ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ, ದೇವಸ್ಥಾನ, ಚರ್ಚ್ ಮೇಲೆ ನಿಗಾ

ಶ್ರೀಲಂಕಾ ಬಾಂಬ್ ಸ್ಫೋಟ ಘಟನೆ ಹಿನ್ನೆಲೆ; ರಾಜಧಾನಿಯಲ್ಲೂ ಕಟ್ಟೆಚ್ಚರ
Last Updated 25 ಏಪ್ರಿಲ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಲಂಕಾ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮಸೀದಿ, ದೇವಸ್ಥಾನ, ಚರ್ಚ್, ಮಾಲ್‌ ಹಾಗೂ ಹೋಟೆಲ್‌ಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.

ಉಪವಿಭಾಗವಾರು ಭದ್ರತೆ ಕೈಗೊಳ್ಳುವ ಹಾಗೂ ಅದರ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಡಿಸಿಪಿಗಳಿಗೆ ವಹಿಸಲಾಗಿದೆ. ಆಯಾ ಠಾಣೆ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಜನದಟ್ಟಣೆಪ್ರದೇಶಗಳಲ್ಲಿ ಭದ್ರತೆಗಾಗಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಭದ್ರತೆ ಬಗ್ಗೆ ಚರ್ಚಿಸಲು ಗುರುವಾರ ಡಿಸಿಪಿಗಳ ಸಭೆ ನಡೆಸಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್, ಹಲವು ನಿರ್ದೇಶನಗಳನ್ನು ನೀಡಿದರು. ಅದಾದ ನಂತರ, ಸಾರ್ವಜನಿಕರ ಸಭೆಯನ್ನೂ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

‘ಮಸೀದಿ, ದೇವಸ್ಥಾನ, ಚರ್ಚ್ ಹಾಗೂ ಹೋಟೆಲ್‌ಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಅಮಾಯಕರನ್ನು ಗುರಿಯಾಗಿಸಿಕೊಂಡು ದುಷ್ಕೃತ್ಯ ಎಸಗಲು ದುಷ್ಟಶಕ್ತಿಗಳು ಹೊಂಚು ಹಾಕುತ್ತಿರು ತ್ತವೆ. ಎಲ್ಲ ಕಡೆಯೂ ಪೊಲೀಸರನ್ನು ನಿಯೋಜಿಸಲು ಆಗುವುದಿಲ್ಲ. ಇಂಥ ಕೃತ್ಯಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರ ಜೊತೆ ಕೈ ಜೋಡಿಸಬೇಕು’ ಎಂದು ಸುನೀಲ್‌ಕುಮಾರ್ ಹೇಳಿದರು.

‘ಜನದಟ್ಟಣೆ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಸಂಬಂಧ ‘ಕರ್ನಾಟಕ ಸಾರ್ವಜನಿಕರ ಸುರಕ್ಷತಾ ಕಾಯ್ದೆ – 2017’ ಜಾರಿಗೆ ತರಲಾಗಿದೆ. ಅದರ ನಿಯಮಗಳನ್ನು ಮಸೀದಿ, ದೇವಸ್ಥಾನ, ಚರ್ಚ್, ಮಾಲ್‌ ಹಾಗೂ ಹೋಟೆಲ್‌
ಗಳ ಮುಖ್ಯಸ್ಥರು, ವ್ಯವಸ್ಥಾಪಕರು ಹಾಗೂ ಭದ್ರತಾ ಉಸ್ತುವಾರಿಗಳು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ಯುವಕರು ಬಲಿಪಶು: ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್, ‘ಶ್ರೀಲಂಕಾ ಘಟನೆಯಲ್ಲಿ ವಿದ್ಯಾವಂತ ಹಾಗೂ ಶ್ರೀಮಂತ ಕುಟುಂಬದ ಮಕ್ಕಳೇ ಆತ್ಮಾಹುತಿ ಬಾಂಬರ್ ಆಗಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಮಾರ್ಗದಲ್ಲಿ ದುಷ್ಟಶಕ್ತಿಗಳು ಯುವಕರನ್ನು ಬಲಿಪಶು ಮಾಡಲು ಪ್ರಯತ್ನಿಸುತ್ತಿರುತ್ತವೆ’ ಎಂದು ಹೇಳಿದರು.

‘ಹೊರ ದೇಶಕ್ಕೆ ಹೋಗುವವರು ಹಾಗೂ ನಗರಕ್ಕೆ ಬರುವ ವಿದೇಶಿಗರ ಬಗ್ಗೆ ಸ್ಥಳೀಯರಿಗೆ ಹೆಚ್ಚು ಮಾಹಿತಿ ಇರುತ್ತದೆ. ಜೊತೆಗೆ, ಹೋಟೆ
ಲ್‌ನಲ್ಲಿ ಉಳಿದುಕೊಳ್ಳುವ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿರುವ ವ್ಯಕ್ತಿಗಳ ನಡೆ ಬಗ್ಗೆ ಸಂಶಯ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ’ ಎಂದು ಅಲೋಕ್‌ಕುಮಾರ್ ಕೋರಿದರು.

ಶಂಕಿತ ಉಗ್ರರ ಪತ್ತೆಗೆ ಕಾರ್ಯಾಚರಣೆ

‘ನಗರದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ನಾಲ್ಕೈದು ಶಂಕಿತ ಉಗ್ರರು, ಇಂದಿಗೂ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಅಂಥವರ ಪತ್ತೆಗೆ ಸಿಸಿಬಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಅಲೋಕ್‌ಕುಮಾರ್ ಹೇಳಿದರು.

‘ನಗರದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೂ ಸಿಸಿಬಿ ಕಣ್ಣಿಟ್ಟಿದೆ. ಸದ್ಯಕ್ಕೆ ಯಾವುದೇ ರೀತಿಯ ಚಟುವಟಿಕೆಗಳು ಕಂಡುಬಂದಿಲ್ಲ. ನಗರವು ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದರು.

ಭಯೋತ್ಪಾದನಾ ನಿಗ್ರಹ ದಳ’ ಸ್ಥಾಪನೆಗೆ ಪ್ರಸ್ತಾವ

‘ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಹಾಗೂ ಅಂಥ ಪ್ರಕರಣಗಳ ತನಿಖೆ ನಡೆಸುವುದಕ್ಕಾಗಿ ಪ್ರತ್ಯೇಕ ‘ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)’ ಸ್ಥಾಪನೆ ಮಾಡುವಂತೆ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸುನೀಲ್‌ಕುಮಾರ್ ತಿಳಿಸಿದರು.

‘ಎಟಿಎಸ್ ಸ್ಥಾಪನೆಯಾದರೆಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಕಲೆಹಾಕಲು ಹಾಗೂ ಕಾರ್ಯಾಚರಣೆ ನಡೆಸಲು ಸಹಾಯಕವಾಗುತ್ತದೆ. ಈ ದಳವು ಸಿಸಿಬಿ ಅಡಿ ಕೆಲಸ ಮಾಡಲಿದೆ’ ಎಂದು ಹೇಳಿದರು.

ಕಮಿಷನರ್ ನೀಡಿರುವ ಸೂಚನೆಗಳು

l ಅಗತ್ಯವಿರುವಷ್ಟು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು

l ಬ್ಯಾಗೇಜ್ ಸ್ಕ್ಯಾನರ್‌ ಹಾಗೂ ಲೋಹ ಶೋಧಕಗಳನ್ನು ಅಳವಡಿಸಬೇಕು

l ಸಂಶಯಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳನ್ನು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು

l ಹೋಟೆಲ್‌ಗಳಲ್ಲಿ ತಂಗುವ ವ್ಯಕ್ತಿಗಳ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಪಡೆಯಬೇಕು

l ತಮ್ಮ ವ್ಯಾಪ್ತಿಯ ಪೊಲೀಸ್ ಅಧಿಕಾ ರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಹಕಾರ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT