೂ ಪುನಃ ಒಟ್ಟಾದರು. ಈ ಹಂತದಲ್ಲಿ ಒಬ್ಬರು ಅಂಗಡಿಯೊಳಗಿನಿಂದ ಚಾಕು ತೆಗೆದುಕೊಂಡು ಬಂದು ನನಗೆ ಚುಚ್ಚಲೆತ್ನಿಸಿದರು. ಗಾಬರಿಯಾಯಿತು. ಅವರ ಕೈ ಹಿಡಿದುಕೊಂಡು ಚಾಕು ಕಿತ್ತುಕೊಂಡೆ. ಎಲ್ಲರೂ ಮೈಮೇಲೆ ಬಿದ್ದಿದ್ದರಿಂದ ದಿಕ್ಕು ತೋಚದಂತಾಗಿ ಚಾಕು ಬೀಸಿಬಿಟ್ಟೆ. ಕೊಲ್ಲುವ ಉದ್ದೇಶ ನನಗಿರಲಿಲ್ಲ’ ಎಂದು ಆಕಾಶ್ ಹೇಳಿಕೆ ಕೊಟ್ಟಿರುವುದಾಗಿ ಮಹಾಲಕ್ಷ್ಮಿಲೇಔಟ್ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 1

  Sad
 • 1

  Frustrated
 • 9

  Angry

Comments:

0 comments

Write the first review for this !