ಭಾನುವಾರ, ಮಾರ್ಚ್ 7, 2021
21 °C
ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ವತಿಯಿಂದ ಅಖಿಲ ಭಾರತ ಜಾಥಾ, ಕೇಂದ್ರದ ವಿರುದ್ಧ ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ವಾಗ್ದಾಳಿ

ವಿದ್ಯಾರ್ಥಿ ಸಮುದಾಯ ಸಜ್ಜುಗೊಳಿಸಲು ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿದ್ಯಾರ್ಥಿ ಮತ್ತು ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಾ ಜನರ ದೈನಂದಿನ ಜೀವನದಲ್ಲಿ ದಾಳಿ ಮಾಡುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿ ಸಮುದಾಯ ಸಜ್ಜುಗೊಳಿಸುವ ನಿಟ್ಟಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಅಖಿಲ ಭಾರತ ಜಾಥಾ ಹಮ್ಮಿಕೊಂಡಿದೆ’ ಎಂದು ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ಹೇಳಿದರು.

ಜಾಥಾ ಮೂಲಕ ನೆರೆಯ ಆಂಧ್ರಪ್ರದೇಶದಿಂದ ಭಾನುವಾರ ರಾಜ್ಯ ಪ್ರವೇಶಿಸಿದ ಅವರು ನಗರದಲ್ಲಿ ಜಾಥಾ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ‘ಸೆಪ್ಟೆಂಬರ್ 4 ರಿಂದ 17ರ ವರೆಗೆ ನಡೆಯುವ ಈ ಜಾಥಾದಲ್ಲಿ ವಿವಿಧ ರಾಜ್ಯಗಳು ಮತ್ತು ಜಿಲ್ಲೆಯ ಕೇಂದ್ರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಭೇಟಿ ಮಾಡಲಾಗುತ್ತದೆ. ‘ತಾರತಮ್ಯವಿಲ್ಲದೇ ಗುಣಮಟ್ಟ ಮತ್ತು ವೈಜ್ಞಾನಿಕ ಶಿಕ್ಷಣ’ ಎಂಬ ಧ್ಯೇಯ ವಾಕ್ಯವನ್ನು ಈ ಜಾಥಾವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ’ ಎಂದು ತಿಳಿಸಿದರು.

‘ಎನ್.ಡಿ.ಎ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ವಿದ್ಯಾರ್ಥಿಗಳು ಮಾತ್ರವಲ್ಲದೆ ಇಡೀ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕಿದೆ. ನವ- ಉದಾರ ನೀತಿಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಮೋದಿ ಆಳ್ವಿಕೆಯು ಅಧಿಕಾರಕ್ಕೆ ಬಂದಂದಿನಿಂದ ತೀವ್ರಗೊಂಡಿದೆ’ ಎಂದರು.

‘ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಂಶೋಧನಾ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸೇರಿದಂತೆ ಸಾರ್ವಜನಿಕ ಕ್ಷೇತ್ರದ ಪ್ರತಿ ಕ್ಷೇತ್ರಕ್ಕೂ ಮಂಜೂರು ಮಾಡಲಾದ ಹಣದ ಪ್ರಮಾಣದಲ್ಲಿ ಭಾರಿ ಇಳಿಕೆ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಅಂಚಿನಲ್ಲಿರುವ, ಹಿಂದುಳಿದ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಗಳು ಮತ್ತು ಸೀಟ್ ಗಳನ್ನು ಕಡಿತ ಮಾಡುವ ಮೂಲಕ ಬಡವರನ್ನು ಉನ್ನತ ಶಿಕ್ಷಣದಿಂದ ವಂಚಿಸಲಾಗುತ್ತಿದೆ. ಸಾರ್ವಜನಿಕ ವಿಶ್ವವಿದ್ಯಾಲಯಗಳು ಸರ್ಕಾರದ ತೀವ್ರ ನಿರ್ಲಕ್ಷ್ಯಕ್ಕೆ ಬಲಿಯಾಗಿವೆ. ಜಿಯೋ ವಿಶ್ವವಿದ್ಯಾಲಯದಂತಹ ಕಾರ್ಪೊರೇಟ್ ಕಲ್ಪನೆಯ ಅಸ್ತಿತ್ವವೇ ಇಲ್ಲದ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡುವುದು ನವ ಉದಾರವಾದಿ ಮತ್ತು ಕೋಮುವಾದಿ ಒಲವಿನ ಸರ್ಕಾರ ಮಾಡುವ ಭಾವಾವೇಶದ ಪ್ರಯತ್ನವಾಗಿದೆ’ ಎಂದು ದೂರಿದರು.

ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ವಿ.ಅಂಬರೀಷ್ ಮಾತನಾಡಿ, ‘ಬಿಜೆಪಿ ನೇತೃತ್ವದ ಸರ್ಕಾರವು ಶಿಕ್ಷಣದ ವಾಣಿಜ್ಯೀಕರಣ, ಕೇಂದ್ರೀಕರಣ ಮತ್ತು ಕೋಮುವಾದೀಕರಣದ ನೀತಿಗಳನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ. ಹಿಂದಿನ ಯುಪಿಎ ಸರಕಾರದ ನವ- ಉದಾರ ಶಿಕ್ಷಣ ನೀತಿಗಳನ್ನು ಬಿಜೆಪಿ ಹೆಚ್ಚಿಸುತ್ತಿದೆ. ಇದು ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಿ ಮತ್ತು ಖಾಸಗಿ ಬಂಡವಾಳಕ್ಕೆ ಮಾರ್ಗಗಳನ್ನು ಹೆಚ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಎಸ್‌ಎಫ್‌ಐ ರಾಷ್ಟ್ರೀಯ ಉಪಾಧ್ಯಕ್ಷ ಉಚ್ಚಿ ಮಾಕಳಿ, ಜಿಲ್ಲಾ ಘಟಕದ ಸಂಚಾಲಕ ಸೋಮಶೇಖರ್, ಸಿಪಿಎಂ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು