ಬಾಹ್ಯಾಕಾಶದಲ್ಲಿ ವಿಪುಲ ಅವಕಾಶ: ಬೋಲ್ಡನ್‌

ಭಾನುವಾರ, ಮಾರ್ಚ್ 24, 2019
27 °C

ಬಾಹ್ಯಾಕಾಶದಲ್ಲಿ ವಿಪುಲ ಅವಕಾಶ: ಬೋಲ್ಡನ್‌

Published:
Updated:
Prajavani

ಬೆಂಗಳೂರು: ‘ಹೈಸ್ಕೂಲ್‌ನಲ್ಲಿದ್ದಾಗ ವಿಮಾನದ ಕುರಿತು ಭಯವಿತ್ತು. ಅದರ ಹತ್ತಿರಕ್ಕೂ ಹೋಗುತ್ತಿರಲಿಲ್ಲ. ಆದರೂ ತರಬೇತಿಗೆ ಸೇರಿಕೊಂಡೆ. ಏಳು ವರ್ಷದ ಬಳಿಕ ತರಬೇತಿ ವಿಮಾನ ಚಾಲಕನಾಗಿ ಆಯ್ಕೆಯಾದೆ...’

ನಾಸಾದ ಆಡಳಿತಗಾರರಾಗಿದ್ದ ಖಗೋಳ ವಿಜ್ಞಾನಿ ಚಾರ್ಲ್ಸ್ ಬೋಲ್ಡನ್ ವಿದ್ಯಾರ್ಥಿಗಳ ಎದುರು ಅನುಭವದ ಬುತ್ತಿ ಬಿಚ್ಚಿಟ್ಟ ಪರಿ ಇದು.

ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯವು ಅಮೆರಿಕಾ ರಾಯಭಾರಿ ಕಚೇರಿ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ನೀತಿ ನಿರೂಪಣೆ ಹಾಗೂ ಎಂಜಿನಿಯರಿಂಗ್‌ ಕ್ಷೇತ್ರದ ಮುಂದಿರುವ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಬಹಳ ಮುಖ್ಯ. ನಮ್ಮ ಸಂಸ್ಥೆಯ ಜತೆ ಬೇರೆ ಬೇರೆ ದೇಶಗಳ ಏಜೆನ್ಸಿಗಳು ಕೈಜೋಡಿ
ಸಿದ್ದರಿಂದ ಸಾಧನೆ ಸಾಧ್ಯವಾಯಿತು’ ಎಂದು ಹೇಳಿದರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಗಗನಯಾನಿಗಳಾಗಲು ವಿಪುಲ ಅವಕಾಶಗಳಿವೆ. ಇಸ್ರೊ ಗಗನಯಾತ್ರಿಗಳ ಆಯ್ಕೆಗೆ ಮುಂದಾಗಿದೆ. ನಾಸಾಕ್ಕೂ ಉತ್ಸಾಹಿ ಯುವಪಡೆ ಬೇಕು. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಇದೇ ವೇಳೆ ಅವರು ಬೇರೆ ಬೇರೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಆರ್‌ವಿ ಎಂಜಿನಿಯರಿಂಗ್ ಕಾಲೇಜು, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಬಿಎನ್‌ಎಂಐಟಿ, ನಿಟ್ಟೆ, ಪಿಇಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ಬಾಹ್ಯಾಕಾಶದಲ್ಲಿ ವಿಕಿರಣ ಶಕ್ತಿ ಹೆಚ್ಚಾಗಿರುವುದರಿಂದ ಮನುಷ್ಯನ ಪ್ರಾಣಕ್ಕೆ ಹಾನಿ ಆಗುವುದಿಲ್ಲವೇ’ ಎನ್ನುವ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಬೋಲ್ಡನ್, ‘ಅದು ತಪ್ಪು ಕಲ್ಪನೆ. ಆ ರೀತಿ ಏನೂ ಆಗುವುದಿಲ್ಲ. ಮೇಲೆ ಹೋದಂತೆ ಗುರುತ್ವಾಕರ್ಷಣೆ ಬಲ ಮಾತ್ರ ಕಡಿಮೆಯಾಗುತ್ತದೆ’ ಎಂದು ತಿಳಿಸಿದರು.

‘ಪೈಸ್ಯಾಟ್‌ ಉಪಗ್ರಹ ತಯಾರಿಕೆ‌ಗೆ ಸಂಬಂಧಿಸಿದಂತೆ ನಾಸಾದ ನೆರವು ಪಡೆದುಕೊಳ್ಳುವುದು ಹೇಗೆ’ ಎನ್ನುವ ಮತ್ತೊಬ್ಬ ವಿದ್ಯಾರ್ಥಿಯ ಪ್ರಶ್ನೆಗೆ, ‘ನಿಮ್ಮಲ್ಲಿಯೇ ಇಸ್ರೊದಂತಹ ಒಳ್ಳೆಯ ಸಂಸ್ಥೆ ಇದೆ. ಅದರ ನೆರವು ಪಡೆದುಕೊಳ್ಳಿ. ಪೈಸ್ಯಾಟ್‌ ಉಪಗ್ರಹದಿಂದ ದೇಶಕ್ಕೂ ಅನುಕೂಲವಾಗಲಿದೆ’ ಎಂದು ಉತ್ತರಿಸಿದರು.

ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಂ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !