ಗುರುವಾರ , ನವೆಂಬರ್ 21, 2019
20 °C

ಅಕ್ರಮದಲ್ಲಿ 239 ಎಂಜಿನಿಯರ್, 514 ಗುತ್ತಿಗೆದಾರರು ಭಾಗಿ

Published:
Updated:

ಬೆಂಗಳೂರು: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತುಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಆದ ನಷ್ಟಕ್ಕೆ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಬೇಕು.

ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗ ಮೋಹನದಾಸ್‌ ಸಮಿತಿಯ ಪ್ರಮುಖ ಶಿಫಾರಸು ಇದು. ಬಿಬಿ ಎಂಪಿಯ ವಿಶೇಷ ಲೆಕ್ಕಪರಿಶೋಧಕರ ತಂಡವೂ ಇದೇ ಅಭಿಪ್ರಾಯವನ್ನು ನೀಡಿತ್ತು. ಈ ಅಕ್ರಮಗಳಿಗೆ 239 ಎಂಜಿನಿಯರ್‌ಗಳು (ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ಹಾಗೂ ಸಹಾ ಯಕ ಎಂಜಿನಿಯರ್‌ಗಳು) ಹಾಗೂ ಮೂವರು ಲೆಕ್ಕಪತ್ರ ಅಧೀ ಕ್ಷಕರು ಮತ್ತು 514 ಗುತ್ತಿಗೆದಾರರು ಕಾರಣ ಎಂದು ಗುರುತಿಸಿರುವ ಸಮಿತಿ, ಅವರ ಹೆಸರುಗಳನ್ನೂ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸಮಿತಿ ವರದಿ ಸಲ್ಲಿಸಿ ಆಗಲೇ 9 ತಿಂಗಳು ಕಳೆದಿವೆ. ಇದುವರೆಗೂ ಒಬ್ಬನೇ ಒಬ್ಬ ಅಧಿಕಾರಿ ಅಥವಾ ಗುತ್ತಿಗೆದಾರರ ವಿರುದ್ಧ ಕ್ರಮವಾಗಿಲ್ಲ. ಸಮಿತಿಯು ತನಿಖಾ ವರದಿಯನ್ನು ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅಂದಿನ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಸಲ್ಲಿಸಿತ್ತು. ಸರ್ಕಾರ ಪತನವಾಗುವವರೆಗೆ ಆ ವರದಿ ಪರಮೇಶ್ವರ ಕಚೇರಿಯಲ್ಲೇ ಉಳಿದಿತ್ತು. ಕೆಲವರ ಹಿತ ಕಾಯಲು ವರದಿ ಬಹಿರಂಗವಾಗದಂತೆ ಮೈತ್ರಿ ಸರ್ಕಾರ ನೋಡಿಕೊಂಡಿತು ಎಂಬ ಆರೋಪವೂ ಇದೆ. ಈ ತನಿಖೆಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಹೆಚ್ಚೂ ಕಡಿಮೆ 9 ತಿಂಗಳುಗಳು ಕಳೆದಿವೆ. ಆದರೂ ತಪ್ಪಿತಸ್ಥರ ಮೇಲೆ ಕ್ರಮ ಏಕಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.

ಅಶ್ವತ್ಥನಾರಾಯಣ ಮಹಿಮೆ ನೋಡಿ: ಎಚ್‌ಡಿಕೆ

ಮೈಸೂರು: ‘ಮಲ್ಲೇಶ್ವರ ಕ್ಷೇತ್ರದಲ್ಲಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಹಿಮೆ ಏನು ಎಂಬುದನ್ನು ‘ಪ್ರಜಾವಾಣಿ’ ಪತ್ರಿಕೆ ನೋಡಿ. 3,008 ಕಾಮಗಾರಿಗಳನ್ನು ಯಾವ ರೀತಿ ನಡೆಸಿದ್ದಾರೆ ಎಂಬುದರ ಬಗ್ಗೆ ಈ ಪತ್ರಿಕೆಯಲ್ಲಿ ಸರಣಿ ಲೇಖನಗಳು ಬರುತ್ತಿವೆ. ಎಚ್‌.ಎನ್‌.ನಾಗಮೋಹನ ದಾಸ್‌ ಸಮಿತಿ ವರದಿ ಇಟ್ಟುಕೊಂಡು ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ಇಲ್ಲಿ ಹೇಳಿದರು.

‘ಹಿಂದಿನ ಸರ್ಕಾರಗಳು ಬರ, ನೆರೆ ಪರಿಹಾರಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ’ ಎಂಬ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರ ಟೀಕೆಗೆ ಈ ರೀತಿ ತಿರುಗೇಟು ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅಶ್ವತ್ಥನಾರಾಯಣ ಅವರಿಗೆ ಮೂರು ಸಲ ಕರೆ ಮಾಡಲಾಯಿತು. ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

‘ಹೆಗಲೇರಿದ ಭ್ರಷ್ಟಾಚಾರ’

ಬಹುತೇಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿದ್ದು, ಅದು ಅಧಿಕಾರಿಗಳ ಹೆಗಲೇರಿದ ಪೆಡಂಭೂತವಾಗಿದೆ. ಭೂತ ಹಿಡಿದವರ ಕೈಯಲ್ಲಿ ಅಧಿಕಾರ ಇದ್ದರೆ ಸಮಾಜಕ್ಕೆ ಮಾರಕ. ಭ್ರಷ್ಟಾಚಾರ ಎಂಬ ಭೂತವನ್ನು ಬೇಗನೇ ಓಡಿಸಬೇಕು. ಇಲ್ಲವೇ ಅಧಿಕಾರಿಗಳ ಮೈಚಳಿ ಬಿಡಿಸಬೇಕು.

- ಶಿಶಿರ ಚಂದ್ರ, ರಾಮನಗರ

**

ಎಲ್ಲ ವಲಯಗಳ ತನಿಖೆಯಾಗಲಿ

ಪಾಲಿಕೆಯ ಮೂರು ವಲಯಗಳಲ್ಲೇ ಈ ಮಟ್ಟದ ಭ್ರಷ್ಟಾಚಾರ ನಡೆದಿದೆ. ಇನ್ನುಳಿದ ವಲಯಗಳಲ್ಲಿ ಇಂತಹ ಪ್ರಕರಣಗಳು ಎಷ್ಟಿರಬಹುದು? ಶೀಘ್ರವೇ ಪಾಲಿಕೆಯ ಎಲ್ಲ ವಲಯಗಳಲ್ಲಿ ತನಿಖೆ ಆಗಬೇಕಿದೆ. ಇಲ್ಲದೇ ಹೋದಲ್ಲಿ ಜನರ ತೆರಿಗೆ ಹಣ ‘ಯಾರದೋ ದುಡ್ಡು..ಎಲ್ಲಮ್ಮನ ಜಾತ್ರೆ’ ಎಂಬಂತಾಗುತ್ತದೆ.

- ಶಂಕರ್, ಚಂದ್ರಾ ಲೇಔಟ್‌

**

ಅಕ್ರಮಗಳಿಗೆ ತಡೆ ನೀಡಿ

ಪಾಲಿಕೆಯಲ್ಲಿ ಬೃಹದಾಕಾರವಾಗಿ ಬೆಳೆದಿರುವ ಅಕ್ರಮಗಳ ಬೇರು ಕತ್ತರಿಸಬೇಕಿದೆ. ಇಲ್ಲದಿದ್ದರೆ ಆಕಾಶದೆತ್ತರಕ್ಕೆ ಬೆಳೆದು ನುಂಗಣ್ಣರಿಗೆ ಆಶ್ರಯ ನೀಡಲಿದೆ. ಇವರ ಮೇಲೆ ಕ್ರಮ ತೆಗೆದುಕೊಳ್ಳದಿದ್ದರೆ ನಮಗೆ ನಾವೇ ವಂಚಿಸಿಕೊಂಡಂತೆ. ಇವರನ್ನು ಸಾರ್ವಜನಿಕವಾಗಿ ಶಿಕ್ಷಿಸಬೇಕು. ಸುಲೋಚನಾ, ಮಲ್ಲೇಶ್ವರ

**

ಭ್ರಷ್ಟರ ಸೌಲಭ್ಯ ನಿಲ್ಲಿಸಿ

ಪಾಲಿಕೆಯಲ್ಲಿ ಜನರ ಹಣ ಕೊಳ್ಳೆ ಹೊಡೆಯುತ್ತಿರುವ ಭ್ರಷ್ಟರನ್ನು ಶಿಕ್ಷಿಸಬೇಕು. ಅವರಿಗೆ ಸರ್ಕಾರದಿಂದ ನೀಡಲಾಗುವ ಬಡ್ತಿ, ಸೇವಾವಧಿ ಹಾಗೂ ವೇತನವನ್ನು ಕಡಿತಗೊಳಿಸಬೇಕು. ಅವರಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಲೂಟಿಕೋರರೇ ತುಂಬುತ್ತಾರೆ.

ಶ್ರೀಧರ್‌, ಬೊಮ್ಮನಹಳ್ಳಿ

**

ಭ್ರಷ್ಟರ ಪಟ್ಟಿ ಪ್ರಕಟಿಸಿ

ಕಾಮಗಾರಿಗಳ ಹೆಸರಲ್ಲಿ ಅಧಿಕಾರಿಗಳ ಮುಖವಾಡ ಧರಿಸಿರುವ ಲೂಟಿಕೋರರ ಬಗ್ಗೆ ಸಾರ್ವಜನಿಕರಿಗೆ ತಿಳಿಯಬೇಕು. ಇದಕ್ಕಾಗಿ ಅಕ್ರಮಗಳ ಬಗ್ಗೆ ತನಿಖೆಯಾಗಿ ಭ್ರಷ್ಟರ ಪಟ್ಟಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಬೇಕು. ಹೀಗಾದರೆ, ಸಮಾಜದಲ್ಲಿ ತಲೆ ಎತ್ತಿ ನಡೆಯಲು ಅವರು ಅಂಜಿ ಲೂಟಿ ಮಾಡುವುದನ್ನು ಬಿಡಬಹುದು.

- ಪ್ರತಾಪ್ ಕುಮಾರ್, ತಾವರೆಕೆರೆ

ಪ್ರತಿಕ್ರಿಯಿಸಿ (+)