ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಲಕ್ಷ್ಮಣನ ಬರ್ಬರ ಹತ್ಯೆ

ಮಹಾಲಕ್ಷ್ಮಿಲೇಔಟ್ ಬಳಿ ಮಧ್ಯಾಹ್ನವೇ ನಡೆದ ಘಟನೆ * ಕಾರಿನಲ್ಲಿ ಬಂದಿದ್ದ ಆರು ಹಂತಕರು
Last Updated 7 ಮಾರ್ಚ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಲಕ್ಷ್ಮಿಲೇಔಟ್‌ ಸಮೀಪದ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಹಿಂಭಾಗದ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ದುಷ್ಕರ್ಮಿಗಳು ಕುಖ್ಯಾತ ರೌಡಿ ಲಕ್ಷ್ಮಣನನ್ನು (42) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮರಿಯಪ್ಪನಪಾಳ್ಯದ ಜ್ಞಾನಜ್ಯೋತಿನಗರದಲ್ಲಿ ನೆಲೆಸಿದ್ದ ಲಕ್ಷ್ಮಣ, ಬೆಳಿಗ್ಗೆ 11 ಗಂಟೆ ಸುಮಾರಿಗೆ ತನ್ನ ಇನ್ನೋವಾ ಕಾರಿನಲ್ಲಿ ಮನೆಯಿಂದ ಹೊರಟಿದ್ದ. ಆರ್‌ಎಂಸಿ ಯಾರ್ಡ್‌ಗೆ ಬಂದು ಗೆಳೆಯರನ್ನು ಭೇಟಿಯಾಗಿದ್ದ ಆತ, ಅಲ್ಲಿಂದ 12.45ರ ಸುಮಾರಿಗೆ ಮನೆಗೆ ವಾಪಸ್ ಹೋಗುತ್ತಿದ್ದ.

ಆಗ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಆರು ಮಂದಿ ಹಂತಕರು, ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮೇಲೆರಗಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ಭಯಗೊಂಡ ಲಕ್ಷ್ಮಣ, ಕೆಳಗಿಳಿದು ಓಡಲಾರಂಭಿಸಿದ್ದಾನೆ. ತಪ್ಪಿಸಿಕೊಳ್ಳಲು ಅವಕಾಶ ನೀಡದ ಎದುರಾಳಿಗಳು, ಸುತ್ತುವರಿದು ಮಚ್ಚು–ಲಾಂಗುಗಳಿಂದ ಮನಸೋಇಚ್ಛೆ ಹೊಡೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆಯ ದೃಶ್ಯ, ಸಮೀಪದ ಅಪಾರ್ಟ್‌ಮೆಂಟ್ ಸಮುಚ್ಚಯದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಅದರ ಡಿವಿಆರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಾಮಾಕ್ಷಿಪಾಳ್ಯದ ರೌಡಿ ಮಂಜುನಾಥ ಅಲಿಯಾಸ್ ಮಚ್ಚನ ಕೊಲೆಗೆ ಪ್ರತೀಕಾರವಾಗಿ ಆತನ ಹುಡುಗರೇ ಕೃತ್ಯ ಎಸಗಿರಬಹುದು ಅಥವಾ ರೌಡಿ ಸೈಕಲ್ ರವಿಯ ಕೈವಾಡವೂ ಇರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಮಧ್ಯಾಹ್ನದ ಹೊತ್ತಿನಲ್ಲೇ ನಡೆದ ಭೀಕರ ಹತ್ಯೆಯಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕದ ವಾತಾವರಣ ನೆಲೆಸಿತ್ತು. ಸ್ಥಳಕ್ಕೆ ದೌಡಾಯಿಸಿದ ಉತ್ತರ ವಿಭಾಗದ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಕ್ಷ್ಮಣನ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಿದರು.

ಪಾತಕ ಲೋಕದ ‘ರಾಮ–ಲಕ್ಷ್ಮಣ’ರು!

ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದವನಾದ ಲಕ್ಷ್ಮಣ, 1995ರಲ್ಲಿ ನಗರಕ್ಕೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಕ್ರಮೇಣ ತನ್ನ ಅಣ್ಣ ರಾಮನ ಜತೆ ಸೇರಿ ಪಾತಕ ಲೋಕವನ್ನು ಪ್ರವೇಶಿಸಿದ್ದ. 2000ನೇ ಇಸವಿ ನಂತರ ರಾಜಧಾನಿಯ ಭೂಗತ ಜಗತ್ತಿನಲ್ಲಿ ‘ರಾಮ–ಲಕ್ಷ್ಮಣ’ ಸೋದರರು ತಮ್ಮ ದುಷ್ಕೃತ್ಯಗಳ ಮೂಲಕ ಕುಖ್ಯಾತಿ ಪಡೆದಿದ್ದರು. ರೌಡಿ ಲೋಕೇಶ್ ಅಲಿಯಾಸ್ ಮುಲಾಮನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಈ ಸೋದರರು, ನಗರದ ಪಶ್ಚಿಮ ಭಾಗದಲ್ಲಿ ವಿಪರೀತ ಹಾವಳಿ ಸೃಷ್ಟಿಸಿದ್ದರು ಎಂದು ಪೊಲೀಸರು ಹೇಳಿದರು.

ಜ್ಞಾನಭಾರತಿ, ಕಾಮಾಕ್ಷಿಪಾಳ್ಯ ಹಾಗೂ ಕುಂಬಳಗೋಡು ಠಾಣೆಗಳ ರೌಡಿಗಳ ಪಟ್ಟಿಯಲ್ಲಿ ರಾಮ–ಲಕ್ಷ್ಮಣನ ಹೆಸರುಗಳಿವೆ. ಕೊಲೆ, ಸುಲಿಗೆ, ಕೊಲೆಯತ್ನ, ಜೀವ ಬೆದರಿಕೆ ಸೇರಿದಂತೆ ಲಕ್ಷ್ಮಣನ ವಿರುದ್ಧ ನಗರದ 14 ಠಾಣೆಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದವು. ರಾಜಧಾನಿಯ ಒಳಗೆ ಹಾಗೂ ಹೊರ ವಲಯಗಳಲ್ಲಿ ರಿಯಲ್ ಎಸ್ಟೇಟ್ ದಂಧೆಯನ್ನೂ ನಡೆಸುತ್ತಿದ್ದ ಸೋದರರು, ಜನರಿಗೆ ಬೆದರಿಕೆ ಹಾಕಿ ಕಡಿಮೆ ಬೆಲೆಗೆ ಜಮೀನುಗಳನ್ನು ಖರೀದಿಸಿ ಮಾರಾಟ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದರು.

ರಾಜಕೀಯದತ್ತ ಹರಿದ ಚಿತ್ತ: ಭೂ ಮಾಫಿಯಾದ ಮೂಲಕವೇ ಸುಮಾರು ₹ 600 ಕೋಟಿ ಆಸ್ತಿ ಸಂಪಾದಿಸಿದ್ದ ಸೋದರರ ಚಿತ್ತ, ಕ್ರಮೇಣ ರಾಜಕೀಯದತ್ತ ಹರಿದಿತ್ತು. ಅಂತೆಯೇ ರಾಮನು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿ ಪರಾಜಿತನಾಗಿದ್ದ.

ಇನ್ನು ತನ್ನ ದಂಧೆಗಳ ಮೂಲಕ ರಾಜಧಾನಿಯಲ್ಲಿ ಹೆಸರು ಕೆಡಿಸಿಕೊಂಡಿದ್ದ ಲಕ್ಷ್ಮಣ, ರಾಜಕೀಯ ಮಾಡುವುದಕ್ಕೆ ಮದ್ದೂರಿಗೆ ವಲಸೆ ಹೋಗಿದ್ದ. ಅಲ್ಲೇ ತೋಟ ಹಾಗೂ ಮನೆಯನ್ನೂ ಖರೀದಿಸಿದ್ದ ಆತ, ಧಾನ–ಧರ್ಮಗಳ ಮೂಲಕ ಸಜ್ಜನಿಕೆಯ ಮುಖವಾಡ ಧರಿಸಿಕೊಂಡಿದ್ದ.

ಬಳಿಕ ಮದ್ದೂರು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷನಾದ ಲಕ್ಷ್ಮಣ, 2018ರ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ತಾಲೀಮು ನಡೆಸಿದ್ದ. ಆದರೆ, ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ಪ್ರವೇಶಿಸಿದ್ದರಿಂದ ಲಕ್ಷ್ಮಣ ನೇಪಥ್ಯಕ್ಕೆ ಸರಿದಿದ್ದ. ಕೊನೆಗೆ ಬಂಡಾಯವೆದ್ದು ಜೆಡಿಎಸ್ ಸೇರಿದ ಆತ, ಚುನಾವಣೆ ಸಂದರ್ಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಪರ ಕೆಲಸ ಮಾಡಿದ್ದ. ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

15 ದಿನಗಳ ಹಿಂದಷ್ಟೇ ಬಿಡುಗಡೆ: ಭೂಕಬಳಿಕೆ ಆರೋಪದಡಿ ಮಿರ್ಲೆ ವರದರಾಜ್ ಎಂಬಾತನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಮಿರ್ಲೆಯ ಬೆನ್ನಿಗೆ ನಿಂತಿದ್ದನೆಂಬ ಕಾರಣಕ್ಕೆ ಕೋಕಾ ಕಾಯ್ದೆಯ ಅಸ್ತ್ರ ಪ್ರಯೋಗಿಸಿ ಇದೇ ಜನವರಿಯಲ್ಲಿ ಲಕ್ಷ್ಮಣನನ್ನೂ ಜೈಲಿಗೆ ಕಳುಹಿಸಿದ್ದರು. ಆದರೆ, ತನ್ನ ವಿರುದ್ಧ ಕೋಕಾ ಹಾಕಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಆತ, ಫೆ.22ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ದಶಕದ ದ್ವೇಷ, ಭೂಗಳ್ಳರೂ ಶತ್ರುಗಳು

ಲಕ್ಷ್ಮಣನ ಗ್ಯಾಂಗ್ 2006ರಲ್ಲಿ ಯಲಹಂಕ ಬಳಿ ರೌಡಿ ಮಚ್ಚನನ್ನು ಕೊಲೆ ಮಾಡಿತ್ತು. ಆಗಿನಿಂದಲೂ ಮಚ್ಚನ ಹುಡುಗರು ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದರು. ಈ ಹಿಂದೆಯೂ ಅದೇ ಹುಡುಗರು ಲಕ್ಷ್ಮಣನ ಮೇಲೆ ಎರಡು ಬಾರಿ ಮಚ್ಚು ಬೀಸಿದ್ದರು. ಆದರೆ, ಕೂದಲೆಳೆಯ ಅಂತರದಿಂದ ಆತ ಪಾರಾಗಿದ್ದ.

ಇನ್ನು ಭೂಮಾಫಿಯಾದಲ್ಲೂ ಲಕ್ಷ್ಮಣನಿಗೆ ಸಾಕಷ್ಟು ಎದುರಾಳಿಗಳು ಹುಟ್ಟಿಕೊಂಡಿದ್ದರು. ತನ್ನ ಗುರು ಮುಲಾಮಾ ಇತ್ತೀಚೆಗೆ ಜೈಲು ಸೇರಿದ್ದರಿಂದ ಲಕ್ಷ್ಮಣ ಒಂಟಿಯಾಗಿದ್ದ. ಇದೇ ಸಮಯಕ್ಕೆ ಕಾದು ಎದುರಾಳಿಗಳು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT