ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ರಾತ್ರಿ ಸುರಿದ ಮಳೆ

Last Updated 16 ಜುಲೈ 2019, 19:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಜೋರಾದ ಮಳೆ ಸುರಿದಿದ್ದು, ಹಲವೆಡೆ ರಸ್ತೆ ಮೇಲೆಯೇ ನೀರು ಹರಿಯಿತು.

ಬೆಳಿಗ್ಗೆಯಿಂದ ನಗರದಲ್ಲಿ ಬಿಸಿಲು ಇತ್ತು. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆಯಲ್ಲಿ ಜಿಟಿ ಜಿಟಿಯಾಗಿ ಮಳೆ ಸುರಿಯಿತು. ರಾತ್ರಿ 9ರ ನಂತರ ಹಲವೆಡೆ ಜೋರಾದ ಮಳೆಯಾಯಿತು.

ಮೈಸೂರು ರಸ್ತೆಯ ನಾಯಂಡಹಳ್ಳಿ, ದೀಪಾಂಜಲಿನಗರ, ಗಿರಿನಗರ, ಹನುಮಂತನಗರ, ಬಸವನಗುಡಿ, ಜಯನಗರ, ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ವಿದ್ಯಾರಣ್ಯಪುರ, ಹೆಬ್ಬಾಳ ಹಾಗೂ ಸುತ್ತಮುತ್ತ ಮಳೆ ಆಯಿತು. ಗಾಳಿಯೂ ಜೋರಾಗಿತ್ತು.

ನಾಯಂಡಹಳ್ಳಿ ಸಿಗ್ನಲ್‌ ಬಳಿ ರಸ್ತೆಯಲ್ಲೇ ಎರಡು ಅಡಿಯಷ್ಟು ನೀರು ಹರಿಯಿತು. ಅದರಿಂದಾಗಿ ಸಿಗ್ನಲ್ ಹಾಗೂ ಸುತ್ತಮುತ್ತ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ದಟ್ಟಣೆಯೂ ಕಂಡುಬಂತು. ಮಡಿವಾಳ, ಪೀಣ್ಯದಲ್ಲೂ ವಾಹನಗಳ ಓಡಾಟ ನಿಧಾನಗತಿಯಲ್ಲಿತ್ತು.

ಮಳೆಯಿಂದಾಗಿ ರಸ್ತೆಯಲ್ಲಿ ಸಿಲುಕಿದ್ದ ಸಾರ್ವಜನಿಕರು, ಅಂಗಡಿಗಳು ಹಾಗೂ ಸೇತುವೆಗಳಡಿಯಲ್ಲಿ ಆಶ್ರಯ ಪಡೆದರು. ಕೆಲವು ರಸ್ತೆಗಳಲ್ಲಿ ಹರಿಯುತ್ತಿದ್ದ ನೀರಿನಲ್ಲೇ ಚಾಲಕರು ವಾಹನಗಳನ್ನು ಚಲಾಯಿಸಿಕೊಂಡು ಹೋದರು.

ಪ್ರಮುಖ ರಸ್ತೆಗಳ ಅಕ್ಕ–ಪಕ್ಕದಲ್ಲೇ ಬೈಕ್‌ಗಳನ್ನು ನಿಲ್ಲಿಸಿ ಸವಾರರು ಅಂಗಡಿಗಳ ಒಳಗೆ ನಿಂತುಕೊಂಡಿದ್ದು ಕಂಡುಬಂತು.

‘ನಗರದಲ್ಲಿ ಉತ್ತಮ ಮಳೆ ಆಗಿದೆ. ಹಾನಿ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT