ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಂತ್ಯಕ್ಕೆ ಇಡೀ ಜಿಲ್ಲೆ ಬರ ಪೀಡಿತ ಘೋಷಣೆ

ಹೊಲಗಳಿಗೆ ತೆರಳಿ ಬೆಳೆ ಹಾನಿ ದಾಖಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ
Last Updated 6 ಡಿಸೆಂಬರ್ 2018, 13:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಈ ಮಾಸಂತ್ಯಕ್ಕೆ ಜಿಲ್ಲೆಯ ಐದೂ ತಾಲ್ಲೂಕುಗಳು ಬರಪೀಡಿತ ಘೋಷಣೆಯಾಗಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು ಪೂರೈಕೆ, ಮೇವು ವಿತರಣೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಲು ತಯಾರಿ ಮಾಡಿಕೊಳ್ಳಿ ಎಂದು ಅವರು ತಾಕೀತು ಮಾಡಿದರು.

ಗುರುವಾರ ನಡೆದ ಬರ ಪರಿಹಾರ ಕಾಮಗಾರಿ ಹಾಗೂ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಇಒ ಡಾ. .ಬಿ.ಸಿ ಸತೀಶ, ಜಿಲ್ಲೆ ಸಂಪೂರ್ಣ ಬರಪೀಡಿತ ಘೋಷಣೆಯಾದ ಕೆಲವೇ ದಿನಗಳಲ್ಲಿ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಲಿದೆ. ಆದ್ದರಿಂದ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ, ವರದಿ ತಯಾರಿಸಿಟ್ಟುಕೊಳ್ಳಿ ಎಂದು ತಾಕೀತು ಮಾಡಿದರು.

ಬರ ಪರಿಹಾರ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಿ. ಕುಡಿಯುವ ನೀರಿನ ಪೂರೈಕೆ ಮೊದಲ ಆದ್ಯತೆಯಾಗಲಿ. ಶಾಸಕರ ನೇತೃತ್ವದ ಕಾರ್ಯಪಡೆ ನೀಡಿರುವ ಕಾರ್ಯಯೋಜನೆಯನ್ನು ತಡವಿಲ್ಲದೆ ಅನುಷ್ಠಾನ ಮಾಡಿ. ಸಾಕಷ್ಟು ಪ್ರಮಾಣದಲ್ಲಿ ಮೇವು ಸಂಗ್ರಹಣೆ ಮಾಡಿ, ಅಗತ್ಯ ಇರುವೆಡೆ ಮೇವು ಬ್ಯಾಂಕ್ ಆರಂಭಿಸಿ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಶಾಸಕ ಸಿ.ಎಸ್. ಶಿವಳ್ಳಿ ಮಾತನಾಡಿ, ಕಾರ್ಯಪಡೆಗೆ ಬಂದಿರುವ ಅನುದಾನಕ್ಕೆ ಕ್ರಿಯಾ ಯೋಜನೆ ಈಗಾಗಲೇ ತಯಾರಿಸಲಾಗಿದೆ. ಖಾಸಗಿ ವ್ಯಕ್ತಿಗಳು ಕೊಳವೆ ಬಾವಿ ಕೊರೆಯಿಸಿದರೆ ನೀರು ಬರುತ್ತದೆ. ಆದರೆ, ಕಾರ್ಯಪಡೆಯ ಅನುದಾನದಲ್ಲಿ ತೋಡುವ ಕೊಳವೆ ಬಾವಿಯಲ್ಲಿ ನೀರೇ ಬರುವುದಿಲ್ಲ. ಭೂ ವಿಜ್ಞಾನಿಗಳು ಗುರುತಿಸಿದ ಸ್ಥಳದಲ್ಲಿಯೇ ಕೊಳವೆ ಬಾವಿ ತೋಡಿಸಿ, ಯಾವುದೇ ಕಾರಣಕ್ಕೂ ಅದು ವಿಫಲವಾಗಬಾರದು ಎಂದರು.

ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಡಿಸೆಂಬರ್ 20ರೊಳಗೆ ತುಂಬಿಸಲು ಕ್ರಮ ಕೈಗೊಳ್ಳಿ. ಆ ನೀರು ಎಷ್ಟು ದಿನಗಳ ವರೆಗೆ ಸಾಕಾಗುತ್ತದೆ ಎಂಬುದು ತಿಳಿದು, ಆ ನಂತರ ನೀರು ಪೂರೈಕೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಿ. ಕೊಳವೆ ಬಾವಿ ಕೊರೆಸಿದ ನಂತರ ತಕ್ಷಣ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಿ ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಶಿರೂರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಗೊರ್ಲ, ಉಪಾಧ್ಯಕ್ಷೆ ಸರೋಜಾ ಅಳಗವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT