ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಶ್ರೀ ಗದ್ದುಗೆಗೆ ನಮಿಸುತ್ತಿರುವ ಭಕ್ತರು

Last Updated 23 ಜನವರಿ 2019, 19:15 IST
ಅಕ್ಷರ ಗಾತ್ರ

ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿಗೆ ಬುಧವಾರ ಅಪಾರ ಸಂಖ್ಯೆಯ ಭಕ್ತರು ನಮಿಸಿದರು. ಮಂಗಳವಾರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದಿದ್ದವರೇ ಇವರಲ್ಲಿ ಹೆಚ್ಚಿದ್ದರು.

ಬೆಳಿಗ್ಗೆಯಿಂದಲೇ ಗದ್ದುಗೆಯ ದರ್ಶನಕ್ಕೆ ಧಾವಿಸಿ ಬಂದರು. ಸಂಜೆಯವರೆಗೂ ಭಕ್ತ ಸಂದಣಿ ಹೆಚ್ಚಿತ್ತು. ಸಮಾಧಿಯನ್ನು ಪೂರ್ಣವಾಗಿ ಹೂವುಗಳಿಂದ ಅಲಂಕರಿಸಿ ಮೇಲೆ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರ ಇಡಲಾಗಿದೆ. ಕ್ರಿಯಾ ಸಮಾಧಿ ಭವನದ ಮುಂದೆ ಬುಧವಾರವೂ ಪೊಲೀಸ್ ಬಂದೋಬಸ್ತ್ ಇತ್ತು.

ದಾವಣಗೆರೆಯ ಸಿದ್ಧಗಂಗಾ ವಿದ್ಯಾಲಯದ ಮೈದಾನದಲ್ಲಿ ಬುಧವಾರ 90 ಚದರ ಅಡಿ ವಿಸ್ತೀರ್ಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಬೃಹತ್ ರಂಗೋಲಿ ರಚಿಸಿದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸುತ್ತಲೂ ನೆರೆದು ಶ್ರದ್ಧಾಂಜಲಿ ಸಲ್ಲಿಸಿದರು
ದಾವಣಗೆರೆಯ ಸಿದ್ಧಗಂಗಾ ವಿದ್ಯಾಲಯದ ಮೈದಾನದಲ್ಲಿ ಬುಧವಾರ 90 ಚದರ ಅಡಿ ವಿಸ್ತೀರ್ಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಬೃಹತ್ ರಂಗೋಲಿ ರಚಿಸಿದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸುತ್ತಲೂ ನೆರೆದು ಶ್ರದ್ಧಾಂಜಲಿ ಸಲ್ಲಿಸಿದರು

ಸಮಾಧಿ ಮುಗಿಸಿ ರಾತ್ರಿ ಮಠದಲ್ಲಿ ಉಳಿದಿದ್ದ ರಾಜ್ಯದ ಬೇರೆ ಬೇರೆ ಭಾಗಗಳ ಭಕ್ತರು ಸಹ ಗದ್ದುಗೆಯ ದರ್ಶನ ಪಡೆದು ತಮ್ಮ ಊರುಗಳತ್ತ ಹೊರಡಲು ಸಜ್ಜಾಗುತ್ತಿದ್ದರು.

‘ಸ್ವಾಮೀಜಿ ಅಂತಿಮ ದರ್ಶನಕ್ಕೆ ಬರಲು ಸಾಧ್ಯವಾಗಲಿಲ್ಲ. ಲಕ್ಷಾಂತರ ಜನರ ನಡುವೆ ವಯಸ್ಸಾದ ನಮ್ಮಂತಹವರು ಓಡಾಡಲು ಸಾಧ್ಯವೂ ಆಗುವುದಿಲ್ಲ. ಈಗ ಗದ್ದುಗೆಯ ದರ್ಶನಕ್ಕೆ ಕುಟುಂಬ ಸಮೇತ ಬಂದಿದ್ದೇವೆ’ ಎಂದರು ಬೆಂಗಳೂರಿನ ಬಸವೇಶ್ವರ ನಗರದ ಚನ್ನಬಸಮ್ಮ.

ದರ್ಶನಕ್ಕೆ ಲಕ್ಷಾಂತರ ಜನರು ಬಂದ ಕಾರಣ ಮಠದ ಆವರಣದಲ್ಲಿ ದೂಳು ತುಂಬಿತ್ತು. ಆವರಣದ ರಸ್ತೆಗಳಲ್ಲಿ ಮಣ್ಣು ಹೆಚ್ಚಿತ್ತು. ವಿದ್ಯಾರ್ಥಿಗಳು ಈ ರಸ್ತೆಗಳನ್ನು ಸ್ವಚ್ಛ ಮಾಡಿದರು. ಶಿವಕುಮಾರ ಸ್ವಾಮೀಜಿ ಅವರು ಸಾರ್ವಜನಿಕರಿಗೆ ದರ್ಶನ ನೀಡಲು ಕುಳಿತುಕೊಳ್ಳುತ್ತಿದ್ದ ಮಂಜದ ಮೇಲೆ ಅವರ ಭಾವಚಿತ್ರವನ್ನು ಇಡಲಾಗಿತ್ತು. ಭಾವಚಿತ್ರಕ್ಕೆ ಭಕ್ತರು ನಮಿಸಿದರು. ತಮ್ಮ ಕಚೇರಿಯಲ್ಲಿ ಕುಳಿತ್ತಿದ್ದ ಸಿದ್ಧಲಿಂಗ ಸ್ವಾಮೀಜಿ ಅವರ ದರ್ಶನಕ್ಕೂ ಜನರು ಸಾಲುಗಟ್ಟಿ ನಿಂತಿದ್ದರು.

‘ಶಿವ ಸ್ಮರಣೆ’ ಜ.31ಕ್ಕೆ

ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿ ಜ.31ಕ್ಕೆ 11 ದಿನಗಳು ಆಗಲಿವೆ. ಅಂದು ಮಠದಲ್ಲಿ ಸಾಂಕೇತಿಕವಾಗಿ ‘ಶಿವ ಸ್ಮರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ದೊಡ್ಡಮಟ್ಟದಲ್ಲಿ ‘ಶಿವ ಸ್ಮರಣೆ’ ಹಮ್ಮಿಕೊಳ್ಳಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT