ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ‘ವಾಟ್ಸ್‌ಆ್ಯಪ್’ ಕಾಪಿ!

ಮೊಬೈಲ್ ನೋಡಿ ಉತ್ತರ ಬರೆಯುತ್ತಿದ್ದ ಆರೋಪಿ * ವಿದ್ಯಾರ್ಥಿನಿ ವಿರುದ್ಧವೂ ಎಫ್‌ಐಆರ್
Last Updated 29 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಗರಾಜನಗರದ ಎಸ್‌ಜಿಪಿಟಿಎಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ನೋಡಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಮೊಹಮದ್ ಆಸೀಫ್ (21) ಎಂಬಾತ, ಕೊಠಡಿ ಮೇಲ್ವಿಚಾರಕರಿಗೆ ಸಿಕ್ಕಿ ಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.

ಬುಧವಾರ ಕನ್ನಡ ಪರೀಕ್ಷೆಗೆ ಹಾಜರಾಗಿದ್ದ ಆಸೀಫ್, ಪ್ರಶ್ನೆಪತ್ರಿಕೆ ಫೋಟೊ ತೆಗೆದು ತನ್ನ 17 ವರ್ಷದ ಸ್ನೇಹಿತೆಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ. ಸ್ವಲ್ಪ ಸಮಯದಲ್ಲೇ ಆಕೆ ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಳುಹಿಸಿದ್ದಳು. ಅದನ್ನು ನೋಡಿಕೊಂಡು ಆಸೀಫ್ ಉತ್ತರ ಬರೆಯುತ್ತಿದ್ದ. ಈ ವೇಳೆ ಕೊಠಡಿ ಮೇಲ್ವಿಚಾರಕ ಮಹಾಬಲೇಶ್ವರ ಭಟ್ ಅವರು ಆತನ ಕೃತ್ಯವನ್ನು ಪತ್ತೆ ಹಚ್ಚಿದ್ದರು.

ಚಡ್ಡಿ ಜೇಬಲ್ಲಿ ಮೊಬೈಲ್: ‘ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ತರುವಂತಿಲ್ಲ ಎಂದು ಪ್ರವೇಶ ಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಆಸೀಫ್ ಒಳಉಡುಪಿನಲ್ಲಿ (ಚಡ್ಡಿ) ಮೊಬೈಲನ್ನು ಇಟ್ಟುಕೊಂಡು ಕೊಠಡಿಗೆ ತೆರಳಿದ್ದ’ ಎಂದು ಬನಶಂಕರಿ ಪೊಲೀಸರು ಹೇಳಿದರು.

‘ನಾಲ್ಕು ಸಲ ಪರೀಕ್ಷೆ ಬರೆದರೂ ಉತ್ತೀರ್ಣನಾಗಿರಲಿಲ್ಲ. ಹೇಗಾದರೂ ಮಾಡಿ ಈ ಬಾರಿ ಪಾಸ್ ಆಗಲೇಬೇಕೆಂದು ಅಡ್ಡದಾರಿ ತುಳಿದಿದ್ದೆ’ ಎಂದು ಆಸೀಫ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

‘ಈ ಅಕ್ರಮದ ಕುರಿತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸುರೇಶ್ ನಾಯಕ್ ದೂರು ಕೊಟ್ಟಿದ್ದು, 1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 115(ಎ), ಅಪರಾಧ ಸಂಚು (120ಬಿ), ಸರ್ಕಾರದ ಆದೇಶ ಉಲ್ಲಂಘಿಸಿದ (188) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT