ಕಾಲಿಗೆ ಗುಂಡಿಕ್ಕಿ ರೌಡಿಯ ಬಂಧನ

ಶನಿವಾರ, ಜೂಲೈ 20, 2019
22 °C
ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಭುವಿತ್‌ ರಾಜ್‌

ಕಾಲಿಗೆ ಗುಂಡಿಕ್ಕಿ ರೌಡಿಯ ಬಂಧನ

Published:
Updated:
Prajavani

ಮಂಗಳೂರು: ನಗರದ ಕುಲಶೇಖರದ ಸಿಲ್ವರ್‌ ಗೇಟ್‌ ಬಳಿ ಭಾನುವಾರ ನಸುಕಿನ ಜಾವ ಮಾವಿನ ಹಣ್ಣಿನ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ನಗದು ದೋಚಿದ್ದ ಪ್ರಕರಣದಲ್ಲಿ ಮಂಗಳವಾರ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಅಡ್ಯಾರ್‌ ದಡ್ಡೊಳಿಗೆ ಬಳಿ ಹಲ್ಲೆಗೆ ಯತ್ನಿಸಿದ ರೌಡಿಯೊಬ್ಬನ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.

ಎಂಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸರೀಪಳ್ಳ ನಿವಾಸಿ ಭುವಿತ್‌ ರಾಜ್‌ (35) ಗುಂಡೇಟು ತಿಂದಿರುವ ರೌಡಿ. ಗುಂಡೇಟು ತಿಂದು ಕುಸಿದುಬಿದ್ದ ಆತನನ್ನು ಬಂಧಿಸಲಾಗಿದೆ. ರೌಡಿ ಚೂರಿಯಿಂದ ಇರಿದು ಪೊಲೀಸ್‌ ಕಾನ್‌ಸ್ಟೆಬಲ್‌ ವಿನೋದ್‌ ಎಂಬುವವರನ್ನು ಗಾಯಗೊಳಿಸಿದ್ದಾನೆ.

ಭುವಿತ್‌ ರಾಜ್‌ ಜೊತೆಗೆ ಇದ್ದು, ಪರಾರಿಯಾಗಲು ಯತ್ನಿಸಿದ ಸಂದೇಶ್‌ (25), ಸನತ್‌ (22), ಆರೋಪಿಗಳಿಗೆ ಕೃತ್ಯ ಎಸಗಲು ಬೈಕ್‌ ನೀಡಿ ಸಹಕರಿಸಿದ್ದ ಅಶ್ವತ್ಥ್‌ (25) ಎಂಬುವವರನ್ನೂ ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂದೇಶ್‌ ಎಂಬಾತ 2018ರಲ್ಲಿ ಕೊಟ್ಟಾರ ಚೌಕಿಯಲ್ಲಿ ನಡೆದಿದ್ದ ಹೋಟೆಲ್‌ ಮಾಲೀಕ ಬಶೀರ್‌ ಕೊಲೆ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ.

ಅಕ್ರಮ ಗೋ ಸಾಗಣೆ ಶಂಕೆಯ ನೆಪದಲ್ಲಿ ಭಾನುವಾರ ನಸುಕಿನ ಜಾವ ಸಿಲ್ವರ್‌ ಗೇಟ್‌ ಬಳಿ ಮಾವಿನ ಹಣ್ಣು ಸಾಗಣೆ ವಾಹನ ಅಡ್ಡಗಟ್ಟಿದ್ದ ಆರೋಪಿಗಳು, ಮೂವರ ಮೇಲೆ ಹಲ್ಲೆ ನಡೆಸಿದ್ದರು. ₹ 70,000 ನಗದು ದೋಚಿಕೊಂಡು ಹೋಗಿರುವ ಆರೋಪದ ಮೇಲೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಭುವಿತ್ ರಾಜ್‌ ಮೆಲ್ಕಾರ್‍ ಬಳಿ ಇರುವ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು. ಬಂಧನಕ್ಕಾಗಿ ಕಂಕನಾಡಿ ನಗರ ಠಾಣೆ ಪೊಲೀಸರು ಮಂಗಳವಾರ ನಸುಕಿನಲ್ಲಿ ಮೆಲ್ಕಾರ್‌ಗೆ ಹೊರಟಿದ್ದರು. ಆದರೆ ಆರೋಪಿ ಕಾರಿನಲ್ಲಿ ಮಂಗಳೂರಿನತ್ತ ಬರುತ್ತಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರು ಆತನನ್ನು ಬೆನ್ನಟ್ಟಿದ್ದರು.

ಪೊಲೀಸರನ್ನು ಕಂಡ ಆರೋಪಿಗಳು ತಪ್ಪಿಸಿಕೊಳ್ಳಲು ಮುಂದಾದರು. ಕಾರನ್ನು ಅಡ್ಯಾರ್ ದಡ್ಡೊಳಿಗೆಯತ್ತ ಕೊಂಡೊಯ್ದು ಪರಾರಿಗೆ ಯತ್ನಿಸಿದ್ದರು. ಕಾರು ನಿಲ್ಲಿಸಿ ಶರಣಾಗುವಂತೆ ಪೊಲೀಸರು ಸೂಚನೆ ನೀಡಿದರು. ಆದರೆ, ಭುವಿತ್ ತಲವಾರು, ಚೂರಿಯನ್ನು ವಿನೋದ್‌ ಮೇಲೆ ಎಸೆದು ಗಾಯಗೊಳಿಸಿದ. ಇನ್‌ಸ್ಪೆಕ್ಟರ್‌ ಅಶೋಕ್‌ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಹಲ್ಲೆ ಯತ್ನ ಮುಂದುವರಿಸಿದ. ಬಳಿಕ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡಿಕ್ಕಿದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಗರ ಪೊಲೀಸ್‌ ಕಮಿಷನರ್‌ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಮಂಗಳೂರು ದಕ್ಷಿಣ ರೌಡಿ ನಿಗ್ರಹದಳ ಎಸಿಪಿ ಕೆ.ರಾಮರಾವ್ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು. ಇನ್‍ಸ್ಪೆಕ್ಟರ್ ಅಶೋಕ್, ಕಾನ್‌ಸ್ಟೆಬಲ್‌ಗಳಾದ ಮದನ್, ರವೀಂದ್ರನಾಥ್ ರೈ, ವಿನೋದ್‌ ಮತ್ತು ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !