ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸುರಿಯುವ ತಾಣವಾಗಿದೆ ಹೊರವರ್ತುಲ ರಸ್ತೆ

ಮಾಂಸ ತ್ಯಾಜ್ಯದಿಂದ ದುರ್ನಾತ : ಕಸದ ರಾಶಿಯಿಂದ ಕಿರಿದಾಗುತ್ತಿದೆ ರಸ್ತೆ
Last Updated 3 ಮಾರ್ಚ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದೊಳಗೆ ವಾಹನ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ನಿರ್ಮಿಸಿರುವ ಹೊರವರ್ತುಲ ರಸ್ತೆಯು ಕಸ ಸುರಿಯುವ ಡಂಪಿಂಗ್‌ಯಾರ್ಡ್‌ ಆಗಿ ಮಾರ್ಪಡುತ್ತಿದೆ. ಹೊರವರ್ತುಲ ರಸ್ತೆಯ ಇಕ್ಕೆಲಗಳಲ್ಲೂ ಕಸದ ರಾಶಿ ಅದರಲ್ಲೂ ವಿಶೇಷವಾಗಿ ಕಟ್ಟಡ ತ್ಯಾಜ್ಯ ಅಲ್ಲಲ್ಲಿ ಗುಡ್ಡೆ ಬಿದ್ದಿರುವುದು ಕಣ್ಣಿಗೆ ರಾಚುತ್ತದೆ.

ರಾತ್ರೋರಾತ್ರಿ ತಂದು ಸುರಿಯುವ ಕಸದ ರಾಶಿಯಿಂದಾಗಿ ರಸ್ತೆಬದಿಯ ಸ್ವಚ್ಛತೆ ಹಾಳಾಗುತ್ತಿದೆ. ಕೆಲವೆಡೆ ರಸ್ತೆಯ ಅಗಲವೂ ಕಿರಿದಾಗುತ್ತಿದೆ. ಇಲ್ಲಿ ಬೀಸಾಡುವ ಮನೆ ಕಸ ಮತ್ತು ಮಾಂಸದ ತ್ಯಾಜ್ಯದಿಂದ ದುರ್ವಾಸನೆಯೂ ಹಬ್ಬುತ್ತಿದೆ. ಇದರಿಂದ ವಾಹನ ಸವಾರರೂ ತೊಂದರೆ ಅನುಭವಿಸುವಂತಾಗಿದೆ.

ಈ ರಸ್ತೆಯಲ್ಲಿನ ಕೆಲವೊಂದು ಅವ್ಯವಸ್ಥೆಗಳು ಸ್ಥಳೀಯ ನಿವಾಸಿಗಳ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಹೊರವರ್ತುಲ ರಸ್ತೆಯುದ್ದಕ್ಕೂ ಸುತ್ತಾಡಿ ಬಂದಾಗ ಕಾಣಸಿಕ್ಕ ಕಸದ ತಾಣಗಳಿವು.

ಚನ್ನಸಂದ್ರ- ಇಲ್ಲಿನ ರಸ್ತೆ ಮತ್ತು ರೈಲು ಮಾರ್ಗದ ನಡುವಿನ ಗಿಡಗಂಟಿಗಳ ಪ್ರದೇಶ ಕಟ್ಟಡ ತ್ಯಾಜ್ಯ ಸುರಿಯುವ ಸ್ಥಳವಾಗಿದೆ. ಟನ್‌ಗಟ್ಟಲೇ ಕಸ ಈಗಾಗಲೇ ಸಂಗ್ರಹವಾಗಿದೆ. ಸಮೀಪದ ಬೈಯಪ್ಪನಹಳ್ಳಿ ಮೇಲ್ಸೇತುವೆ ಕೆಳಗೆ ಮಾಂಸದ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ.

ಚನ್ನಸಂದ್ರದ ಹೊರವರ್ತುಲ ರಸ್ತೆ ಬದಿಯಲ್ಲಿಕಸವನ್ನು ಸುರಿದಿರುವುದು
ಚನ್ನಸಂದ್ರದ ಹೊರವರ್ತುಲ ರಸ್ತೆ ಬದಿಯಲ್ಲಿ
ಕಸವನ್ನು ಸುರಿದಿರುವುದು

ಬಾಣಸವಾಡಿ - ಇಲ್ಲಿನ ಕೆಳಸೇತುವೆವರೆಗೂ ಗಾಳಿಗೆ ಹಾರಿ– ಮಳೆಗೆ ಹರಿದು ಬರುವ ಕಸ–ಕಡ್ಡಿಯನ್ನು ತೆಗೆಯುವವರಿಲ್ಲ. ಪ್ರದೇಶದ ಬುಲೇವಾರ್ಡ್‌ ಉದ್ಯಾನದ ಉದ್ದಕ್ಕೂ ಕಸವನ್ನು ಕಾಣಬಹುದು.

ಕಲ್ಯಾಣನಗರ – ಪ್ರಯಾಣಿಕರ ತಂಗುದಾಣದಲ್ಲೇ ಪಾಲಿಕೆಯ ಕಸದ ಲಾರಿಗಳನ್ನು ನಿಲ್ಲಿಸುತ್ತಾರೆ. ಸಣ್ಣ ಟಿಪ್ಪರ್‌ಗಳಿಂದ ಸಂಗ್ರಹಿಸಿ ತಂದ ಕಸವನ್ನು ಇಲ್ಲಿಯೇ ಲಾರಿಗೆ ತುಂಬುತ್ತಾರೆ. ಅದರ ರಚ್ಚು ರಸ್ತೆಯಲ್ಲಿ ಹರಡಿ, ಸಹಿಸಲು ಅಸಾಧ್ಯವಾದ ನಾತ ಬೀರುತ್ತದೆ. ಇಲ್ಲಿನ ಬುಲೇವಾರ್ಡ್‌ ಉದ್ಯಾನದಲ್ಲೇ ಕೆಲವರು ಕಸವನ್ನು ಸುರಿದು, ಆಗಾಗ ಬೆಂಕಿಯನ್ನೂ ಹಾಕುತ್ತಾರೆ.

ಬಿ.ನಾರಾಯಣಪುರ – ರಸ್ತೆ ವಿಭಜಕದ ಮೇಲೇಯೇ ಕಸ ಹಾಕುತ್ತಾರೆ. ಪಾದಚಾರಿ ಮಾರ್ಗದ ಮೇಲೆ ಅಲ್ಲಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಲಾಗಿದೆ.

ಮಾರತಹಳ್ಳಿ– ಈ ಹಳ್ಳಿಯ ಸೇತುವೆಯ ಆಸುಪಾಸಿನ ಪಾದಚಾರಿ ಮಾರ್ಗಗಳು ಮಳಿಗೆಗಳಿಂದ ಒತ್ತುವರಿಯಾಗಿವೆ. ಅಲ್ಲಲ್ಲಿ ಕಸದ ಗುಡ್ಡೆಗಳು ಕಣ್ಣಿಗೆ ಬೀಳುತ್ತವೆ.

ಬೆಳ್ಳಂದೂರು – ಸಮೀಪದ ಸರ್ಜಾಪುರ ಮೇಲ್ಸೇತುವೆ ಮತ್ತು ಅಗರದ ನಡುವೆ ಇರುವ ರಕ್ಷಣಾ ಇಲಾಖೆಯ ಜಮೀನಿನ ನಡುವೆ ಹೊರವರ್ತುಲ ರಸ್ತೆ ಹಾದುಹೋಗಿದೆ. ಇಲ್ಲಿನ ರಸ್ತೆಯ ಬದಿಯಲ್ಲಿ ಕಸ ಸುರಿಯಲಾಗುತ್ತಿದೆ. ಜಮೀನಿನಲ್ಲಿ ಬೆಳೆದಿರುವ ಮರಗಳ ಸೊಬಗನ್ನು ಕಸದ ರಾಶಿ ಹಾಳು ಮಾಡಿದೆ.

ಅಗರ – ಅಗರ ಕೆರೆಯ ಬದಿಯಲ್ಲಿಯೇ ಕಟ್ಟಡ ತ್ಯಾಜ್ಯ, ಮನೆ ಕಸ, ಮಾಂಸದ ಅಂಗಡಿಗಳ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಶುದ್ಧ ಗಾಳಿಯನ್ನರಸಿ ಕೆರೆಯಂಗಳಕ್ಕೆ ನಡಿಗೆಗಾಗಿ ಬರುವ ಜನರು ಇದರಿಂದ ರೋಸಿ ಹೋಗಿದ್ದಾರೆ.

ಎಚ್‌.ಎಸ್‌.ಆರ್‌. ಬಡಾವಣೆ: ಮೇಲ್ಸೇತುವೆ ಬದಿಯ ರಾಜಕಾಲುವೆ ಸದಾ ಗಬ್ಬುನಾತ ಬೀರುತ್ತಿರುತ್ತದೆ. ಈ ನಾಲೆಗೆ ಕೆಲವರು ಕಸವನ್ನೂ ಸುರಿಯುತ್ತಾರೆ. ಭಗವತಿ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲೆ ಮಣ್ಣು ಹರಡಿಕೊಂಡಿರುವುದರಿಂದ ಪ್ರತಿ ವಾಹನ ಹಾದುಹೋದಾಗ ಧೂಳು ಮೇಲೇಳುತ್ತಿದೆ. ಈ ಬಡಾವಣೆಯ 6ನೇ ಸೆಕ್ಟರ್‌ನ ರಸ್ತೆ ಮತ್ತು ರಾಜಕಾಲುವೆಯುದ್ದಕ್ಕೂ ಕಸದ ರಾಶಿ ಕಣ್ಣಿಗೆ ರಾಚುತ್ತದೆ.

ಬಿಟಿಎಂ ಬಡಾವಣೆ ಮೊದಲ ಹಂತ: ಮನೆಯ ಕಸವನ್ನು ರಸ್ತೆ ಬದಿ ಬಿಸಾಡುತ್ತಾರೆ. ಕಟ್ಟಡ ನಿರ್ಮಾಣ ಸಾಮಗ್ರಿ ಸಂಗ್ರಹಣೆ ಮತ್ತು ವಾಹನಗಳ ನಿಲುಗಡೆಯಿಂದ ಪಾದಚಾರಿಗಳಿಗೆ ಇಲ್ಲಿ ದಾರಿಯೇ ಇಲ್ಲದಂತಾಗಿದೆ. ಈ ಸಮಸ್ಯೆ ಜಯದೇವ ಜಂಕ್ಷನ್‌, ಸೆಂಟ್ರಲ್‌, ಸಂಗಂ ವೃತ್ತದವರೆಗೂ ವಿಸ್ತರಿಸಿದೆ.

ಸುಮ್ಮನಹಳ್ಳಿ ಜಂಕ್ಷನ್‌ : ಕಟ್ಟಡ ತ್ಯಾಜ್ಯದ ರಾಶಿಯ ಗಾತ್ರ ಇಲ್ಲಿ ಪ್ರತಿದಿನವೂ ದೊಡ್ಡದಾಗುತ್ತಿದೆ.

***

ಕಸದ ರಾಶಿಯಿಂದ ದುರ್ವಾಸನೆ ಹೊಮ್ಮುತ್ತದೆ. ಇಲ್ಲಿ ವಾಕ್‌ ಮಾಡಲು ಆಗುತ್ತಿಲ್ಲ. ಧೂಳಿನಿಂದ ಆರೋಗ್ಯ ಹದಗೆಡುತ್ತಿದೆ.

-ಸುಶೀಲ್‌ ಶರ್ಮಾ, ಎಚ್‌.ಎಸ್‌.ಆರ್‌.ಬಡಾವಣೆ

ಕಸದಿಂದಾಗಿ ಸೊಳ್ಳೆ–ನೋಣಗಳ ಕಾಟ ಹೆಚ್ಚುತ್ತಿದೆ. ಇದರಿಂದ ಮಲೇರಿಯಾ, ಡೆಂಗ್ಯೂ ಹರಡುವ ಭೀತಿಯಲ್ಲಿ ನಾವಿದ್ದೇವೆ.

-ತಾಸು, ಅಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT