ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪೊಲೀಸರೇಕೆ ಹೀಗೆ?

Last Updated 28 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಪೊಲೀಸ್‌ ಎಂದರೆ ತಾನು ಎಲ್ಲರಿಗಿಂತ ಶ್ರೇಷ್ಠ ಎಂಬ ದರ್ಪ, ದಬ್ಬಾಳಿಕೆ, ಪಾಳೆಗಾರಿಕೆ, ದಮನಿಸುವ ಮನೋಭಾವ ಖಾಕಿ ಸಮವಸ್ತ್ರದ ಜತೆಗೆ ಬರಲು ಶುರುವಾಗುತ್ತದೆ. ನಮ್ಮಂತಹ ದೇಶಗಳಲ್ಲಿ ಅದನ್ನು ಪೋಷಿಸುವ ಅಧಿಕಾರ ವರ್ಗ ಇರುವುದರಿಂದ ಪೊಲೀಸರ ಹಿಂಸಾ ಪ್ರವೃತ್ತಿ ಮತ್ತು ವಿಕೃತಿ ಹೆಚ್ಚಾಗುತ್ತಿವೆ. ಖಾಕಿ ಬಟ್ಟೆ ತೊಟ್ಟ ಮನುಷ್ಯನಲ್ಲಿ ಮಾನವೀಯ ಮೌಲ್ಯದ ಗುಣಗಳು ತೀರಾ ಅಪರೂಪ. ಶಿಸ್ತು, ಕಾನೂನು ಪರಿಪಾಲನೆಯಲ್ಲಿ ಮಾನವೀಯ ಮೌಲ್ಯ ಮತ್ತು ಸಂಯಮಗಳುಹಿಂಸೆ ಮತ್ತು ಕ್ರೌರ್ಯಕ್ಕಿಂತ ಮೊದಲು ಬರಬೇಕು ಮತ್ತು ಬಲವಾಗಿರಬೇಕು ಎನ್ನುವುದು ಖ್ಯಾತ ಮನೋರೋಗ ತಜ್ಞ ಡಾ.ಶ್ರೀಧರ್‌ ಅವರ ಅಭಿಪ್ರಾಯ.

ನಗರದಲ್ಲಿ ಇತ್ತೀಚೆಗೆ ವಾಹನ ಸವಾರನೊಬ್ಬನ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆ ಕುರಿತು ವೈಜ್ಞಾನಿಕವಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಡಾ.ಶ್ರೀಧರ್‌ ಮಾಡಿದರು. ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಪೊಲೀಸರ ವರ್ತನೆ, ನಾಗರಿಕ ಪ್ರಜ್ಞೆ, ಸಾಮಾಜಿಕ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲಿದ್ದು ಹೀಗೆ...

ಡಾ.ಶ್ರೀಧರ್‌
ಡಾ.ಶ್ರೀಧರ್‌

ಶಿಕ್ಷೆಯ ಬದಲು ಶಿಕ್ಷಣಕ್ಕೆ ಆದ್ಯತೆ ಶಿಕ್ಷೆಗೆ ಕೊಡುವ ಆದ್ಯತೆಯನ್ನು ನಾವು ಶಿಕ್ಷಣಕ್ಕೆ ಕೊಡುತ್ತಿಲ್ಲ. ಆಕ್ರೋಶಕ್ಕೆ ನೀಡುವ ಆದ್ಯತೆಯನ್ನು ಸಂಯಮಕ್ಕೆ ಕೊಡುತ್ತಿಲ್ಲ. ಪೊಲೀಸರ ದೌರ್ಜನ್ಯ ಮತ್ತು ದರ್ಪದ ಮನೋಭಾವದ ಹಿಂದೆ ಸಾಮಾಜಿಕ ಮತ್ತು ಆಡಳಿತ ವ್ಯವಸ್ಥೆ ಪ್ರಭಾವ ಕೂಡ ಪ್ರಮುಖವಾಗಿ ಎದ್ದು ಕಾಣುತ್ತದೆ. ಪೊಲಿಸರನ್ನು ದೂಷಿಸುವುದು ಮತ್ತು ಪೊಲೀಸರ ಮನೋಸ್ಥೈರ್ಯ ಕುಂದಿಸುವ ಕೆಲಸ ಮಾಡುವುದು ಬೇಡ. ಜನರಲ್ಲಿ ಕೂಡ ಪೌರಪ್ರಜ್ಞೆ ಮತ್ತು ಸಾಮಾಜಿಕ ಹಿತದ ದೃಷ್ಟಿ ಇಲ್ಲ.

ಪೊಲೀಸ್‌ ಇಲಾಖೆಯ ಶ್ರೇಣಿ ವ್ಯವಸ್ಥೆ, ಹಿರಿಯ ಅಧಿಕಾರಿಗಳ ಕಿರುಕುಳ, ಕೆಲಸದ ಒತ್ತಡ, ರಜೆ ಸಿಗದಿರುವುದು, ಕಡಿಮೆ ಸಂಬಳ, ಶೈಕ್ಷಣಿಕ ಮತ್ತು ಸಾಮಾಜಿಕ ವ್ಯವಸ್ಥೆಗಳು, ಸಂಕುಚಿತ ಮನಸ್ಸು ಮುಂತಾದ ಅಂಶಗಳು ಪೊಲೀಸರ ಇಂತಹ ವರ್ತನೆಗೆ ಕಾರಣ.

ಸುಶಿಕ್ಷಿತ ಸಾರ್ವಜನಿಕರು,ವಾಹನ ಸವಾರರು ಕಾನೂನು ಪಾಲಿಸುವ ಪರಿಪಾಠ ಇಲ್ಲ. ಕಾನೂನು ಉಲ್ಲಂಘಿಸಿ ಸಿಕ್ಕಿ ಬಿದ್ದಾಗ ಒಪ್ಪಿಕೊಂಡು, ದಂಡ ತೆರುವ ಬದಲು ಪೊಲೀಸರ ಜತೆ ಘರ್ಷಣೆಗೆ ಇಳಿಯುತ್ತಾರೆ. ಪ್ರಭಾವ ಬೀರಲು ಯತ್ನಿಸುತ್ತಾರೆ. ವಾಹನ ಬಳಸುವವರಲ್ಲಿ ಕೊಂಚ ಅಹಂ ಜಾಸ್ತಿ. ಅವರ ವರ್ತನೆಯಿಂದ ಪೊಲೀಸರು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ.

ಪೊಲೀಸರು ಮತ್ತು ಸಾರ್ವಜನಿಕರು ತಮ್ಮ ಇತಿಮಿತಿಯೊಳಗೆ ವ್ಯವಹರಿಸಬೇಕು. ಮಾನಸಿಕ ಸ್ಥಿಮಿತ ಕಳೆದುಕೊಳ್ಳದಂತೆಒತ್ತಡ ನಿರ್ವಹಣೆ ವೃತ್ತಿಪರ ಕೌಶಲಗಳನ್ನು ಪೊಲೀಸರಿಗೆ ಕಲಿಸಿ ಕೊಡಬೇಕು. ನಮ್ಮ ಶಿಕ್ಷಣದಲ್ಲಿ ನೈತಿಕತೆ, ಶಿಸ್ತು, ಸಂಯಮ ಮತ್ತು ನಾಗರಿಕ ಪ್ರಜ್ಞೆಗೆ ಹೆಚ್ಚು ಒತ್ತು ನೀಡಬೇಕಾಗಿದೆ.

ಮಾನವ ಹಕ್ಕುಗಳನ್ನು ಗೌರವಿಸಲಿ

ಪೊಲೀಸ್‌ ಇಲಾಖೆ ಹೆಚ್ಚು ಜನಸ್ನೇಹಿಯಾಗಿರಬೇಕು. ಸಾರ್ವಜನಿಕರ ಜತೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತರಬೇತಿ ಹಂತದಲ್ಲಿಯೇ ಪೊಲೀಸರಿಗೆ ತಿಳಿ ಹೇಳಬೇಕು. ಅದರ ಜತೆಗೆ, ಮಾನವ ಹಕ್ಕುಗಳನ್ನು ಗೌರವಿಸುವುದು ಎಷ್ಟು ಮುಖ್ಯ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಡಬೇಕು. ಪೊಲೀಸರನ್ನು ಸಾರ್ವಜನಿಕರು ತಮ್ಮ ಆಪತ್ಬಾಂಧವರು, ಸ್ನೇಹಿತರು ಎಂದು ಭಾವಿಸುವ ರೀತಿ ಪೊಲೀಸರ ವರ್ತನೆ ಇರಬೇಕು. ನಮ್ಮ ದೇಶದಲ್ಲಿ ಪೊಲೀಸರ ಹೆಸರು ಪ್ರಸ್ತಾಪಿಸಿದರೆ ಭಯ ಬೀಳುವ ಪರಿಸ್ಥಿತಿ ಇದೆ. ಯುರೋಪ್‌ ಮತ್ತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪೊಲೀಸ್ ಇಲಾಖೆಗಳು ಜನಸ್ನೇಹಿಯಾಗಿವೆ. ಮಾನವ ಹಕ್ಕುಗಳಿಗೆ ಗೌರವವಿದೆ. ಖಾಕಿ ತೊಟ್ಟ ತಕ್ಷಣ ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸುವ, ಥಳಿಸುವ ಅವರ ಮೇಲೆ ಹಲ್ಲೆ ಮಾಡುವ ಹಕ್ಕು ಪೊಲೀಸರಿಗೆ ಇಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕು. ತಪ್ಪು, ಸರಿಗಳನ್ನು ನಿರ್ಧರಿಸಲು ನ್ಯಾಯಾಲಯಗಳಿವೆ. ಪೊಲೀಸರಿಗೆ ಶಿಕ್ಷೆ ಕೊಡುವ ಹಕ್ಕು ಇಲ್ಲ. ವಾಹನ ಸವಾರರು ತಪ್ಪೆಸಗಿದರೆ ಟ್ರಾಫಿಕ್‌ ಪೊಲೀಸರು ಅಂಥವರ ವಿರುದ್ಧ ಕಾನೂನು ಪ್ರಕಾರ ದಂಡ ವಿಧಿಸಬೇಕೇ ಹೊರತು ಅವರನ್ನು ಬೆದರಿಸುವುದು ಅಥವಾ ಹೊಡೆಯುವ ಕೆಲಸಕ್ಕೆ ಹೈಹಾಕಬಾರದು.

–ರೂಪಕ್‌ ಕುಮಾರ್‌ ದತ್ತಾ, ನಿವೃತ್ತ ಐಜಿ ಮತ್ತು ದಿಜಿಪಿ ಮತ್ತು ಹಾಲಿ ಮಾನವ ಹಕ್ಕುಗಳ ಆಯೋಗದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT