ಸಿಎಂ ಕುಮಾರಸ್ವಾಮಿಗೆ ಪೊಲೀಸರ ನೋಟಿಸ್‌?

ಮಂಗಳವಾರ, ಏಪ್ರಿಲ್ 23, 2019
27 °C
ಐ.ಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದ ಪ್ರಕರಣ

ಸಿಎಂ ಕುಮಾರಸ್ವಾಮಿಗೆ ಪೊಲೀಸರ ನೋಟಿಸ್‌?

Published:
Updated:
Prajavani

ಬೆಂಗಳೂರು: ‘ಐ.ಟಿ ದಾಳಿ ವಿರೋಧಿಸಿ ಪ್ರತಿಭಟನೆ ನಡೆಸಿದ ಸಂಬಂಧ 7 ದಿನದೊಳಗೆ ವಿಚಾರಣೆಗೆ ಹಾಜರಾಗಿ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಪಕ್ಷಗಳ ಕೆಲವು ನಾಯಕರಿಗೆ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು ಬುಧವಾರ ನೋಟಿಸ್‌ ಜಾರಿ ಮಾಡಿದ್ದಾರೆ.

ಸಚಿವ ಸಂಪುಟದ ಕೆಲವು ಸದಸ್ಯರು ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ನೋಟಿಸ್‌ ಜಾರಿಯಾಗಿದೆ.  ಮುಖ್ಯಮಂತ್ರಿಗೆ ನೋಟಿಸ್‌ ನೀಡಿರುವ ವಿಚಾರವನ್ನು ಅತ್ಯಂತ ಗೋಪ್ಯವಾಗಿ ಇಡಲಾಗಿದೆ. ಈ ಕುರಿತು ಪೊಲೀಸ್‌ ಉನ್ನತ ಮೂಲಗಳು ಬಾಯಿ ಬಿಡುತ್ತಿಲ್ಲ. ಕುಮಾರ ಸ್ವಾಮಿ ಅವರಿಗೆ  ನೋಟಿಸ್‌ ಬಂದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳೂ ಹೇಳಿವೆ.

ಕ್ವೀನ್ಸ್‌ ರಸ್ತೆಯಲ್ಲಿರುವ ಐ.ಟಿ ಕಚೇರಿ ಮುಂದೆ ನಡೆದ ಪ್ರತಿಭಟನೆ ಸಂಬಂಧ ರಾಜಶೇಖರಮೂರ್ತಿ ಎಂಬುವರು ಅಂದೇ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರ ಹಿಂದೆಯೇ ಐ.ಟಿ ಪ್ರಧಾನ ಮುಖ್ಯ ಕಮಿಷನರ್‌ ಬಿ.ಆರ್‌. ಬಾಲಕೃಷ್ಣನ್‌ ಅವರೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರಿಗೆ
ಸೂಚಿಸಿತ್ತು.

ಆಯೋಗದ ಸೂಚನೆ ಆಧರಿಸಿ ಕಮರ್ಷಿಯಲ್‌ ಸ್ಟ್ರೀಟ್‌ ‍ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ‘ಈ ಪ್ರಕರಣದಲ್ಲಿ ಯಾರಿಗೆ ನೋಟಿಸ್‌ ಕೊಡಬೇಕು; ಯಾರನ್ನು ವಿಚಾರಣೆಗೆ ಕರೆಸಬೇಕು ಎಂಬುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟಿದ್ದು. ಯಾರಿಗೆ ನೋಟಿಸ್‌ ಕೊಡಲಾಗಿದೆ ಎನ್ನುವ ಮಾಹಿತಿ ಇಲ್ಲ’ ಎಂದು ಪೊಲೀಸ್‌ ಕಮಿಷನರ್‌ ಕಚೇರಿ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ, ಕೆಲವು ಸಂಪುಟ ಸಚಿವರು ಹಾಗೂ ಕಾಂಗ್ರೆಸ್‌ ನಾಯಕರಿಗೆ ನೋಟಿಸ್‌ ನೀಡುವ ಕುರಿತು ಪೊಲೀಸ್‌ ಮಹಾನಿರ್ದೇಶಕಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳ ಜೊತೆ ಮಂಗಳವಾರ ರಾತ್ರಿ ಚರ್ಚಿಸಿದ್ದರು. ಬುಧವಾರ ಬೆಳಿಗ್ಗೆ ನೋಟಿಸ್‌ ನೀಡಲಾಗಿದೆ.

ಪ್ರತ್ಯೇಕ ಎಫ್‌ಐಆರ್ ಇಲ್ಲ: ಪ್ರತಿಭಟನೆ ಕುರಿತು ಮಾರ್ಚ್‌ 29ರಂದು ಎಫ್‌ಐಆರ್ ದಾಖಲಾಗಿದೆ. ಹೀಗಾಗಿ, ಐ.ಟಿ ಅಧಿಕಾರಿಗಳ ದೂರಿನ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸದೆ ಹಳೇ ಎಫ್‌ಐಆರ್‌ಗೇ ಅಡಕ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.

ಐ.ಟಿ ಅಧಿಕಾರಿಗಳು ಮಾರ್ಚ್‌ 28ರಂದು ಕೆಲವು ಜೆಡಿಎಸ್‌ ಮುಖಂಡರು, ಅವರ ಆಪ್ತ ಗುತ್ತಿಗೆದಾರರು, ಪಿಡಬ್ಲ್ಯುಡಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ,  ಮುಖ್ಯ ಮಂತ್ರಿ ಹಾಗೂ ಸಿಎಲ್‌ಪಿ ನಾಯಕರ ನೇತೃತ್ವದಲ್ಲಿ ಐ.ಟಿ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆದಿತ್ತು. ಈ ಬೆಳವಣಿಗೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಆನಂತರ, ಬಾಲಕೃಷ್ಣನ್‌ ಐದು ಪುಟಗಳ ಸುದೀರ್ಘ ಪತ್ರವನ್ನು ಚುನಾವಣಾ ಆಯೋಗಕ್ಕೆ ಬರೆದಿದ್ದರು. ಈ ಪತ್ರದಲ್ಲಿ ಮುಖ್ಯಮಂತ್ರಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

ಬರಹ ಇಷ್ಟವಾಯಿತೆ?

 • 39

  Happy
 • 4

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !