ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೆರೆಗಳ ಬಫರ್ ವಲಯದ ಮಿತಿ: ಸರ್ಕಾರದ ಮನವಿ ಪುರಸ್ಕರಿಸಿದ ಸುಪ್ರೀಂ

Last Updated 5 ಮಾರ್ಚ್ 2019, 19:19 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಕೆರೆಗಳು ಮತ್ತು ರಾಜ ಕಾಲುವೆಗಳ ಬಫರ್ ವಲಯದ ಮಿತಿ ಹೆಚ್ಚಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016ರ ಮೇ 4ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

ಎನ್‌ಜಿಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ರಿಯಲ್‌ ಎಸ್ಟೇಟ್‌ ಕಂಪನಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿ ಕಳೆದ ಜನವರಿ 24ರಂದು ಆದೇಶ ಕಾದಿರಿಸಿದ್ದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್‌.ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌. ಶಾ ಅವರಿದ್ದ ತ್ರಿಸದಸ್ಯ ಪೀಠವು, ಬುಧವಾರ 56 ಪುಟಗಳ ಸುದೀರ್ಘ ತೀರ್ಪನ್ನು ಪ್ರಕಟಿಸಿತು.

ಎನ್‌ಜಿಟಿ ಆದೇಶಕ್ಕೆ ಮೊದಲು ಜಾರಿಯಲ್ಲಿದ್ದ ಬಫರ್ ವಲಯದ ನಿಯಮವನ್ನು ಪಾಲಿಸುವುದಾಗಿ ರಾಜ್ಯ ಸರ್ಕಾರ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿರುವ ಪೀಠ, ಕೆರೆಗಳ ಒತ್ತುವರಿ ಆರೋಪ ಎದುರಿಸುತ್ತಿರುವ ರಿಯಲ್‌ ಎಸ್ಟೇಟ್‌ ಕಂಪನಿಗಳಾದ ಮಂತ್ರಿ ಟೆಕ್‌ ಝೋನ್‌ ಹಾಗೂ ಕೋರ್‌ ಮೈಂಡ್‌ ಪರ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಕೆರೆಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ₹117 ಕೋಟಿ ದಂಡ ವಿಧಿಸಿ ಎನ್‌ಜಿಟಿ ನೀಡಿದ್ದ ಆದೇಶ ರದ್ದತಿ ಕೋರಿದ್ದ ಈ ಕಂಪನಿಗಳು ದಂಡ ಭರಿಸುವುದು ಅನಿವಾರ್ಯವಾಗಲಿದೆ.

ಬಫರ್‌ ವಲಯದ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಎನ್‌ಜಿಟಿ ಸೂಚಿಸಿದ್ದರಿಂದ, ಮನೆ ಕಳೆದುಕೊಳ್ಳುವ ಆತಂಕದಲ್ಲಿದ್ದ 30,000ಕ್ಕೂ ಅಧಿಕ ನಿವಾಸಿಗಳು ಮತ್ತು ರಿಯಲ್‌ ಎಸ್ಟೇಟ್‌ ಕಂಪನಿಗಳು ಈ ತೀರ್ಪಿನಿಂದ ನಿರಾಳವಾದಂತಾಗಿದೆ.

ಜಲಮೂಲಗಳಾದ ಕೆರೆಗಳ ಆಸುಪಾಸಿನಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣದಂತಹ ಯೋಜನೆ ಕೈಗೆತ್ತಿಕೊಂಡಲ್ಲಿ, ಖಂಡಿತವಾಗಿಯೂ ಪರಿಸರದ ಮೇಲೆ ಪ್ರತಿಕೂಲ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಬೆಳ್ಳಂದೂರು ಮತ್ತು ಅಗರ ಕೆರೆಗಳ ಸಂರಕ್ಷಿತ ವಲಯದಲ್ಲಿ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್, ಹೋಟೆಲ್, ಕಾರ್‌ ಪಾರ್ಕಿಂಗ್‌ ಸಂಕಿರಣ, ವಾಣಿಜ್ಯ ಸಂಬಂಧಿ ಮತ್ತು ವಸತಿ ಸಮುಚ್ಛಯ ನಿರ್ಮಿಸಿದಲ್ಲಿ ಪರಿಸರದ ಮೇಲೆ ಭಾರಿ ಹೊಡೆತ ಉಂಟಾಗಲಿದೆ ಎಂಬ ಎನ್‌ಜಿಟಿಯ ಅಭಿಪ್ರಾಯಕ್ಕೆ ನ್ಯಾಯಪೀಠವೂ ತನ್ನ ಸಮ್ಮತಿ ಸೂಚಿಸಿದೆ.

ಸ್ವಯಂ ಸೇವಾ ಸಂಸ್ಥೆಯಾದ ಫಾರ್ವರ್ಡ್‌ ಫೌಂಡೇಷನ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಎನ್‌ಜಿಟಿ ಪ್ರಧಾನ ಪೀಠವು, ಬೆಂಗಳೂರಿನ ಕೆರೆಗಳ ಸುತ್ತಲಿನ ಬಫರ್‌ ವಲಯಕ್ಕೆ ಸಂಬಂಧಿಸಿದಂತೆ ಮೊದಲಿದ್ದ 50 ಮೀಟರ್‌, 35 ಮೀಟರ್‌ ಹಾಗೂ ರಾಜಕಾಲುವೆಗಳ 25 ಮೀಟರ್‌ ವ್ಯಾಪ್ತಿಯನ್ನು 75 ಮೀಟರ್‌ಗೆ ವಿಸ್ತರಿಸಿ ಆದೇಶ ನೀಡಿತ್ತು.

ಎನ್‌ಜಿಟಿ ಆದೇಶದ ಅನ್ವಯ ಕೆರೆಗಳ ಬಫರ್‌ ವಲಯದ ವ್ಯಾಪ್ತಿಯನ್ನು ಹೆಚ್ಚಿಸಿದಲ್ಲಿ ಕೆರೆಯ ಅಕ್ಕಪಕ್ಕದಲ್ಲಿನ ಶೇ 95ರಷ್ಟು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ. ಇದರಿಂದಾಗಿ ₹ 3 ಲಕ್ಷ ಕೋಟಿ ಪರಿಹಾರ ವಿತರಿಸಬೇಕಾಗುತ್ತದೆ ಎಂದು ತಿಳಿಸಿದ್ದ ರಾಜ್ಯ ಸರ್ಕಾರ, ಶಾಸನಸಭೆ ರೂಪಿಸಿರುವ ಕಾಯ್ದೆಯ ವಿರುದ್ಧ ಎನ್‌ಜಿಟಿಯು ಯಾವುದೇ ರೀತಿಯ ಆದೇಶ ಜಾರಿಗೊಳಿಸುವಂತಿಲ್ಲ ಎಂದು ಒತ್ತಿಹೇಳಿತ್ತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿ ಹಾಗೂ 1976ರ ಮುನಿಸಿಪಲ್‌ ಕಾರ್ಪೋರೇಷನ್‌ ಕಾಯ್ದೆಯ ಅನ್ವಯವೇ ಬೆಂಗಳೂರಿನ ಕೆರೆಗಳ ಸುತ್ತಲಿನ ಬಫರ್‌ ವಲಯ ವ್ಯಾಪ್ತಿಯನ್ನು ಹೊರತುಪಡಿಸಿಯೇ ಮಾಸ್ಟರ್‌ಪ್ಲಾನ್‌ ರೂಪಿಸಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು ಎಂದೂ ಸರ್ಕಾರ ವಾದ ಮಂಡಿಸಿತ್ತು.

ಎನ್‌ಜಿಟಿಯ ಕೆಲವು ಸಾಮಾನ್ಯ ನಿರ್ದೇಶನಗಳನ್ನು ವಜಾಗೊಳಿಸಿದಲ್ಲಿ ತಮ್ಮ ಆಕ್ಷೇಪ ಇಲ್ಲ ಎಂದು ಫಾರ್ವರ್ಡ್‌ ಫೌಂಡೇಷನ್‌ ಪರ ವಕೀಲ ಸಜ್ಜನ್‌ ಪೂವಯ್ಯ ಅವರು ತಿಳಿಸಿದ್ದಾಗಿ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಎನ್‌ಜಿಟಿಯು ಸೂಕ್ತ ಕಾಯ್ದೆ ಅಡಿ ಕೆರೆಗಳ ಬಫರ್‌ ವಲಯ ವಿಸ್ತರಿಸಿ ಆದೇಶ ನೀಡಿದೆ. ಸರ್ಕಾರವು ಎನ್‌ಜಿಟಿ ಆದೇಶವನ್ನು ಪೂರ್ವಾನ್ವಯ ಆಗದಂತೆ ಜಾರಿಗೊಳಿಸಿ ಕೆರೆಗಳ ರಕ್ಷಣೆಗೆ ಮುಂದಾಗಬಹುದಾಗಿದೆ ಎಂದೂ ಸಜ್ಜನ್‌ ಪೂವಯ್ಯ ತಮ್ಮ ವಾದದಲ್ಲಿ ತಿಳಿಸಿದ್ದರು.

‘ಆದೇಶದ ಪ್ರತಿ ಕೈಸೇರಿದ ಬಳಿಕ ಕಟ್ಟಡಗಳಿಗೆ ಅನುಮತಿ’

ಬೆಂಗಳೂರು: ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಬೆನ್ನಲ್ಲೇ ಮೀಸಲು ಪ್ರದೇಶದ ವಿವಾದಕ್ಕೆ ಸಿಲುಕಿದ್ದ ಕಟ್ಟಡಗಳಿಗೆ ಅನುಮತಿ ನೀಡಲು ಬಿಬಿಎಂಪಿ ಮುಂದಾಗಿದೆ.

‘ಎನ್‌ಜಿಟಿ ಆದೇಶದ ಪ್ರಕಾರ ಈ ಹಿಂದೆ ಮೀಸಲು ಪ್ರದೇಶದಲ್ಲಿವೆ ಎಂದು ಗುರುತಿಸಿದ್ದ ಕಟ್ಟಡಗಳಿಗೆ ಸುಪ್ರೀಂ ಕೋರ್ಟ್‌ನ ಆದೇಶ ಕೈಸೇರಿದ ಬಳಿಕ ಅನುಮತಿ ನೀಡುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

2016ರ ಮೇ 4ರಂದು ಎನ್‌ಜಿಟಿ ಆದೇಶ ಹೊರಡಿಸಿದ ಸಂದರ್ಭದಲ್ಲಿ ಬಿಬಿಎಂಪಿ ಈ ಹಿಂದಿನ ಮೀಸಲು ನಿಯಮಗಳ ಪ್ರಕಾರ 256 ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶಕ್ಕೆ ಸಂಬಂಧಿಸಿದ ಆದೇಶವನ್ನು ಎನ್‌ಜಿಟಿ ಪೂರ್ವಾನ್ವಯಗೊಳಿಸಿದ್ದರಿಂದ ಆ ಕಟ್ಟಡಗಳು ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಹಾಗಾಗಿ ನಿರ್ಮಾಣ ಕಾರ್ಯ ‍ಪೂರ್ಣಗೊಂಡ ಬಳಿಕವೂ ಅವುಗಳಿಗೆ ಪಾಲಿಕೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಿರಲಿಲ್ಲ. ಈ ಕಟ್ಟಡಗಳಲ್ಲಿ ಒಟ್ಟು 35,054 ಫ್ಲ್ಯಾಟ್‌ಗಳು ಅಥವಾ ಘಟಕಗಳು ಇದ್ದವು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 856.76 ಕಿ.ಮೀಗಳಷ್ಟು ಉದ್ದದ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳಿವೆ. ಎನ್‌ಜಿಟಿ ಆದೇಶದ ಪ್ರಕಾರ ಇವುಗಳಿಗೆ ಸುಮಾರು 11 ಸಾವಿರ ಎಕರೆಗಳಷ್ಟು ಹೆಚ್ಚುವರಿ ಮೀಸಲು ಪ್ರದೇಶವನ್ನು ಕಾಯ್ದುಕೊಳ್ಳಬೇಕಾಗಿತ್ತು. ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರೂಪಿಸಿದ್ದ 2015ರ ನಗರ ಮಹಾಯೋಜನೆ ಪ್ರಕಾರವೇ ಮೀಸಲು ಪ್ರದೇಶ ಬಿಡಬೇಕಾಗಿರುವುದರಿಂದ ಈ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿರುವವರು ನಿಟ್ಟುಸಿರು ಬಿಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT