ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ–ಮನಗಳಲ್ಲಿ ತುಂಬಿದೆ ಸಂಸ್ಕೃತ: ಶ್ರೀನಾಥ್‌

ರಾಜರಾಜೇಶ್ವರಿನಗರದಲ್ಲಿ ರಾಜ್ಯಮಟ್ಟದ ಸಂಸ್ಕೃತ ಸಂಜೀವಿನಿ ಸಮ್ಮೇಳನ
Last Updated 4 ಜನವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಸ್ಕೃತ ನಮ್ಮೆಲ್ಲರ ಮನೆ,ಮನಗಳಲ್ಲಿ ತುಂಬಿದೆ. ನಿತ್ಯ ಪೂಜೆ ಮಾಡುವಾಗ ಅಥವಾ ಶುಭ ಕಾರ್ಯಗಳಲ್ಲಿ ಸಂಸ್ಕೃತದ ಸ್ತೋತ್ರ ಮಂತ್ರಗಳನ್ನು ಪಠಿಸುತ್ತೇವೆ. ಆ ಪರಂಪರೆಯನ್ನು ಬೆಳೆಸುವುದು ನಮ್ಮೆಲ್ಲರ ಕಾರ್ಯವಾಗಬೇಕು’ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸಲಹೆ ನೀಡಿದರು.

ರಾಜರಾಜೇಶ್ವರಿ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಸಂಸ್ಕೃತ ಭಾರತಿ ಆಯೋಜಿಸಿರುವ ರಾಜ್ಯಮಟ್ಟದ ಸಂಸ್ಕೃತ ಸಂಜೀವಿನಿ ಸಮ್ಮೇಳನದ ಪ್ರದರ್ಶಿನಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸ್ಕೃತ, ಭಾರತೀಯ ಭಾಷೆಗಳಿಗೆ ತಾಯಿ ರೂಪವಾಗಿದೆ. ಭಾರತ ಮಾತ್ರವಲ್ಲ, ಸಿಂಹಳ ಭಾಷೆ ಕೂಡ ಸಂಸ್ಕೃತ ಭಾಷೆಗೆ ಸಮೀಪವಿದೆ. ಆಹಾರ,ವ್ಯವಹಾರ ಇತ್ಯಾದಿಗಳಿಂದ ಆ ಭಾಷೆಯ ಶಬ್ದಗಳನ್ನು ಶ್ರೀಲಂಕಾದಲ್ಲಿ ಕ್ರಿಕೆಟ್‌ ಆಡುವಾಗ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ಸಂಸ್ಕೃತವನ್ನು ಎಲ್ಲರೂ ಕಲಿಯಬೇಕು ಎಂಬುದು ನನ್ನ ಅಪೇಕ್ಷೆ’ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ‌ಪ್ರೊ.ಕೆ.ಆರ್.ವೇಣುಗೋಪಾಲ್, ‘‌ಸಂಸ್ಕೃತ ಮತ್ತು ವಿಜ್ಞಾನಕ್ಕೆ ಹತ್ತಿರದ ಸಂಬಂಧವಿದೆ. ಸಂಸ್ಕೃತ ಕೇವಲ ಆಧ್ಯಾತ್ಮ ಕ್ಷೇತ್ರಕ್ಕೆ ಸೀಮಿತವಲ್ಲ, ಗಣಿತ,ವಿಜ್ಞಾನಅನೇಕ ವಿಷಯಗಳ ಮಾಹಿತಿಯನ್ನೂ ಹೊಂದಿದೆ’ ಎಂದು ನುಡಿದರು.

ಸಮ್ಮೇಳನದಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳ ಪರಿಚಯ, ಪ್ರಾಚೀನ ಭಾರತೀಯರ ಸಾಧನೆಯನ್ನು ಪ್ರತಿಬಿಂಬಿಸುವ ಜ್ಞಾನ-ವಿಜ್ಞಾನ, ತಂತ್ರಜ್ಞಾನ, ಗಣಿತ, ಅರ್ಥಶಾಸ್ತ್ರಗಳ ವಿಸ್ತೃತ ವಿವರಣೆ ನೀಡುವ ಫಲಕಗಳು, ಪ್ರತಿಕೃತಿಗಳು ನೋಡುಗರ ಕಣ್ಮನ ಸೆಳೆದವು. ಪ್ರದರ್ಶನದಲ್ಲಿದ್ದ ವಿವಿಧ ರೀತಿಯ ಖಾದ್ಯಗಳನ್ನು ಸಾರ್ವಜನಿಕರು ಸವಿದರು.

ಸಂಸ್ಕೃತದ ಸಣ್ಣ ಕಥೆಗಳು, ಬಾಲ ಸಾಹಿತ್ಯ, ವ್ಯಾಕರಣ,ಕಾದಂಬರಿ, ವಿಜ್ಞಾನ ಇತ್ಯಾದಿ ಸಂಸ್ಕೃತ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು. ಸಂಸ್ಕೃತ ಸಂಭಾಷಣೆಯ ಪ್ರಾತ್ಯಕ್ಷಿಕೆ ಕೂಡ ಇತ್ತು. ‌ಸಂಸ್ಕೃತ ಕಲಿಯುತ್ತಿರುವ ಸಮಾಜದ ಗಣ್ಯರು, ಮಹಿಳೆಯರು, ಸಂಸ್ಕೃತ ಪರಿವಾರ ಸದಸ್ಯರು, ಸಂಸ್ಕೃತ ಹಿತೈಷಿಗಳು, ಸಂಸ್ಕೃತ ಶಿಕ್ಷಕರು, ವಿದ್ವಾಂಸರು ಭಾಗವಹಿಸಿದ್ದರು.

ಇಂದು, ನಾಳೆ ಸಮ್ಮೇಳನ

ಶನಿವಾರದ (ಜ.5) ಸಮ್ಮೇಳನವನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಸಿಬಿಐ ಮಾಜಿ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್ ಉದ್ಘಾಟಿಸದ್ದಾರೆ. ಭಾನುವಾರದ (ಜ.6) ಐಐಎಂನ ಪ್ರಾಧ್ಯಾಪಕ ಬಿ.ಮಹದೇವನ್ ಅವರ ಸಂವಾದ ಕಾರ್ಯಕ್ರಮ ಇರುತ್ತದೆ. ಸಂಸ್ಕೃತ ಕ್ಷೇತ್ರದ ಅವಲೋಕನ, ಸಂಸ್ಕೃತ ಕಾರ್ಯಕರ್ತರ ಬೆಳವಣಿಗೆ, ಸಂಸ್ಕೃತ ಭಾಷೆಯ ವಿವಿಧ ಯೋಜನೆಗಳು ಹಾಗೂ ಸಂಸ್ಕೃತ ಪ್ರಚಾರ ಪ್ರಸಾರದ ಬಗ್ಗೆ ಚಿಂತನ-ಮಂಥನ 2 ದಿನದ ಸಮ್ಮೇಳನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT